ADVERTISEMENT

ಸಿ.ಟಿ.ರವಿ, ಪ್ರತಾಪ ಸಿಂಹಗೆ ದಮ್ಮಿದ್ರೆ ಹೊಂದಾಣಿಕೆ ಮಾಡಿಕೊಂಡವರ ಹೆಸರೇಳಲಿ: ಕಾಂಗ್ರೆಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಜೂನ್ 2023, 9:22 IST
Last Updated 14 ಜೂನ್ 2023, 9:22 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ‍ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮತ್ತು ಸಂಸದ ಪ್ರತಾಪ ಸಿಂಹ ಅವರಿಗೆ ದಮ್ ಇದ್ರೆ, ತಾಕತ್ತಿದ್ರೆ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಂಡ ನಾಯಕರ ಹೆಸರೇಳಲಿ ಎಂದು ಕಾಂಗ್ರೆಸ್ ಸವಾಲು ಹಾಕಿದೆ.

‘ಕಾಂಗ್ರೆಸ್‌–ಬಿಜೆಪಿಯ ಹಿರಿಯ ನಾಯಕರೆಲ್ಲ ಹೊಂದಾಣಿಕೆ ರಾಜಕಾರಣ ಮಾಡಿಕೊಂಡಿದ್ದಾರೆಯೇ ಎಂಬ ಅನುಮಾನ ಮೂಡಿದ್ದು, ಬಿಜೆಪಿ ಸರ್ಕಾರದ ಮೇಲಿನ ಎಲ್ಲ ಆರೋಪಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತನಿಖೆಗೆ ಆದೇಶಿಸಬೇಕು’ ಎಂದು ಮೈಸೂರು–ಕೊಡಗು ಸಂಸದ ಪ್ರತಾಪ ಸಿಂಹ ಮಂಗಳವಾರ ಹೇಳಿಕೆ ನೀಡಿದ್ದರು.

ಪ್ರತಾಪ ಸಿಂಹ ಹೇಳಿಕೆ ಕುರಿತು ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ರಿಟೈರ್ಡ್ ಹರ್ಟ್ ಆಗಿರುವ ಸಿ.ಟಿ.ರವಿ ಅವರು ಈಗ ಸ್ವಪಕ್ಷದ ವಿರುದ್ಧವೇ ತಿರುಗಿ ಬಿದ್ದಿದ್ದಾರೆ, ಅವರ ಅರಣ್ಯ ರೋಧನಕ್ಕೆ ‍ಪ್ರತಾಪ ಸಿಂಹ ದನಿಗೂಡಿಸಿದ್ದಾರೆ. ಇಬ್ಬರಿಗೂ ದಮ್ಮು –ತಾಕತ್ತು ಇದ್ದರೆ ಹೊಂದಾಣಿಕೆ ಮಾಡಿಕೊಂಡ ತಮ್ಮ ಪಕ್ಷದ ನಾಯಕರ ಹೆಸರು ಹೇಳಿ ಆರೋಪಿಸಲಿ. ಅಂದಹಾಗೆ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದ ಕುಮಾರಸ್ವಾಮಿ ತಲೆ ಸವರಿಕೊಂಡು ನಗುತ್ತಿದ್ದಾರಂತೆ ಅಲ್ಲವೇ’ ಎಂದು ವ್ಯಂಗ್ಯವಾಡಿದೆ.

ADVERTISEMENT

‘ಹೊಸಬರಿಗೆ ಟಿಕೆಟ್ ನೀಡಿದವರನ್ನು ನೇಣಿಗೆ ಹಾಕಿ ಎಂಬ ಬಿಜೆಪಿ ಸಂಸದ ಜಿಗಜಿಣಗಿ ಹೇಳಿದ್ದಾರೆ. ಅದರಂತೆ ಈಗ ಯಾರನ್ನು ನೇಣಿಗೆ ಹಾಕುವಿರಿ? ಅಮಿತ್ ಶಾ ಅವರನ್ನೋ?, ಬಿ.ಎಲ್. ಸಂತೋಷರನ್ನೊ?, ಪ್ರಹ್ಲಾದ್ ಜೋಶಿಯವರನ್ನೋ?, ಪ್ರಧಾನಿ ಮೋದಿಯವರನ್ನೋ?, ಬೊಮ್ಮಾಯಿಯವರನ್ನೋ? ಹೊಣೆ ಯಾರು, ನೇಣುಗಂಬ ಯಾರಿಗೆ? ಸೋಲಿನ ನಾಯಕತ್ವ ವಹಿಸಿಕೊಳ್ಳುವವರು ಯಾರು? ಬಿಜೆಪಿಯಿಂದ ಉತ್ತರ ನಿರೀಕ್ಷಿಸಬಹುದೇ’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

‘ಬಿಜೆಪಿಯಲ್ಲಿ ಸೋಲಿನ ಅವಲೋಕನ ಚೆನ್ನಾಗಿಯೇ ನಡೆಯುತ್ತಿದೆ. ಬೊಮ್ಮಾಯಿ ಹಾಗೂ ಯಡಿಯೂರಪ್ಪ ಅವರನ್ನು ಪರೋಕ್ಷವಾಗಿ ಟಾರ್ಗೆಟ್ ಮಾಡುತ್ತಿರುವ ಪ್ರತಾಪ ಸಿಂಹ ಹಾಗೂ ಸಿ.ಟಿ.ರವಿ ಅವರ ಹೇಳಿಕೆಗಳ ಹಿಂದಿರುವುದು ಮತ್ತದೇ ಜೋಶಿ, ಸಂತೋಷ್ ಜೋಡಿ. ಸೋಲಿನ ನಂತರ ನಾಪತ್ತೆಯಾಗಿರುವ ಈ ಜೋಡಿ ತೆರೆಯ ಹಿಂದೆ ನಿಂತು ಕಲ್ಲು ಹೊಡೆಯುವ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ಕಾಂಗ್ರೆಸ್ ಆರೋಪಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.