ADVERTISEMENT

Karnataka Politics | ಕುಮಾರಸ್ವಾಮಿ ಸಿಟ್ಟು ಯಾರ ಮೇಲೆ?

ಬಿಜೆಪಿ ನಾಯಕರ ವಿರುದ್ಧ ಪದೇ ಪದೇ ಸಿಡಿಮಿಡಿ, ರಾಜಕೀಯ ಕುತೂಹಲ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2024, 0:30 IST
Last Updated 23 ಅಕ್ಟೋಬರ್ 2024, 0:30 IST
<div class="paragraphs"><p>ಎಚ್‌.ಡಿ.ಕುಮಾರಸ್ವಾಮಿ</p></div>

ಎಚ್‌.ಡಿ.ಕುಮಾರಸ್ವಾಮಿ

   

ಬೆಂಗಳೂರು: ‘ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಒಂದು ವಾರದಿಂದ ಬಿಜೆಪಿಯ ಕೆಲವು ನಾಯಕರ ವಿರುದ್ಧ ಸಿಟ್ಟಿಗೆದ್ದಿದ್ದಾರೆ. ತಮ್ಮ ತೀಕ್ಷ್ಣ ಹೇಳಿಕೆಗಳ ಮೂಲಕ ಅವರನ್ನು ಪದೇ ಪದೇ ಕುಟುಕುತ್ತಿದ್ದಾರೆ. ಅಷ್ಟಕ್ಕೂ ಕೇಂದ್ರ ಸಚಿವರ ಕೋಪಕ್ಕೆ ಕಾರಣರಾದ ಬಿಜೆಪಿಯ ನಾಯಕರು ಯಾರು?’ ಎನ್ನುವ ಕುತೂಹಲ ರಾಜಕೀಯ ವಲಯದಲ್ಲಿ ಮೂಡಿದೆ.

ಚನ್ನಪಟ್ಟಣ ಉಪಚುನಾವಣೆಯಲ್ಲಿ ಬಿಜೆಪಿಯ ಸಿ.ಪಿ.ಯೋಗೇಶ್ವರ್ ಅವರು ತಮ್ಮನ್ನೇ ಎನ್‌ಡಿಎ ಅಭ್ಯರ್ಥಿಯಾಗಿ ಘೋಷಿಸಬೇಕು ಎಂದು ಪಟ್ಟುಹಿಡಿದ ಬಳಿಕ ಕುಮಾರಸ್ವಾಮಿ ಅವರು ಮಾತಿನ ತುಪಾಕಿಯನ್ನು ಬಿಜೆಪಿ ನಾಯಕರತ್ತ ತಿರುಗಿಸಿದ್ದಾರೆ.

ADVERTISEMENT

'ಬಿಜೆಪಿಯಲ್ಲಿ ಇರುವಂತಹ ಕೆಲವೇ ಕೆಲವರೊಟ್ಟಿಗೆ ಕುಮಾರಸ್ವಾಮಿಗೆ ದೆಹಲಿ ಮಟ್ಟದಲ್ಲಿ ಉತ್ತಮ ಬಾಂಧವ್ಯ ಇದೆ. ಅವರಿಗೆ ಏನಾದರೂ ಸಮಸ್ಯೆ ಮಾಡಬೇಕು ಎಂದು ಪ್ರಯತ್ನಿಸುತ್ತಿದ್ದಾರೆ. ಕಾಂಗ್ರೆಸ್‌ ನಾಯಕರ ಜತೆಗೂ ಕೈಜೋಡಿಸಿದ್ದಾರೆ’ ಎಂದು ಭಾನುವಾರ ಹೇಳಿದ್ದ ಕುಮಾರಸ್ವಾಮಿ, ‘ಮೋದಿ ಮತ್ತು ಶಾ ಹೇಳಿದರೆಂದು ತಾವು ಇನ್ನೆಷ್ಟು ಬಗ್ಗಲು ಸಾಧ್ಯ’ ಎಂದು ತಮ್ಮ ಕಾರ್ಯಕರ್ತರೆದುರು ಮಂಗಳವಾರ ಅಸಹನೆ ವ್ಯಕ್ತಪಡಿಸಿದ್ದಾರೆ.

ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸುತ್ತಿರುವುದು ಬಿಜೆಪಿಯ ಒಕ್ಕಲಿಗ ನಾಯಕರಾದ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಸಿ.ಟಿ.ರವಿ, ಶೋಭಾ ಕರಂದ್ಲಾಜೆ ಮತ್ತಿತರರ ವಿರುದ್ಧ ಎನ್ನುವುದು ಆ ಪಕ್ಷದ ವಲಯದಲ್ಲಿ ಗುಟ್ಟಾಗಿ ಉಳಿದಿಲ್ಲ.

‘ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗ ನಾಯಕತ್ವವನ್ನು ಸಂಪೂರ್ಣವಾಗಿ ಕುಮಾರಸ್ವಾಮಿ ಅವರಿಗೇ ಧಾರೆ ಎರೆದುಕೊಟ್ಟರೆ ತಮ್ಮ ಅಸ್ತಿತ್ವ ಏನು’ ಎಂಬ ಪ್ರಶ್ನೆ ಈ ನಾಯಕರದು. ಹೀಗಾಗಿ ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿಯಿಂದೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಬೇಕು ಎಂಬ ಪಟ್ಟು ಈ ನಾಯಕರದು. ಇದು ಕುಮಾರಸ್ವಾಮಿ ಅವರನ್ನು ಸಿಟ್ಟಿಗೆಬ್ಬಿಸಿದೆ ಎಂದು ಬಿಜೆಪಿ ಮೂಲಗಳು ಹೇಳಿವೆ.

ಬಿಜೆಪಿಯಲ್ಲಿ ಆರ್‌.ಅಶೋಕ ಅವರು ಒಕ್ಕಲಿಗ ನಾಯಕರಾಗಿ ಪಕ್ಷಕ್ಕೆ ದೊಡ್ಡ ಮಟ್ಟದಲ್ಲಿ ಲಾಭ ತಂದುಕೊಡಲು ಸಾಧ್ಯವಾಗಿಲ್ಲ. ಮುಂಬರುವ ವರ್ಷಗಳಲ್ಲಿ ಅವರ ಪಾತ್ರ ಸೀಮಿತವಾಗಲಿದೆ. ರಾಮನಗರ ಉಸ್ತುವಾರಿ ಸಚಿವರಾಗಿದ್ದ ಅಶ್ವತ್ಥನಾರಾಯಣ ಅವರು ರಾಮನಗರ, ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯ ಭಾಗದಲ್ಲಿ ಒಕ್ಕಲಿಗ ನಾಯಕರಾಗಿ ಬೆಳೆಯುವ ಪ್ರಯತ್ನ ಮಾಡಿದ್ದರು. ಅದೇ ಕಾರಣಕ್ಕೆ ಅವರಿಗೆ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಸ್ಥಾನವನ್ನು ನೀಡಲಾಗಿತ್ತು. ಆದರೆ, ಅವರ ಯತ್ನ ಯಶ ಕೊಟ್ಟಿರಲಿಲ್ಲ. 

ಕಳೆದ ಲೋಕಸಭಾ ಚುನಾವಣೆಯಲ್ಲಿ ಹಳೇ ಮೈಸೂರು ಭಾಗದ ಬಹುತೇಕ ಸ್ಥಾನಗಳಲ್ಲಿ ಬಿಜೆಪಿಯ ಗೆಲುವಿಗೆ ಜೆಡಿಎಸ್ ಪಕ್ಷವೇ ಕಾರಣ ಎಂಬಂತೆ ಕುಮಾರಸ್ವಾಮಿ ಬಿಂಬಿಸಿಕೊಂಡಿದ್ದರು. ‘ಜೆಡಿಎಸ್‌ ಮಾತ್ರವಲ್ಲ ನಮ್ಮ ಶ್ರಮವೂ ಇತ್ತಲ್ಲ, ನಾವೂ ಕೆಲಸ ಮಾಡಿದ್ದೆವು’ ಎಂಬುದು ಬಿಜೆಪಿಯ ಒಕ್ಕಲಿಗರ ನಾಯಕರ ವಾದ. ಜೆಡಿಎಸ್‌ ಮತ್ತು ಕುಮಾರಸ್ವಾಮಿ ಅವರಿಗೆ ಪಕ್ಷದ ವರಿಷ್ಠರು ಮಣೆ ಹಾಕುತ್ತಾರೆ ಎಂಬ ಕಾರಣಕ್ಕೆ ಒಕ್ಕಲಿಗ ಸೀಮೆಯಲ್ಲಿ ತಾವು ಹೇಳಿದ್ದೇ ನಡೆಯಬೇಕು ಎಂಬ ಧೋರಣೆ ಕುಮಾರಸ್ವಾಮಿ ತಳೆದರೆ ಮುಂದಿನ ದಿನಗಳಲ್ಲಿ ತಮ್ಮ ರಾಜಕೀಯ ಭವಿಷ್ಯಕ್ಕೂ ಕುತ್ತಾಗಬಹುದು ಎಂಬ ಆತಂಕ ಬಿಜೆಪಿ ನಾಯಕರನ್ನು ಕಾಡಿದೆ ಎಂದು ಮೂಲಗಳು ಹೇಳಿವೆ.

‘ಚನ್ನಪಟ್ಟಣ ಜೆಡಿಎಸ್‌ ಕ್ಷೇತ್ರವೇ ಇರಬಹುದು. ಆದರೆ, ಈ ಹಂತದಲ್ಲಿ ಜೆಡಿಎಸ್‌ನಿಂದ ಯಾರು ಸ್ಪರ್ಧಿಸಿದರೂ ಗೆಲ್ಲುವುದು ಕಷ್ಟ. ಯೋಗೇಶ್ವರ್ ಅವರಿಗೆ ಗೆಲ್ಲುವ ಅವಕಾಶಗಳು ಹೆಚ್ಚಾಗಿವೆ. ಜೆಡಿಎಸ್‌ಗೆ ಕೊಟ್ಟು ನಾವು ಗೆಲ್ಲುವ ಅವಕಾಶ ಕಳೆದುಕೊಳ್ಳುವುದು ಬೇಡ. ಇಲ್ಲವಾದರೆ, ಅದು ಕಾಂಗ್ರೆಸ್‌ ಪಾಲಾಗುತ್ತದೆ. ಆದ್ದರಿಂದ ಯೋಗೇಶ್ವರ್ ಅವರಿಗೇ ಟಿಕೆಟ್‌ ನೀಡುವುದು ಸೂಕ್ತ ಎಂಬ ಅಭಿಪ್ರಾಯವನ್ನು ಈ ನಾಯಕರು ಪಕ್ಷದ ವರಿಷ್ಠರಿಗೆ ತಿಳಿಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

‘ಹಳೇ ಮೈಸೂರು ಭಾಗದಲ್ಲಿ ಪಕ್ಷದ ತಳಹದಿಯನ್ನು ವಿಸ್ತರಿಸಲು ಇರುವ ಅವಕಾಶವನ್ನು ಕಳೆದುಕೊಳ್ಳಬಾರದು. ಪಕ್ಷದ ವಿವಿಧ ಸಮುದಾಯಗಳ ನಾಯಕರ ಬೆಳವಣಿಗೆಗೂ ಅವಕಾಶ ನೀಡಬೇಕು’ ಎಂಬುದು ಬಿಜೆಪಿ ಒಕ್ಕಲಿಗರ ನಾಯಕರ ಅಭಿಪ್ರಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.