ADVERTISEMENT

2ನೇ ಪತ್ನಿ ವಿವರ ಬಚ್ಚಿಟ್ಟ ಆರೋಪ: HDK ವಿರುದ್ಧದ ದೂರು ವಜಾಗೊಳಿಸಿದ ನ್ಯಾಯಾಲಯ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2023, 15:27 IST
Last Updated 13 ನವೆಂಬರ್ 2023, 15:27 IST
<div class="paragraphs"><p>ಎಚ್‌.ಡಿ ಕುಮಾರಸ್ವಾಮಿ</p></div>

ಎಚ್‌.ಡಿ ಕುಮಾರಸ್ವಾಮಿ

   

(ಸಂಗ್ರಹ ಚಿತ್ರ)

ಬೆಂಗಳೂರು: ‘ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದ ಎಚ್.ಡಿ‌.ಕುಮಾರಸ್ವಾಮಿ ಅವರು, ಚುನಾವಣೆ ಸಮಯದಲ್ಲಿ ಪ್ರಮಾಣ ಪತ್ರ ಸಲ್ಲಿಸುವಾಗ ತಮ್ಮ ಎರಡನೇ ಪತ್ನಿ ಹಾಗೂ ಮಗಳ ವಿವರ ಬಚ್ಚಿಟ್ಟಿದ್ದಾರೆ’ ಎಂದು ಆರೋಪಿಸಲಾಗಿದ್ದ ಖಾಸಗಿ ದೂರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಜಾಗೊಳಿಸಿದೆ.

ADVERTISEMENT

ಈ ಸಂಬಂಧ, ‘ವಿಶ್ವ ಕನ್ನಡ ಸಮಾಜ‘ದ ಸಂಸ್ಥಾಪಕ ಎಸ್‌.ಆನಂದ ಸಲ್ಲಿಸಿದ್ದ ಖಾಸಗಿ ದೂರಿನ ವಿಚಾರಣೆ ನಡೆಸಿದ, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ‘ಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಜೆ.ಪ್ರೀತ್‌; ‘ದೂರುದಾರರ ಆರೋಪಗಳಿಗೆ ಆಧಾರವಿಲ್ಲ‘ ಎಂದು ಹೇಳಿದ್ದಾರೆ. 

‘ದೂರುದಾರರು ತಮ್ಮ ಆರೋಪಗಳನ್ನು ಸಾಬೀತುಪಡಿಸುವಂತಹ ಒಂದೇ ಒಂದು ತುಣುಕು ದಾಖಲೆಯನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಿಲ್ಲ. ಹೀಗಾಗಿ, ಅವರು ತಮ್ಮ ಆರೋಪ ಸಾಬೀತುಪಡಿಸುವಲ್ಲಿ ವಿಫಲವಾಗಿದ್ದಾರೆ. ಹೀಗಾಗಿ, ಐಪಿಸಿ ಕಲಂ 181 ರ ಅಡಿಯಲ್ಲಿ ಕುಮಾರಸ್ವಾಮಿ ಅವರು ಯಾವುದೇ ಅಪರಾಧ ಎಸಗಿಲ್ಲ‘ ಎಂದು ಆದೇಶದಲ್ಲಿ ವಿವರಿಸಲಾಗಿದೆ.

ದೂರಿನಲ್ಲಿ ಏನಿತ್ತು?: ‘ಕುಮಾರಸ್ವಾಮಿ ಅವರು 2018ರ ಮೇನಲ್ಲಿ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು. ನಾಮಪತ್ರ ಸಲ್ಲಿಕೆ ವೇಳೆ ಪ್ರಮಾಣಪತ್ರದಲ್ಲಿ ತಮ್ಮ ಎರಡನೇ ಪತ್ನಿ ರಾಧಿಕಾ ಕುಮಾರಸ್ವಾಮಿ ಮತ್ತು ಪುತ್ರಿ ಶಮಿಕಾ ಕುಮಾರಸ್ವಾಮಿ ಬಗ್ಗೆ ಚುನಾವನಾ ಆಯೋಗಕ್ಕೆ ಸುಳ್ಳು ಮಾಹಿತಿ ನೀಡಿದ್ದಾರೆ. ಇದು ಭಾರತೀಯ ದಂಡ ಸಂಹಿತೆ–1860ರ (ಐಪಿಸಿ) ಕಲಂ 181ರ (ಪ್ರಮಾಣ ಪತ್ರ ಸಲ್ಲಿಕೆಯಲ್ಲಿ ಸುಳ್ಳು ಹೇಳಿಕೆ) ಮತ್ತು ಜನಪ್ರತಿನಿಧಿ ಕಾಯ್ದೆ–1951ರ ಕಲಂ 125 ಎ (ತಪ್ಪು ಮಾಹಿತಿ ಒದಗಿಸುವುದು) ಅಡಿಯಲ್ಲಿನ ಅಪರಾಧವಾಗಿದೆ‘ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.