ಬೆಂಗಳೂರು: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಅಥವಾ ಅದಕ್ಕೆ ಅಧಿಕೃತವಾಗಿ ದೇಣಿಗೆ ಸಂಗ್ರಹಕ್ಕೆ ತಮ್ಮ ವಿರೋಧ ಇಲ್ಲ. ರಾಮ ಮಂದಿರ ನಿರ್ಮಾಣದ ಹೆಸರಿನಲ್ಲಿ ಹಣ ದುರ್ಬಳಕೆಗೆ ಮಾತ್ರ ವಿರೋಧವಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಜೆಡಿಎಸ್ ಪ್ರಧಾನ ಕಚೇರಿ ಜೆ.ಪಿ. ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾನು ಶಿವಮೊಗ್ಗದಲ್ಲಿ ನೀಡಿದ ಹೇಳಿಕೆ ಕುರಿತು ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಬೀದಿ ಬೀದಿಯಲ್ಲಿ ಹಣ ಸಂಗ್ರಹ ನಡೆಯುತ್ತಿದೆ. ಇದಕ್ಕೆ ಯಾರು ಹೊಣೆ ಮತ್ತು ಲೆಕ್ಕ ಕೊಡುವವರು ಯಾರು ಎಂಬುದು ನನ್ನ ಪ್ರಶ್ನೆ’ ಎಂದರು.
ದೇಣಿಗೆ ಕೊಡದವರ ಮನೆಗಳಿಗೆ ಸ್ಟಿಕ್ಕರ್ ಅಂಟಿಸುತ್ತಿರುವುದನ್ನು ಒಪ್ಪಿಕೊಂಡಿದ್ದಾರೆ. ದೇಣಿಗೆ ಕೊಡುವಂತೆ ಜನರನ್ನು ಪ್ರೇರೇಪಿಸಬೇಕೆಂಬ ಉದ್ದೇಶವಿದ್ದರೆ ಸಾರ್ವಜನಿಕ ಸ್ಥಳಗಳಲ್ಲಿ ಬ್ಯಾನರ್, ಫ್ಲೆಕ್ಸ್ ಅಳವಡಿಸಲಿ. ಮನೆಗೆ ಏಕೆ ಸ್ಟಿಕ್ಕರ್ ಅಂಟಿಸಬೇಕು ಎಂದು ಕೇಳಿದರು.
ಪೋಲಿ, ಪುಂಡರೆಲ್ಲ ವಿಶ್ವ ಹಿಂದೂ ಪರಿಷತ್ ಸದಸ್ಯರು ಎಂದು ಹೇಳಿಕೊಂಡು ಬೀದಿ, ಬೀದಿಗಳಲ್ಲಿ ರಾಮ ಮಂದಿರದ ಹೆಸರಿನಲ್ಲಿ ಹಣ ಸಂಗ್ರಹಿಸುತ್ತಿದ್ದಾರೆ. ಹೀಗೆ ಹಣ ವಸೂಲಿಗೆ ಸರ್ಕಾರದ ಅನುಮತಿ ಇದೆಯೆ? ಹಣ ಸಂಗ್ರಹಿಸುವ ವ್ಯಕ್ತಿಗಳಿಗೆ ವಿಶ್ವ ಹಿಂದೂ ಪರಿಷತ್ ಗುರುತಿನ ಚೀಟಿ ನೀಡಿದೆಯೆ? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
‘ಹಣ ದುರ್ಬಳಕೆ ಆಗದಂತೆ ತಡೆಯಿರಿ ಎಂದು ಕೇಳುವುದು ಅಪರಾಧವೆ? 1989ರಲ್ಲಿ ರಾಮ ಮಂದಿರದ ಹೆಸರಿನಲ್ಲಿ ಸಂಗ್ರಹಿಸಿದ ಹಣ, ಇಟ್ಟಿಗೆ, ಸ್ಟೀಲ್ ಪ್ರಮಾಣ ಎಷ್ಟು? ಅದು ಏನಾಯಿತು? ಎಂಬ ಮಾಹಿತಿ ಈವರೆಗೂ ಹೊರಬಂದಿಲ್ಲ. ಮತ್ತೆ ಅದೇ ರೀತಿ ಆಗಬಾರದು ಎಂಬುದು ತಮ್ಮ ಉದ್ದೇಶ’ ಎಂದರು.
‘ಮೂರು ಜನರು ನನ್ನ ಮನೆಗೂ ದೇಣಿಗೆ ಸಂಗ್ರಹಕ್ಕೆ ಬಂದಿದ್ದರು. ದೇಣಿಗೆ ಕೊಡದಿರುವುದಕ್ಕೆ ಬೆದರಿಕೆಯ ಧಾಟಿಯಲ್ಲಿ ಮಾತನಾಡಬಾರದು. ಸಾಮಾನ್ಯ ಜನರ ಜತೆ ಈ ರೀತಿ ಚೆಲ್ಲಾಟ ಆಡಬಾರದು. ಧರ್ಮದ ಹೆಸರಿನಲ್ಲಿ ಭ್ರಷ್ಟಾಚಾರ ನಡೆಸಬಾರದು’ ಎಂದು ಹೇಳಿದರು.
ನಮ್ಮ ಪಕ್ಷದ ಹಲವಾರು ಮಂದಿ ದೇಣಿಗೆ ನೀಡಿದ್ದಾರೆ. ರಾಮ ಮಂದಿರ ನಿರ್ಮಾಣದ ಹೊಣೆ ಹೊತ್ತಿರುವ ಅಧಿಕೃತ ವ್ಯಕ್ತಿಗಳು ಅಥವಾ ಅವರ ಅಧಿಕೃತ ಪ್ರತಿನಿಧಿಗಳು ಸಂಪರ್ಕಿಸಿದರೆ ದೇಣಿಗೆ ನೀಡಲು ಸಿದ್ಧ ಎಂದು ತಿಳಿಸಿದರು.
ನಾಝಿ ಸಂಸ್ಕೃತಿ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಕೃತಿ ಒಂದೇ ಎಂಬುದು ಇತಿಹಾಸ ತಜ್ಞರ ಅಭಿಪ್ರಾಯ. ಅದನ್ನೇ ಪತ್ರಿಕಾಗೋಷ್ಠಿಯಲ್ಲಿ ಉಲ್ಲೇಖಿಸಿದ್ದೇನೆ. ಆರ್ ಎಸ್ ಎಸ್ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸಂಘಟನೆಯೆ? ದೇಶಕ್ಕಾಗಿ ಶ್ರಮಿಸಿದ ಜನರ ಬಗ್ಗೆ ಈ ಸಂಘಟನೆ ಹೇಗೆಲ್ಲಾ ಅಪಪ್ರಚಾರ ಮಾಡುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದರು.
ಅಘೋಷಿತ ತುರ್ತು ಪರಿಸ್ಥಿತಿ: ದೇಶದಲ್ಲಿ ಈಗ ಅಘೋಷಿತ ತುರ್ತು ಪರಿಸ್ಥಿತಿ ಜಾರಿಯಲ್ಲಿದೆ. ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿದರೆ ದೇಶದ್ರೋಹಿಗಳು ಎಂದು ಬಿಂಬಿಸುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಎಲ್ಲದಕ್ಕೂ ಅಂತಿಮ ಇದ್ದೇ ಇದೆ. ಪರ್ಯಾಯ ರಾಜಕೀಯ ಶಕ್ತಿ ಇಲ್ಲ ಎಂದು ಈಗ ಅನಿಸಬಹುದು. ಹಿಂದೆಯೂ ಇಂದಿರಾ ಗಾಂಧಿಯವರು ತುರ್ತು ಪರಿಸ್ಥಿತಿ ಹೇರಿದಾಗಲೂ ಇದೇ ವಾತಾವರಣ ಇತ್ತು ಎಂದರು.
ಪರಿಸರ ಹೋರಾಟಗಾರ್ತಿ ದಿಶಾ ರವಿ ಬಂಧನ ಕುರಿತು ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ‘ಬಡವರ ಪರವಾಗಿ ಹೋರಾಟ ನಡೆಸುತ್ತಿದ್ದ ಹೆಣ್ಣು ಮಗಳು ದೇಶದ ವಿರುದ್ಧ ಮಾತನಾಡುತ್ತಾರಾ ಎಂಬ ಅನುಮಾನ ಇದೆ. ಟೂಲ್‌ಕಿಟ್ ನಂತಹ ಚಟುವಟಿಕೆಗಳನ್ನು ನಿಷೇಧಿಸುವ ಅಧಿಕಾರ ಕೇಂದ್ರ ಸರ್ಕಾರದ ಬಳಿ ಇರಲಿಲ್ಲವೆ’ ಎಂದು ಕೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.