ಬೆಂಗಳೂರು: ಹಿಜಾಬ್ ನಿಷೇಧ ಹಿಂಪಡೆಯಲು ಸೂಚಿಸಿದ್ದೇನೆ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಯತ್ನಾಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಜಾಬ್ ಧರಿಸಬಹುದು ಎಂದು ಹೇಳುವುದರ ಜೊತೆಗೆ ಯಾರು ಯಾವ ಬಟ್ಟೆಯನ್ನಾದರೂ ಧರಿಸಲು ಅವಕಾಶವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಆದ್ದರಿಂದ ರಾಜ್ಯದಾದ್ಯಂತ ಶಾಲಾ ಕಾಲೇಜುಗಳಲ್ಲಿ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ತರಗತಿಗಳಲ್ಲಿ ಭಾಗವಹಿಸಲು ನಾನು ಕರೆ ಕೊಡುತ್ತಿದ್ದೇನೆ. ಅವರಿಗಿಲ್ಲದ ಸಮವಸ್ತ್ರ ನೀತಿ ಹಿಂದೂಗಳಿಗೂ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಸಿದ್ದರಾಮಯ್ಯನವರಿಗೆ ಮಾಹಿತಿಯ ಕೊರತೆ ಇದೆ, ರಾಜ್ಯದಲ್ಲಿ ಹಿಜಾಬ್ ನಿಷೇಧಿಸಿ ಯಾವ ಆದೇಶವೂ ಇಲ್ಲ. ಶಾಲಾ–ಕಾಲೇಜುಗಳಲ್ಲಿ ಸಮವಸ್ತ್ರ ನೀತಿಯನ್ನು ಕರ್ನಾಟಕ ಉಚ್ಚ ನ್ಯಾಯಾಲಯ ಜಾರಿಗೊಳಿಸಿದ್ದು, ಸ್ಥಳೀಯ ಕಾಲೇಜುಗಳು ನಿರ್ಧಾರ ಮಾಡಬಹುದು ಎಂದು ತಿಳಿಸಿದೆ. ರಾಜಕಾರಣಕ್ಕಾಗಿ ಶಾಲಾ ಕಾಲೇಜುಗಳ ಸಮವಸ್ತ್ರ ನೀತಿಯನ್ನೂ ಅಮಾನತು ಮಾಡುವ ಕೆಲಸವನ್ನು ಸಿದ್ದರಾಮಯ್ಯನವರು ಮಾಡುತ್ತಿದ್ದಾರೆ ಎಂದು ಯತ್ನಾಳ ಕಿಡಿಕಾರಿದ್ದಾರೆ.
ಓಲೈಕೆ ರಾಜಕಾರಣಕ್ಕೆ ಏನಾದರೂ ಮತ್ತೊಂದು ಹೆಸರು ಇದ್ದರೆ ಅದು ಕಾಂಗ್ರೆಸ್ ಪಕ್ಷ. ರಾಜ್ಯದಾದ್ಯಂತ ಹಿಂದೂ ವಿದ್ಯಾರ್ಥಿಗಳು ಯಾವ ಬಟ್ಟೆಯಾದರೂ ಧರಿಸಿ ಕೇಸರಿ ಶಾಲು ಸಮೇತ ತರಗತಿಗಳಲ್ಲಿ ಭಾಗವಹಿಸುತ್ತಾರೆ, ಅವರಿಗೆ ಯಾವ ಕಿರುಕುಳ ನೀಡಬಾರದು ಎಂದು ಆಗ್ರಹಿಸುತ್ತಿದ್ದೇನೆ ಎಂದು ಯತ್ನಾಳ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.