ಬೆಂಗಳೂರು: ಸಂವಿಧಾನದ ಬದಲಾವಣೆಗೆ ಕುರಿತು ಬಿಜೆಪಿ ಸಂಸದ ಅನಂತಕುಮಾರ ಹೆಗಡೆ ನೀಡಿರುವ ಹೇಳಿಕೆಯನ್ನು ಉಪ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತೀವ್ರವಾಗಿ ಖಂಡಿಸಿದ್ದಾರೆ.
ಅನಂತಕುಮಾರ ಹೆಗಡೆ ಹೇಳಿಕೆ ಪ್ರಸ್ತಾಪಿಸಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಡಿಕೆಶಿ, ‘ಸಂವಿಧಾನವನ್ನೇ ಬದಲಾಯಿಸುತ್ತೇವೆ ಎನ್ನುವ ಸಂಸದ ಅನಂತ ಕುಮಾರ ಹೆಗಡೆ ಅವರ ಹೇಳಿಕೆ ನೋಡಿದರೆ ಬಿಜೆಪಿ ಅಜೆಂಡಾದಲ್ಲಿ ಅದ್ಯಾವ ಪರಿ ವಿಷ ತುಂಬಿಕೊಂಡಿದೆ ಎಂಬುದರ ಸ್ಯಾಂಪಲ್ ಸಿಕ್ಕಂತಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯಗಳನ್ನು ನಾಶ ಮಾಡುವುದೇ ಬಿಜೆಪಿಯ ಗುರಿ. ಕರ್ನಾಟಕದ ಮತದಾರರೇ ಎಚ್ಚರದಿಂದಿರಿ’ ಎಂದು ಕರೆ ನೀಡಿದ್ದಾರೆ.
ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಅನಂತಕುಮಾರ್ ಹೆಗಡೆ, ‘ಹಿಂದೂ ಧರ್ಮವನ್ನು ರಕ್ಷಿಸಬೇಕಾದರೆ ಸಂವಿಧಾನವನ್ನು ಬದಲಾಯಿಸಬೇಕು. ಅದಕ್ಕಾಗಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 400 ಸ್ಥಾನಗಳನ್ನು ಗೆಲ್ಲಿಸಿಕೊಡಬೇಕು’ ಎಂದು ಹೇಳಿದ್ದರು.
‘ಸಂವಿಧಾನ ಬದಲಾವಣೆಯ ಮಾತು ಆಡಿರುವ ಬಿಜೆಪಿ ಸಂಸದ ಅನಂತಕುಮಾರ ಹೆಗಡೆ ಅವರನ್ನು ಚುನಾವಣಾ ಸ್ಪರ್ಧೆಯಿಂದ ಶಾಶ್ವತವಾಗಿ ಅನರ್ಹಗೊಳಿಸಬೇಕು. ಹೆಗಡೆ ಅವರ ಅಭಿಪ್ರಾಯವನ್ನು ಪ್ರಧಾನಿ ನರೇಂದ್ರ ಮೋದಿ ಒಪ್ಪದೆ ಇದ್ದರೆ, ಹೆಗಡೆಯವರನ್ನು ಪಕ್ಷದಿಂದಲೇ ಕಿತ್ತುಹಾಕಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
‘ಸಂವಿಧಾನವನ್ನು ಬದಲಾಯಿಸುವ ಬಗ್ಗೆ ಅನಂತಕುಮಾರ್ ಹೆಗಡೆ ಕರೆ ನೀಡಿರುವುದು ಅವರ ವೈಯಕ್ತಿಕ ಹೇಳಿಕೆ ಅಲ್ಲ. ಬಿಜೆಪಿಯ ರಹಸ್ಯ ಕಾರ್ಯಸೂಚಿಯ ಭಾಗ’ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಕಾರವಾರ: ಸಂವಿಧಾನ ತಿದ್ದುಪಡಿ ಮಾಡುವ ಮಾತುಗಳನ್ನಾಡಿರುವ ಸಂಸದ ಅನಂತಕುಮಾರ ಹೆಗಡೆ ಅವರನ್ನು ಬಿಜೆಪಿ ತಕ್ಷಣ ಉಚ್ಚಾಟಿಸಲಿ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ ವೈದ್ಯ ಹೇಳಿದರು.
'ಅನಂತಕುಮಾರ ಅವರನ್ನು ಪಕ್ಷದಿಂದ ಉಚ್ಛಾಟಿಸದಿದ್ದರೆ ಬಿಜೆಪಿಗೆ ಸಂವಿಧಾನ ಬದಲಿಸುವ ರಹಸ್ಯ ಕಾರ್ಯಸೂಚಿ ಹೊಂದಿದೆ ಎಂಬುದು ಸ್ಪಷ್ಟವಾದಂತೆ' ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.