ADVERTISEMENT

ಅಂಬೇಡ್ಕರ್ ಶವಸಂಸ್ಕಾರಕ್ಕೆ ಕಾಂಗ್ರೆಸ್‌ ಬೇಕಂತಲೇ ಜಾಗ ಕೊಡಲಿಲ್ಲ: ಬಿಜೆಪಿ ಟೀಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಡಿಸೆಂಬರ್ 2022, 10:36 IST
Last Updated 6 ಡಿಸೆಂಬರ್ 2022, 10:36 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಅನ್ಯಾಯ ಮಾಡಿದೆ ಎಂದು ಬಿಜೆಪಿ ವಾಗ್ದಾಳಿ ನಡೆದಿದೆ.

#ದಲಿತವಿರೋಧಿಕಾಂಗ್ರೆಸ್ ಎಂಬ ಹ್ಯಾಷ್‌ಟ್ಯಾಗ್‌ನಡಿಯಲ್ಲಿ ಸರಣಿ ಟ್ವೀಟ್‌ ಮಾಡಿರುವ ಬಿಜೆಪಿ, ‘ಕಾಂಗ್ರೆಸ್ ವಿರುದ್ಧ ಆರೋಪಗಳ ಸುರಿಮಳೆಗೈದಿದೆ.

‘ಬಾಬಾ ಸಾಹೇಬರಿಗೆ ಕಾಂಗ್ರೆಸ್ ಮಾಡಿದ ಅನ್ಯಾಯದ ಇತಿಹಾಸ ಇಂತಿದೆ. ಅಂಬೇಡ್ಕರ್‌ ಅವರನ್ನು ಚುನಾವಣೆಯಲ್ಲಿ ಸೋಲಿಸಿದರು, ಅಂಬೇಡ್ಕರ್‌ ಅಂತ್ಯಸಂಸ್ಕಾರಕ್ಕೆ ಭೂಮಿ ನೀಡಲು ನಿರಾಕರಿಸಿದರು, ಅಂಬೇಡ್ಕರ್‌ ಅವರನ್ನು ಬಿಟ್ಟು, ತಮಗೆ ತಾವೇ ಭಾರತ ರತ್ನ ಘೋಷಿಸಿದರು, ತುರ್ತುಪರಿಸ್ಥಿತಿ ಹೇರಿ ಸಂವಿಧಾನ ಆಶಯಕ್ಕೆ ಕೊಳ್ಳಿ ಇಟ್ಟರು’ ಎಂದು ಬಿಜೆಪಿ ಆರೋಪಿಸಿದೆ.

ADVERTISEMENT

‘ಮುಂಬೈ ನಾರ್ತ್‌ ಸೆಂಟ್ರಲ್‌ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದ ಅಂಬೇಡ್ಕರ್ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಿ, ಕುತಂತ್ರದಿಂದ ಸೋಲಿಸಿದ್ದು ಇದೇ ಕಾಂಗ್ರೆಸ್. ಆದರೆ, ಈಗ ತನ್ನ ಅಸ್ತಿತ್ವಕ್ಕಾಗಿ ಕಾಂಗ್ರೆಸ್ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಅದೇ‌ ಅಂಬೇಡ್ಕರ್ ಹೆಸರು ಬಳಸಿಕೊಳ್ಳುತ್ತಿದೆ’ ಎಂದು ಬಿಜೆಪಿ ದೂರಿದೆ.

‘ಕಾಂಗ್ರೆಸ್ ಸಂವಿಧಾನ ವಿರೋಧಿ ಎಂಬ ಕಾರಣಕ್ಕೇ ಅಂಬೇಡ್ಕರ್ ಕಾಂಗ್ರೆಸ್‌ನ್ನು‌ ತ್ಯಜಿಸಿದ್ದು. ಕಾಂಗ್ರೆಸ್‌ ಸೇರುವುದೆಂದರೆ, ಅದು ಆತ್ಮಹತ್ಯೆ ಮಾಡಿಕೊಂಡಂತೆ ಎಂಬ ಅಂಬೇಡ್ಕರ್ ಮಾತು ಇಲ್ಲಿ ಉಲ್ಲೇಖಾರ್ಹ. ನಮ್ಮನ್ನೇ ಬಿಟ್ಟ ನಿಮಗೆ ಸೋಲೇ ಖಚಿತ ಎಂದು ಸಂವಿಧಾನ ಶಿಲ್ಪಿಯ ವಿರುದ್ಧ ಕಾಂಗ್ರೆಸ್ ಕುತಂತ್ರ ಮಾಡಿತ್ತು’ ಎಂದು ಬಿಜೆಪಿ ಟೀಕಿಸಿದೆ.

‘ನೆಹರೂ ಸಮಾಧಿಗೆ 52 ಎಕರೆಗೂ ಹೆಚ್ಚು ಜಾಗ ಕೊಟ್ಟ ಕಾಂಗ್ರೆಸ್‌ಗೆ ಡಾ.ಅಂಬೇಡ್ಕರ್ ಅವರ ಶವಸಂಸ್ಕಾರಕ್ಕೂ 6 ಅಡಿ ಜಾಗವನ್ನು ದೆಹಲಿಯಲ್ಲಿ ಬೇಕಂತಲೇ ಕೊಡಲಿಲ್ಲ. ದೇಶದ ಬಡವರಿಗೆ ಬದುಕುವ ಹಕ್ಕು ಕೊಟ್ಟ ಅಂಬೇಡ್ಕರ್‌ ಅವರ ಅಂತಿಮ ಸಂಸ್ಕಾರವನ್ನು ಗೌರವದಿಂದ ನಡೆಸಲೂ ಬಿಡದೆ ಕಾಂಗ್ರೆಸ್ ಅವಮಾನಿಸಿದ್ದನ್ನು ಜನರುಮರೆತಿಲ್ಲ’ಎಂದು ಬಿಜೆಪಿ ಹೇಳಿದೆ.

‘ಸಂವಿಧಾನ ಶಿಲ್ಪಿ ಅಂಬೇಡ್ಕರ್‌ಗೆ ಭಾರತ ರತ್ನ ನೀಡಲು ಕಾಂಗ್ರೆಸ್‌ ಹಿಂದೆ ಮುಂದೆ ನೋಡಿತ್ತು. ಆದರೆ, ಅದಾಗಲೇ ನೆಹರೂ, ಇಂದಿರಾ ಗಾಂಧಿ ತಮಗೆ ತಾವೇ ಭಾರತ ರತ್ನಕ್ಕೆ ಕೊರಳೊಡ್ಡಿದ್ದರು!. ಇಂಥ ಸಮಯದಲ್ಲೂ ಸಂವಿಧಾನ ಕೊಟ್ಟವರ ನೆನಪೂ ಆಗದ ಕಾಂಗ್ರೆಸ್‌ಗೆ ಈಗ ಅಂಬೇಡ್ಕರ್ ಜಪ ಕೇವಲ ಆಷಾಡಭೂತಿತನ ಅಷ್ಟೇ’ ಎಂದು ಬಿಜೆಪಿ ಕಿಡಿಕಾರಿದೆ.

‘ಅಂಬೇಡ್ಕರ್ ಕರ್ನಾಟಕದಲ್ಲಿ ಭೇಟಿ ನೀಡಿದ 10 ಪ್ರಮುಖ ಸ್ಥಳಗಳ ಅಭಿವೃದ್ಧಿಗೆ 70 ವರ್ಷಗಳಲ್ಲಿ ಕಾಂಗ್ರೆಸ್ ಮುಂದಾಗಲಿಲ್ಲ. ಅದಕ್ಕೆ ಬಿಜೆಪಿಯೇ ಬರಬೇಕಾಯಿತು‌. ಅತೀ ಹೆಚ್ಚು ದಲಿತರನ್ನು ಗೆಲ್ಲಿಸಿ ಕೇಂದ್ರ ಸಂಪುಟದಲ್ಲಿರಿಸಿದ್ದು ಬಿಜೆಪಿ. 70 ವರ್ಷ ದಲಿತರ ಮೀಸಲು ಹೆಚ್ಚಳ ಮಾಡಲಿಲ್ಲ. ಬಿಜೆಪಿಯೇ ಬಂದು ಮೀಸಲು ಕೊಡಬೇಕಾಯಿತು’ ಎಂದು ಬಿಜೆಪಿ ಹೇಳಿದೆ.

‘ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370ನೇ ವಿಧಿ ತೆಗೆಯಬೇಕು ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಅಂದೇ ಹೇಳಿದ್ದರು. ಆದರೆ ಕಾಂಗ್ರೆಸ್ ಪಕ್ಷ ಅವರ ಆಶಯವನ್ನು ಗೌರವಿಸದೇ ಆರ್ಟಿಕಲ್ 370ನೇ ವಿಧಿಯನ್ನು 70 ವರ್ಷ ಮುಂದುವರಿಸಿದರು. ಬಾಬಾ ಸಾಹೇಬರ ಆ ಆಶಯವನ್ನು ನನಸು ಮಾಡಿದ್ದು ಮೋದಿ ಸರ್ಕಾರ’ ಎಂದು ಬಿಜೆಪಿ ಟ್ವೀಟ್ ಮಾಡಿದೆ.

‘ಮೋದಿ‌ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್‌ಗೆ ಸಂಬಂಧಿಸಿದ ಪ್ರಮುಖ 5 ಸ್ಥಳಗಳನ್ನು ಪಂಚತೀರ್ಥ ಎಂಬ ಹೆಸರಿನಲ್ಲಿ ಅಭಿವೃದ್ಧಿ ಮಾಡಿದೆ. ಅರ್ಥಪೂರ್ಣವಾದ ಸಂವಿಧಾನ ದಿನಾಚರಣೆ ಜಾರಿಗೆ ತಂದಿದೆ’ ಎಂದು ಬಿಜೆಪಿ ಬೆನ್ನು ತಟ್ಟಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.