ADVERTISEMENT

ಸಿದ್ದರಾಮಯ್ಯ, ಎಚ್‌ಡಿಕೆ ಅವಧಿಯ ಅವ್ಯವಹಾರದ ಕುರಿತು ತನಿಖೆಗೆ ಆದೇಶ: ವಿ.ಸೋಮಣ್ಣ

ಆಶ್ರಯ ಮನೆ ಯೋಜನೆಯಲ್ಲಿ ಅವ್ಯವಹಾರದ ಆರೋಪ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2019, 8:52 IST
Last Updated 6 ನವೆಂಬರ್ 2019, 8:52 IST
ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ
ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ   

ವಿಜಯಪುರ:ಸಿದ್ದರಾಮಯ್ಯ ಹಾಗೂ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಆಶ್ರಯ ಮನೆ ಯೋಜನೆಯಲ್ಲಿ ಅವ್ಯವಹಾರ ನಡೆದಿದ್ದು, ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ’ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.

ಆಲಮಟ್ಟಿಯಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವಧಿಯಲ್ಲಿ 14 ಲಕ್ಷ ಆಶ್ರಯ ಮನೆಗಳನ್ನು ನಿರ್ಮಿಸಲಾಗಿದೆ. ಆದರೆ, ಇವೆಲ್ಲ ಕೇವಲ ಕಡತದಲ್ಲಿವೆ. ಅರ್ಹ ಫಲಾನುಭವಿಗಳಿಗೆ ಮನೆಗಳು ಸಿಕ್ಕಿಲ್ಲ. ಎಲ್ಲವೂ ತಮಗೆ ಬೇಕಾದವರಿಗೆ, ಬೆಂಬಲಿಗರಿಗೆ, ಹಣ ಕೊಟ್ಟವರಿಗೆ ಕೊಡಲಾಗಿದೆ ಎಂಬ ದೂರುಗಳು ಬಂದಿವೆ. ಹೀಗಾಗಿ, ತನಿಖೆಗೆ ಆದೇಶಿಸಲಾಗಿದ್ದು, ನಾಲ್ಕು ದಿನಗಳಲ್ಲಿ ತನಿಖೆ ಆರಂಭವಾಗಲಿದೆ’ ಎಂದರು.

ನೆರೆ ಸಂತ್ರಸ್ತರ ಪರಿಹಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವರು, ‘ನೆರೆ ಸಂತ್ರಸ್ತರಿಗೆ ಬಿ.ಎಸ್.ಯಡಿಯೂರಪ್ಪ ನೀಡಿದಷ್ಟು ಪರಿಹಾರವನ್ನು ಯಾರೂ ನೀಡಿಲ್ಲ. ಬೇರೆ ರಾಜ್ಯಗಳಲ್ಲಿ ಪ್ರವಾಹದಿಂದ ಕುಸಿದ ಮನೆಗಳಿಗೆ ಕೇವಲ ₹ 1 ಲಕ್ಷ ಪರಿಹಾರ ನೀಡಲಾಗಿದೆ. ಆದರೆ, ಯಡಿಯೂರಪ್ಪ ₹ 5 ಲಕ್ಷ ಪರಿಹಾರ ಘೋಷಿಸಿದ್ದಾರೆ. ಈಗಾಗಲೇ ₹ 1 ಲಕ್ಷದವರೆಗೆ ಪರಿಹಾರ ನೀಡಲಾಗಿದೆ. ಹಣಕಾಸಿನ ಲೆಕ್ಕಾಚಾರ ನೋಡಿಕೊಂಡು ಹಂತಹಂತವಾಗಿ ನಿರಾಶ್ರಿತರಿಗೆ ಅನುಕೂಲ ಕಲ್ಪಿಸಲಾಗುವುದು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.