ADVERTISEMENT

ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡರ ಧರಣಿಯಿಂದ ಕೋಲಾಹಲ: ಪರಿಷತ್ ಕಲಾಪ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2021, 12:15 IST
Last Updated 21 ಸೆಪ್ಟೆಂಬರ್ 2021, 12:15 IST
ಮರಿತಿಬ್ಬೇಗೌಡ (ಸಂಗ್ರಹ ಚಿತ್ರ)
ಮರಿತಿಬ್ಬೇಗೌಡ (ಸಂಗ್ರಹ ಚಿತ್ರ)   

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಅನಧಿಕೃತವಾಗಿ ಬಳಸಿಕೊಂಡಿರುವ ರೈತರ ಜಮೀನುಗಳಿಗೆ ಪರಿಹಾರ ನೀಡುವ ಸಂಬಂಧ ಸಭೆಗೆ ಕಾಲಮಿತಿ ನಿಗದಿಪಡಿಸುವಂತೆ ಪಟ್ಟುಹಿಡಿದು ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ನಡೆಸಿದ್ದರಿಂದ ವಿಧಾನ ಪರಿಷತ್ ನಲ್ಲಿ ಮಂಗಳವಾರ ಕೋಲಾಹಲ ಸೃಷ್ಟಿಯಾಯಿತು. ಪರಿಸ್ಥಿತಿ ನಿಯಂತ್ರಣಕ್ಕೆ ಬಾರದ ಕಾರಣದಿಂದ ಸಭಾಪತಿ ಬಸವರಾಜ ಹೊರಟ್ಟಿ ಕಲಾಪವನ್ನು ಬುಧವಾರಕ್ಕೆ ಮುಂದೂಡಿದರು.

ಮಂಗಳವಾರ ಮಧ್ಯಾಹ್ನದ ಊಟದ ವಿರಾಮದ ಬಳಿಕ ಕಲಾಪ ಆರಂಭವಾದಾಗ ಮರಿತಿಬ್ಬೇಗೌಡ ಅವರು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವಿಷಯ ಕುರಿತು ಸರ್ಕಾರದ ಗಮನ ಸೆಳೆದರು. ಪ್ರಾಧಿಕಾರವು ಬಡಾವಣೆ ನಿರ್ಮಾಣಕ್ಕೆ ಅನಧಿಕೃತವಾಗಿ ಬಳಸಿಕೊಂಡಿರುವ ಜಮೀನುಗಳ ಮಾಲೀಕರಿಗೆ 15- 20 ವರ್ಷಗಳಿಂದ ಪರಿಹಾರ ನೀಡಿಲ್ಲ ಎಂದು ದೂರಿದರು.

ಉತ್ತರ ನೀಡಿದ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ, 'ಶೀಘ್ರದಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸಭೆ ನಡೆಸುವೆ. ತ್ವರಿತವಾಗಿ ಎಲ್ಲ ಪ್ರಕರಣಗಳ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳುವೆ' ಎಂದು ಭರವಸೆ ನೀಡಿದರು.

ಉತ್ತರದಿಂದ ತೃಪ್ತರಾಗದ ಮರಿತಿಬ್ಬೇಗೌಡ ಸಭೆಗೆ ಕಾಲಮಿತಿ ಪ್ರಕಟಿಸುವಂತೆ ಆಗ್ರಹಿಸಿದರು. ಸಚಿವರು ಈ ಬೇಡಿಕೆಯನ್ನು ಒಪ್ಪಲಿಲ್ಲ. ಸಭಾಪತಿ ಪೀಠದ ಎದುರು ಮರಿತಿಬ್ಬೇಗೌಡ ಧರಣಿ ಆರಂಭಿಸಿದರು. ಆಗ ಗದ್ದಲ ಸೃಷ್ಟಿಯಾಯಿತು. ಹತ್ತು ನಿಮಿಷ ಕಲಾಪ ಮುಂದೂಡಿದ ಸಭಾಪತಿ, ಸಂಧಾನಕ್ಕೆ ಯತ್ನಿಸಿದರು.

ಮತ್ತೆ ಕಲಾಪ ಆರಂಭವಾದಾಗ ಮರಿತಿಬ್ಬೇಗೌಡ ಅವರೊಂದಿಗೆ ಜೆಡಿಎಸ್ ನ ಇತರ ಸದಸ್ಯರೂ ಧರಣಿಯಲ್ಲಿದ್ದರು‌‌. 'ಸಮಯ ನಿಗದಿ ಸಾಧ್ಯವಿಲ್ಲ' ಎಂದು ಬೈರತಿ ಬಸವರಾಜ ಪುನರುಚ್ಛರಿಸಿದರು.

ತಮ್ಮ ಆಸನದ ಬಳಿ ತೆರಳಿದ ಮರಿತಿಬ್ಬೇಗೌಡ ಮಾತನಾಡಲು ಯತ್ನಿಸಿದರು. ಆಗ ಸಭಾಪತಿ ಆಕ್ಷೇಪಿಸಿದರು. ಸಿಟ್ಟಿಗೆದ್ದ ಮರಿತಿಬ್ಬೇಗೌಡ ಧರಣಿಗೆ ಮರಳಿ ಏರು ದನಿಯಲ್ಲಿ ವಾಗ್ವಾದಕ್ಕೆ ಇಳಿದರು. ಬಿಜೆಪಿ ಸದಸ್ಯರೂ ಜೋರಾಗಿ ಪ್ರತ್ಯುತ್ತರ ನೀಡಲಾರಂಭಿಸಿದರು. ಗದ್ದಲ ಹೆಚ್ಚುತ್ತಿದ್ದಂತೆ ಕಲಾಪವನ್ನು ಬುಧವಾರ ಬೆಳಿಗ್ಗೆ 10.30ಕ್ಕೆ ಮುಂದೂಡಿರುವುದಾಗಿ ಸಭಾಪತಿ ಪ್ರಕಟಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.