ಬೆಂಗಳೂರು: ಅಧಿಕಾರ ಸ್ಥಾನ, ಮಾನ ನೀಡಿದ ಬಿಜೆಪಿ ಪಕ್ಷವನ್ನು ತೊರೆಯುವ ಪ್ರಶ್ನೆಯೇ ಇಲ್ಲ ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ಹೇಳಿದ್ದಾರೆ.
ವಿಧಾನಸೌಧದ ಬಳಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕಾಂಗ್ರೆಸ್, ಜೆಡಿಎಸ್‌ಗೆ ರಾಜೀನಾಮೆ ಕೊಟ್ಟು 17 ಜನ ಬಿಜೆಪಿಯಿಂದ ಗೆದ್ದು ಶಾಸಕರಾದ ಮೇಲೆ ಪಕ್ಷ ಅಧಿಕಾರ ನೀಡಿದೆ. ಯಡಿಯೂರಪ್ಪ ಅವರ ಮಾತು ಕೊಟ್ಟಂತೆ ನಡೆದು ಕೊಂಡಿದ್ದಾರೆ. ಯಾರೂ ಕೂಡ ನಾವು ಪಕ್ಷ ತೊರೆಯುವ ಪ್ರಶ್ನೆಯೇ ಬರುವುದಿಲ್ಲ. ಪದೇ ಪದೇ ಇಂತಹ ವಿಚಾರದ ಬಗ್ಗೆ ಗೊಂದಲ ಉಂಟು ಮಾಡುವವರೆ ಇದಕ್ಕೆ ಉತ್ತರ ನೀಡಬೇಕು ಎಂದರು.
ಬರುವ ಚುನಾವಣೆಯಲ್ಲೂ ಬಿಜೆಪಿಯಿಂದಲೇ ಮತ್ತೆ ಕಣಕ್ಕಿಳಿಯುತ್ತೇವೆ. ಇಡೀ ವಿಶ್ವದಲ್ಲಿಯೇ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಬಿಜೆಪಿ ದೇಶದಲ್ಲೂ ಬಲಿಷ್ಟವಾಗಿ ಬೆಳೆದಿದೆ. ಇಂಥಹ ಸದೃಢ ಪಕ್ಷ ನಮಗೆ ಅಧಿಕಾರ, ಸ್ಥಾನ ಮಾನ ಎಲ್ಲವನ್ನೂ ನೀಡಿದೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಕೇಂದ್ರದಲ್ಲಿ ನರೇಂದ್ರಮೋದಿ ಮತ್ತು ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ಅವರು ಜನಪರವಾದ ಸಾಕಷ್ಟು ಕೆಲಸಗಳನ್ನು ಮಾಡುತ್ತಿದ್ದಾರೆ. ಕೊರೊನಾ ಮಧ್ಯೆಯೂ ಅಭಿವೃದ್ಧಿ ಕಾಮಗಾರಿಗಳು ನಿರಂತರವಾಗಿ ನಡೆದಿವೆ. ನಾವೂ ಕೂಡ ನಮ್ಮ ಕ್ಷೇತ್ರಗಳಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದೇವೆ. ವಿನಾಕಾರಣ ಪಕ್ಷಾಂತರದ ಬಗ್ಗೆ ಮಾತನಾಡುವುದಕ್ಕೆ ಎಲ್ಲರೂ ತೆರೆ ಎಳೆಯಬೇಕು ಎಂದರು.
ಬೇರೆ ಪಕ್ಷಕ್ಕೆ ಹೋಗುತ್ತೇವೆ ಎಂದು ಯಾರೂ ಕೂಡ ಅರ್ಜಿಹಾಕಿ ನಿಂತುಕೊಂಡಿಲ್ಲ. ಬರುವ ವಿಧಾನಸಭಾ ಸಭಾ ಚುನಾವಣೆಯಲ್ಲೂ ಮತ್ತೆ ಬಿಜೆಪಿಯಿಂದಲೇ ಕಣಕ್ಕೆ ಇಳಿಯುತ್ತೇವೆ. ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುವುದಾಗಿ ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.
ಬೇರೆ ಪಕ್ಷಗಳ ಯಾರೂ ಕೂಡ ನಮ್ಮೊಂದಿಗೆ ಸಂಪರ್ಕದಲ್ಲಿ ಇಲ್ಲ. ಅದರ ಅವಶ್ಯಕತೆ ಕೂಡ ನಮಗಿಲ್ಲ.ಬಿಜೆಪಿ ನನಗೆ ಎಲ್ಲವನ್ನೂ ನೀಡಿದೆ. ನಾನು ಬೇರೆ ಪಕ್ಷಕ್ಕೆ ಹೋಗಿ ಮಾಡುವುದು ಏನೂ ಇಲ್ಲ. ಬಿಜೆಪಿ ಪಕ್ಷ ಸಚಿವಸ್ಥಾನ ನೀಡಿದೆ. ಎರಡು ಜಿಲ್ಲೆಗಳ ಉಸ್ತುವಾರಿ ನೀಡಿದೆ. ನಮಗೆ ಇದಕ್ಕಿಂತ ಇನ್ನೇನು ಬೇಕಿದೆ.? ರಾಜ್ಯದಲ್ಲೂ ಮತ್ತು ಬಿಬಿಎಂಪಿಯಲ್ಲೂ ಕೂಡ ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ ಎಂದರು.
ಪಕ್ಷ ತೊರೆದು ಬಂದ ಎಲ್ಲ 17 ಜನರೂ ಕೂಡ ನಾವು ಒಟ್ಟಿಗೆ ಇದ್ದೇವೆ. ಮುಖ್ಯಮಂತ್ರಿಗಳ ಬದಲಾವಣೆ ವಿಚಾರಗಳು ಶುದ್ಧಸುಳ್ಳು, ಬಸವರಾಜ್ ಬೊಮ್ಮಾಯಿ ಅವರು ಸಿಎಂ ಆಗಿ 6 ತಿಂಗಳಾಗಿದೆ ಅಷ್ಟೇ. ಆದರೆ ಅವರ ಬದಲಾವಣೆ ಕುರಿತು ಕಪೋಲಕಲ್ಪಿತ ಸುದ್ದಿಗಳನ್ನು ಕೆಲವರು ಹಬ್ಬಿಸುತ್ತಿದ್ದಾರೆ. ಅವರ ನೇತೃತ್ವದಲ್ಲಿ ನಮ್ಮ ಸರ್ಕಾರ ಸುಭದ್ರವಾಗಿದೆ. ಅವರ ಮುಂದಾಳತ್ವದಲ್ಲಿಯೇ ನಾವು ಚುನಾವಣೆಯನ್ನು ಎದುರಿಸುತ್ತೇವೆ ಎಂದು ಸುದ್ದಿಗಾರರ ಮತ್ತೊಂದು ಪ್ರಶ್ನೆಗೆ ಸಚಿವ ಕೆ.ಗೋಪಾಲಯ್ಯ ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.