ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ಸಾಂಸ್ಥಿಕ ರೂಪ ಪಡೆಯಿತು. ಹಣ ಕೊಡದೇ ಕೆಲಸ ಮಾಡಿಸಿಕೊಳ್ಳಲು ಸಾಧ್ಯವಿರಲಿಲ್ಲ ಎಂದು ಕಾಂಗ್ರೆಸ್‌ನ ಟಿ.ಬಿ.ಜಯಚಂದ್ರ ಆರೋಪಿಸಿದರು.
ವಿಧಾನಸಭೆಯಲ್ಲಿ ಬುಧವಾರ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ಮಾತನಾಡಿದ ಅವರು, ಭ್ರಷ್ಟಾಚಾರದಲ್ಲಿ ಮುಳುಗೆದ್ದ ಬಿಜೆಪಿಗೆ ಗ್ಯಾರಂಟಿ ಯೋಜನೆ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದರು.
ಯಾವುದೇ ಕಚೇರಿಯಲ್ಲಿ ಕೆಲಸ ಮಾಡಿಸಿಕೊಳ್ಳಲು ಪ್ರತಿಯೊಂದಕ್ಕೂ ‘ರೇಟ್ ಫಿಕ್ಸ್’ ಆಗಿತ್ತು. ಮಧ್ಯವರ್ತಿಗಳು ಇಲ್ಲದೆ ಯಾವುದೇ ಕೆಲಸಗಳು ಆಗುತ್ತಿರಲಿಲ್ಲ. ಕಳೆದ ನಾಲ್ಕು– ಐದು ವರ್ಷಗಳಲ್ಲಿ ರಾಜ್ಯವನ್ನು ಹದಗೆಡಿಸಲಾಯಿತು ಎಂದು ಜಯಚಂದ್ರ ಹೇಳಿದರು.
ಆಗ ಮಧ್ಯ ಪ್ರವೇಶಿಸಿದ ಎಚ್.ಡಿ.ಕುಮಾರಸ್ವಾಮಿ, ನಾಲ್ಕು ವರ್ಷಗಳ ಹಿಂದೆ ನಾನೇ ಮುಖ್ಯಮಂತ್ರಿ ಆಗಿದ್ದೆ, ಕಾಂಗ್ರೆಸ್–ಜೆಡಿಎಸ್ ಸರ್ಕಾರ ಇತ್ತು ಎಂದರು.
‘ನಿಮ್ಮ ಅವಧಿಯಲ್ಲಿ ಅಲ್ಲ, ಆ ಬಳಿಕ’ ಎಂದು ಜಯಚಂದ್ರ ಸಮಜಾಯಿಷಿ ನೀಡಿದರು.
ಎತ್ತಿನಹೊಳೆ ಯೋಜನೆಯಲ್ಲಿ ತುಮಕೂರು ಜಿಲ್ಲೆಯ ಭಾಗದಲ್ಲಿ ನಾಲೆಯೇ ಆಗದೇ ಪೈಪ್‌ಗಳನ್ನು ಅಳವಡಿಸಲಾಗಿದೆ. ₹1,258 ಕೋಟಿ ಈ ಕಾಮಗಾರಿಗೆ ಟೆಂಡರ್ ಕೂಡ ಕರೆದಿಲ್ಲ, ಕಾಮಗಾರಿ ಮಾಡಿದವರಿಗೆ ಬಿಲ್ ಕೂಡ ಮಂಜೂರಾತಿ ನೀಡಲಾಗಿದೆ. ನಾಲೆ ಕಾಮಗಾರಿ ಮುಗಿದು ನೀರು ಬರುವಾಗ 15 ವರ್ಷ ಕಳೆದರೂ ಅಚ್ಚರಿ ಇಲ್ಲ. ಇದೂ ಕೂಡ ಭ್ರಷ್ಟಾಚಾರದ ಇನ್ನೊಂದು ಮುಖ ಎಂದು ಅವರು ಹೇಳಿದರು.
ಗುತ್ತಿಗೆದಾರರ ಸಂಘದ ಕೆಂಪಣ್ಣ ಅವರು ಶೇ 40 ರಷ್ಟು ಲಂಚ ನಡೆಯುತ್ತಿತ್ತು ಎಂದು ಹೇಳಿದ್ದರು. ವಾಸ್ತವದಲ್ಲಿ ಶೇ 60 ರಿಂದ 70 ರಷ್ಟಕ್ಕೆ ಏರಿತ್ತು. ಇದನ್ನು ನಿಯಂತ್ರಿಸಬೇಕು ಎಂದೇ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನತೆ ಕಾಂಗ್ರೆಸ್ ಅನ್ನು ಗೆಲ್ಲಿಸುವ ಮೂಲಕ ಸಂದೇಶ ನೀಡಿದ್ದಾರೆ ಎಂದರು.
ಪ್ರಧಾನಿ ಮೋದಿಯವರು ಟ್ರಿಲಿಯನ್ ಡಾಲರ್ ಆರ್ಥಿಕತೆ ಬಗ್ಗೆ ಮಾತನಾಡುತ್ತಾರೆ. ಅದರಿಂದ ಹೊಟ್ಟೆ ತುಂಬುತ್ತದೆಯೇ ಎಂದು ಪ್ರಶ್ನಿಸಿದರು.
ರಾಜ್ಯದ 160 ಕಡೆಗಳಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಹಾಸ್ಟೆಲ್
ಬೆಂಗಳೂರು: ರಾಜ್ಯದಲ್ಲಿ 160 ಕಡೆಗಳಲ್ಲಿ ಉನ್ನತ ಶಿಕ್ಷಣ ಇಲಾಖೆಗೆ ಸೇರಿದ ಕಟ್ಟಡಗಳಲ್ಲಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ಗಳನ್ನು ಆರಂಭಿಸಲಾಗುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್ ಎಸ್. ತಂಗಡಗಿ ಹೇಳಿದರು.
ವಿಧಾನಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಕಿರಣ್ ಕುಮಾರ್ ಕೊಡ್ಗಿ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿ ಅವರು ಈ ವಿಷಯ ತಿಳಿಸಿದರು.
ರಾಜ್ಯದಲ್ಲಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಈ ವ್ಯವಸ್ಥೆ ಮಾಡಲಾಗುವುದು. ಈ ಹಾಸ್ಟೆಲ್‌ಗಳಲ್ಲಿ ಎಲ್ಲ ರೀತಿಯ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಹೆಚ್ಚು ವಿದ್ಯಾರ್ಥಿಗಳು ಹಾಸ್ಟೆಲ್‌ಗೆ ಬಂದು ಸೇರುತ್ತಿದ್ದಾರೆ. ಹಾಸ್ಟೆಲ್ ಸಿಗದವರಿಗೆ ವಿದ್ಯಾಸಿರಿ ಯೋಜನೆಯಡಿ ತಿಂಗಳಿಗೆ ₹1,500 ನೀಡಲಾಗುವುದು ಎಂದು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.