ADVERTISEMENT

ಮುಖ್ಯಮಂತ್ರಿ ಸಿದ್ದರಾಮಯ್ಯ ಮುಖವಾಡ ಕಳಚಿ ಬಿದ್ದಿದೆ: ಆರ್‌. ಅಶೋಕ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಜುಲೈ 2024, 6:05 IST
Last Updated 20 ಜುಲೈ 2024, 6:05 IST
<div class="paragraphs"><p>ಆರ್‌. ಅಶೋಕ ಮತ್ತು ಸಿಎಂ ಸಿದ್ದರಾಮಯ್ಯ</p></div>

ಆರ್‌. ಅಶೋಕ ಮತ್ತು ಸಿಎಂ ಸಿದ್ದರಾಮಯ್ಯ

   

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ಮುಡಾ ಹಗರಣ ಹಾಗೂ ಎಸ್‌ಸಿಎಸ್‌ಪಿ, ಟಿಎಸ್‌ಪಿ ನಿಧಿಯ ದುರುಪಯೋಗ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಅವರು, ‘ಮೂರು ಬಿಟ್ಟವರು ಊರಿಗೆ ದೊಡ್ಡವರು’ ಎಂಬಂತೆ ದಲಿತರ ದುಡ್ಡು ಕೊಳ್ಳೆ ಹೊಡೆದಿರುವುದಕ್ಕೆ ಲೆಕ್ಕ ಕೊಡಿ ಎಂದು ಕೇಳಿದರೆ, ಸಿಎಂ ಸಿದ್ದರಾಮಯ್ಯ ಅವರು ಎಲ್ಲ ಪತ್ರಿಕೆಗಳಲ್ಲೂ ಪುಟಗಟ್ಟಲೆ ಜಾಹೀರಾತು ಕೊಟ್ಟು ಜನರಿಗೆ ಮಂಕು ಬೂದಿ ಎರಚುತ್ತಿದ್ದಾರೆ’ ಎಂದು ಟೀಕಿಸಿದ್ದಾರೆ.

ADVERTISEMENT

‘ತಮ್ಮ ಸರ್ಕಾರದಲ್ಲಿ, ಅದರಲ್ಲೂ ತಾವೇ ನಿರ್ವಹಿಸುವ ಹಣಕಾಸು ಇಲಾಖೆಯಲ್ಲಿ ನಡೆದಿರುವ ಭ್ರಷ್ಟಾಚಾರಕ್ಕೆ ಮುಖ್ಯಮಂತ್ರಿಯಾಗಿ ತಾವು ಜವಾಬ್ದಾರರಲ್ಲ ಎಂದರೆ, ನಿಮ್ಮ ಪ್ರಕಾರ ಈ ಹಗರಣಗಳ ಹೊಣೆ ಯಾರು ಹೊರಬೇಕು’ ಎಂದು ಪ್ರಶ್ನಿಸಿದ್ದಾರೆ.

‘ತಾವು 40 ವರ್ಷಗಳಿಂದ ಹಾಕಿಕೊಂಡಿದ್ದ ಎಲ್ಲ ಮುಖವಾಡಗಳು ಕಳಚಿ ಬಿದ್ದಿವೆ. ಸಮಾಜವಾದಿ ಎಂಬ ಸೋಗಿನಲ್ಲಿ ದಲಿತರ ದುಡ್ಡು ಲೂಟಿ ಹೊಡೆಯುವ ತಮ್ಮ ಮುಖವಾಡ ಬಯಲಾಗಿದೆ. ತಮ್ಮ ಡೋಂಗಿ ‘ಶುದ್ಧ’ ಹಸ್ತಕ್ಕೆ ಎಂದೂ ಅಳಿಸಲಾಗದ ಭ್ರಷ್ಟಾಚಾರದ ಮಸಿ ಅಂಟಿಕೊಂಡಿದೆ. ವಾಲ್ಮೀಕಿ ನಿಗಮದ ₹187 ಕೋಟಿ ಲೂಟಿ, ಎಸ್‌ಸಿಎಸ್‌ಪಿ, ಟಿಎಸ್‌ಪಿ ನಿಧಿಯ ₹14,000 ಕೋಟಿ ದುರುಪಯೋಗ, ಮುಡಾ ಹಗರಣ ಹೀಗೆ ಅಧಿಕಾರಕ್ಕೆ ಬಂದ ಒಂದು ವರ್ಷದಲ್ಲೇ ಇಷ್ಟು ಲೂಟಿ ಮಾಡಿದ್ದೀರಿ. ಇನ್ನೂ ತಮ್ಮ ಮೊದಲ ಅವಧಿಯಲ್ಲಿ ಎಷ್ಟು ಸಾವಿರ ಕೋಟಿ ಲೂಟಿ ಮಾಡಿದ್ದೀರೋ ಆ ದೇವರೇ ಬಲ್ಲ’ ಎಂದು ಹೇಳಿದ್ದಾರೆ.

‘ಪತ್ರಿಕೆಗಳಲ್ಲಿ ಪುಟಗಟ್ಟಲೆ ಜಾಹೀರಾತು ಕೊಟ್ಟರೆ, ಪತ್ರಿಕಾಗೋಷ್ಠಿ ನಡೆಸಿ ನಾಲ್ಕು ದುರಹಂಕಾರದ ಮಾತುಗಳನ್ನು ಆಡಿದರೆ, ಜಾತಿ ಮತ್ತು ಇ.ಡಿ ಹೆಸರು ಹೇಳಿ ಅನುಕಂಪ ಗಿಟ್ಟಿಸಿಕೊಂಡರೆ ಈ ಹಗರಣದಿಂದ ರಕ್ಷಿಸಿಕೊಳ್ಳಬಹುದು ಎನ್ನುವ ಭ್ರಮೆಯಲ್ಲಿದ್ದರೆ ಅದು ನಿಮ್ಮ ಮೂರ್ಖತನ’ ಎಂದು ಹರಿಹಾಯ್ದಿದ್ದಾರೆ.

‘ವಾಲ್ಮೀಕಿ ನಿಗಮದ ಹಗರಣದಲ್ಲಿ ನೈತಿಕತೆ ಹೊಣೆ ಹೊತ್ತು ರಾಜೀನಾಮೆ ಕೊಡವವರೆಗೆ ನಾವು ಸುಮ್ಮನಿರುವ ಪ್ರಶ್ನೆಯೇ ಇಲ್ಲ. ಸತ್ಯದ ಮೇಲೆ ಪ್ರಮಾಣ ವಚನ ಸ್ವೀಕರಿಸಿದ್ದೀರಿ, ಸತ್ಯ ಮರೆಮಾಚುವ ಪಾಪದ ಕೆಲಸ ಮಾಡಬೇಡಿ‘ ಎಂದು ಅಶೋಕ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.