ADVERTISEMENT

ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟವರಿಂದ ಮುಡಾ ಹಗರಣ ಬಯಲು: ಎಚ್‌ಡಿಕೆ‌ ಸ್ಫೋಟಕ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2024, 5:47 IST
Last Updated 5 ಜುಲೈ 2024, 5:47 IST
<div class="paragraphs"><p>ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ&nbsp;ಎಚ್.ಡಿ.ಕುಮಾರಸ್ವಾಮಿ‌</p></div>

ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ ಎಚ್.ಡಿ.ಕುಮಾರಸ್ವಾಮಿ‌

   

ಮೈಸೂರು: ಮುಖ್ಯಮಂತ್ರಿ ಕುರ್ಚಿ ಮೇಲೆ ಕಣ್ಣಿಟ್ಟವರಿಂದ ಮುಡಾ ಹಗರಣ ಬಯಲಾಗಿದೆ ಎಂದು ಕೇಂದ್ರ ಭಾರಿ ಕೈಗಾರಿಕೆ ಹಾಗೂ ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ‌ ಇಲ್ಲಿ ಸ್ಫೋಟಕ ಹೇಳಿಕೆ ನೀಡಿದರು.

ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ ಬಳಿಕ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

ADVERTISEMENT

ಇಷ್ಟು ದಿನ ಹೊರಗೆ ಬಾರದ ಹಗರಣ ಈಗ ಬಂದಿದ್ದು ಏಕೆ? ಇದರ ಹಿಂದೆ ಸಿಎಂ ಕುರ್ಚಿ ಮೇಲೆ ಟವೆಲ್ ಹಾಕಿರುವವರ ಪಾತ್ರ ಇದೆ. ‘ಸಿಡಿ ಫ್ಯಾಕ್ಟರಿ ಬಂದ್ ಆಯ್ತು, ಮುಡಾ ಫ್ಯಾಕ್ಟರಿ ಶುರುವಾಯ್ತು' ಎಂದು ಪರೋಕ್ಷವಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಆರೋಪಿಸಿದರು.

ಮುಖ್ಯಮಂತ್ರಿ ಪತ್ನಿಗೆ 14 ಸೈಟ್ ಹಂಚಿಕೆ ವಿಚಾರದ ಬಗ್ಗೆ ಮುಖ್ಯಮಂತ್ರಿಯ ಕಾನೂನು ಸಲಹೆಗಾರರೂ ಆಗಿರುವ ಶಾಸಕ ಎ.ಎಸ್. ಪೊನ್ನಣ್ಣ ಸುದೀರ್ಘವಾಗಿ ಮಾತನಾಡಿದ್ದಾರೆ. ಅವರು ಮುಖ್ಯಮಂತ್ರಿಯನ್ನು ಸಮರ್ಥಿಸಿಕೊಂಡಿದ್ದಾರೆ. ₹62 ಕೋಟಿ ಪರಿಹಾರ ನೀಡಬೇಕು ಎಂದಿದ್ದಾರೆ. ಆದರೆ ಹಲವು ಅಭಿವೃದ್ಧಿ‌ ಹೆಸರಿನಲ್ಲಿ ಭೂ ಸ್ವಾಧೀನವಾಗಿದೆ, ಆ ರೈತರು ಇನ್ನು ಕೂಡ ಬೀದಿಯಲ್ಲಿ ಅಲೆದಾಡುತ್ತಿದ್ದಾರೆ. ಅವರಿಗೆ ರೇಟ್ ಫಿಕ್ಸ್ ಮಾಡುವಾಗ ಹೇಗೆ ಮಾಡುತ್ತೀರಾ? ರೈತರನ್ನ ಬೀದಿಗೆ ನಿಲ್ಲಿಸಿದ್ದೀರಲ್ಲಾ ಇದು ಸರಿಯೇ? ಎಂದು ಕೇಳಿದರು.

ನಿಮ್ಮ ಪತ್ನಿಯ ಹಣ ಕೇಳುತ್ತಾ ಇದ್ದೀರಲ್ಲಾ ಆ‌ ದೇವರು ಮೆಚ್ಚುತ್ತಾನೆಯೇ ಎಂದು ಮುಖ್ಯಮಂತ್ರಿ‌ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು. ಮುಡಾ ಹಗರಣದ ವಿರುದ್ಧ ಬಿಜೆಪಿಯವರು ಹೋರಾಟ ಮಾಡುತ್ತಿದ್ದಾರೆ. ಆದರೆ ಹಗರಣ ಆಚೆ ಬರಲು ಕಾಂಗ್ರೆಸ್‌ನವರೇ ಒಳಗೇ ಕುಮ್ಮಕ್ಕು ಕೊಡುತ್ತಿದ್ದಾರೆ. ಈ ಬಗ್ಗೆ ನನಗೆ ಮಾಹಿತಿ ಇದೆ ಎಂದರು.

ಸಿಎಂ ಪತ್ನಿಗೆ ಆ ಜಾಗ ಹೇಗೆ ಬಂತು ಎಂಬುದೂ ನನಗೆ ಗೊತ್ತಿದೆ. ₹62 ಕೋಟಿ ಪರಿಹಾರ ಕೇಳುವ ಮುಖ್ಯಮಂತ್ರಿ ಭೂಮಿ ಕಳೆದುಕೊಂಡು ಬೀದಿಯಲ್ಲಿ ನಿಂತಿರುವ ರೈತರಿಗೂ ಪರಿಹಾರ ಕೊಡಿಸಲಿ ಎಂದು ಸವಾಲು ಹಾಕಿದರು.

ಇಂದು ಮಂಡ್ಯದಲ್ಲಿ ಜನತಾ ದರ್ಶನ ನಡೆಸಲಿದ್ದೇನೆ. ಈ ವಿಚಾರದಲ್ಲೂ ರಾಜ್ಯ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ನಾನು ಜನತಾ ದರ್ಶನ ಮಾಡುತ್ತಿರುವ ಹಿನ್ನೆಲೆಯಲ್ಲೇ ಸಚಿವ ಸಂಪುಟ ಸಭೆ ಕರೆದು ಚರ್ಚೆ ಮಾಡಿದ್ದಾರೆ ಎಂದು ಆರೋಪಿಸಿದರು.

ನೀವು ಅಧಿಕಾರಿಗಳನ್ನು ದೂರು ಇಡಬಹುದು. ಆದರೆ, ಜನರನ್ನು ನನ್ನಿಂದ ದೂರ ಮಾಡಲು ಸಾಧ್ಯವಿಲ್ಲ. ಈ ಹಿಂದೆ ಬೆಂಗಳೂರು ಗ್ರಾಮಾಂತರ ಸಂಸದರು ಈ ರೀತಿ ಸಭೆ ಮಾಡಿದ್ದಾಗ ಏನು ಮಾಡುತ್ತಿದ್ದಿರಿ?‌ ಚುನಾವಣೆಗೆ ಬಂದು ಜನ ಸ್ಪಂದನ ಕಾರ್ಯಕ್ರಮ ಮಾಡಿದಾಗ ಎಲ್ಲಿ ಹೋಗಿದ್ರಿ? ಈಗ ಜನತಾ ದರ್ಶನ ತಪ್ಪಿಸಲು ಸರ್ಕಾರ ಮುಂದಾಗಿದೆ.‌ ಯಾವುದೇ ಕಾರಣಕ್ಕೂ ಜನತಾ ದರ್ಶನ ನಿಲ್ಲಿಸಲು ಸಾಧ್ಯವಿಲ್ಲ ಎಂದು ಗುಡುಗಿದರು.

ಶಾಸಕ ಜಿ.ಡಿ. ಹರೀಶ್ ಗೌಡ, ಮಾಜಿ‌ ಸಚಿವ ಸಾ.ರಾ.‌ಮಹೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.