ಬೆಂಗಳೂರು: ‘ಬಿಜೆಪಿಯವರಿಗೆ ಕಾನ್ವೆಂಟ್‌ನಲ್ಲಿ ಓದುವ ದಲಿತರು ಇಷ್ಟ ಇಲ್ವಾ’ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ದಲಿತರು ಎಲ್ಲಿ ಇರಬೇಕು ಎಂದು ನೀವು ಬಯಸುತ್ತೀರಿ? ಎಂದೂ ಆಕ್ರೋಶ ವ್ಯಕ್ತಪಡಿಸಿದರು.
‘ಪ್ರಿಯಾಂಕ್ ಖರ್ಗೆ ಕಾನ್ವೆಂಟ್ ದಲಿತ’ ಎಂದು ಸಚಿವ ಸುನೀಲ್ ಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ ಪ್ರಿಯಾಂಕ್, ‘ಸುನಿಲ್ ಕುಮಾರ್ ನನ್ನ ಬಗ್ಗೆ ವೈಯಕ್ತಿಕವಾಗಿ ಮಾತನಾಡಿದ್ದಾರೆ. ಕಾನ್ವೆಂಟ್ ದಲಿತ ಎಂದು ನನ್ನ ಬಗ್ಗೆ ಹೇಳಿದ್ದಾರೆ. ಇಂಥ ಹೇಳಿಕೆಗಳನ್ನು ಮಂತ್ರಿಗಳಿಗೆ ಬಿಜೆಪಿ ಐಟಿ ಸೆಲ್ ಹೇಳಿಕೊಡುತ್ತಾ? ಏಕೆ ದಲಿತರು ಬೆಂಗಳೂರಲ್ಲಿ ಹುಟ್ಟಬಾರದಾ? ಮೈಸೂರು ದಲಿತರು ಬೇರೆ, ಬೆಂಗಳೂರು ದಲಿತರು ಬೇರೆಯೇ? ಎಂದೂ ಅವರು ಪ್ರಶ್ನಿಸಿದರು.
‘ನಾನು ಓದಿದ್ದು ಕಾನ್ವೆಂಟ್‌ನಲ್ಲಿ ಅಲ್ಲ. ಉಡುಪಿಯ ಅದಮಾರು ಮಠದ ಶಾಲೆ ಬೆಂಗಳೂರಲ್ಲಿದೆ. ಆ ಅದಮಾರು ಮಠದ ಶಾಲೆಯಲ್ಲಿ ಓದಿದ್ದೇನೆ. ನಾನು ಪ್ರಜ್ಞಾವಂತ ದಲಿತ, ನಾನು ಕಾಸ್ಮೋಪಾಲಿಟನ್ ದಲಿತ. ಷಿಕಾಗೋದಿಂದ ಹಿಡಿದು ಚಿತ್ತಾಪುರದವರೆಗೆ ಯಾವುದೇ ವಿಷಯದಲ್ಲಿ ನಾನು ಚರ್ಚೆಗೆ ಸಿದ್ದನಿದ್ದೇನೆ. ನಿಮ್ಮ ₹ 2 ಟ್ರೋಲರ್‌ಗಳು ನೆಹರೂ ಬಗ್ಗೆ, ಸಿದ್ದರಾಮಯ್ಯ ಬಗ್ಗೆ ಮಾತನಾಡುತ್ತಾರೆ. ಅವರಿಗೆ ಇರುವ ಯೋಗ್ಯತೆ ನಮಗಿಲ್ವಾ? ನಾನು ಕೂಡ ಎರಡು ಬಾರಿ ಮಂತ್ರಿ ಆಗಿದ್ದೇನೆ. ಮುಖ್ಯಮಂತ್ರಿಗೆ ಪ್ರಶ್ನೆ ಮಾಡುವ ಜವಾಬ್ದಾರಿ ನನ್ನದು. ನಾನು ವಿರೋಧ ಪಕ್ಷದ ವಕ್ತಾರ’ ಎಂದು ಪ್ರಿಯಾಂಕ್ ಕಿಡಿಕಾರಿದರು.
‘ವೈಯಕ್ತಿಕ ಟೀಕೆ ಮಾಡುವುದು ನಿಮ್ಮ ಕಾರ್ಯತಂತ್ರ. ನೀವು ಎಷ್ಟೇ ವೈಯಕ್ತಿಕ ಟೀಕೆ ಮಾಡಿದರೂ ನಾನು ಪ್ರಶ್ನಿಸುವುದನ್ನು ನಿಲ್ಲಿಸುವುದಿಲ್ಲ. ನಮ್ಮ ಸರಳ ಪ್ರಶ್ನೆಗಳಿಗೆ ಉತ್ತರ ಕೊಡಲು ಬಿಜೆಪಿಯವರಿಗೆ ಯೋಗ್ಯತೆ ಇಲ್ಲ’ ಎಂದ ಅವರು, ‘ನಾರಾಯಣ ಗುರು ಸ್ತಬ್ಧ ಚಿತ್ರಕ್ಕೆ ನಿರ್ಬಂಧ ಮಾಡಿದಾಗ ಯಾಕೆ ಸುಮ್ಮನಿದ್ದಿರಿ’ ಎಂದು ಸುನಿಲ್ ಕುಮಾರ್ ಅವರನ್ನು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.