ಬೆಂಗಳೂರು: ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಜಿದ್ದಾಜಿದ್ದಿನ ಕಿತ್ತಾಟದಿಂದ ಬಿಜೆಪಿಗೆ ಲಾಭವಾಗಿದೆ. ‘ಕಮಲ’ ಪಕ್ಷದ ಮೂರನೇ ಅಭ್ಯರ್ಥಿ ಲಹರ್ ಸಿಂಗ್ ಗೆಲುವು ಸಾಧಿಸಿದ್ದಾರೆ. ನಾಲ್ಕು ಸ್ಥಾನಗಳ ಪೈಕಿ ಬಿಜೆಪಿ ಮೂರು ಹಾಗೂ ಕಾಂಗ್ರೆಸ್ ಒಂದು ಸ್ಥಾನ ದಕ್ಕಿಸಿಕೊಂಡಿವೆ.
ಬಿಜೆಪಿಯ ನಿರ್ಮಲಾ ಸೀತಾರಾಮನ್ 46, ಜಗ್ಗೇಶ್ 44, ಲಹರ್ ಸಿಂಗ್ 33 ಮತ್ತು ಕಾಂಗ್ರೆಸ್‌ನ ಜೈರಾಂ ರಮೇಶ್ ಅವರು 46 ಮತಗಳನ್ನು ಪಡೆದು ಗೆಲುವು ಸಾಧಿಸಿದರು.ಜೆಡಿಎಸ್‌ನ ಕುಪೇಂದ್ರ ರೆಡ್ಡಿ 30 ಮತ್ತು ಕಾಂಗ್ರೆಸ್‌ನ ಎರಡನೇ ಅಭ್ಯರ್ಥಿ ಮನ್ಸೂರ್ ಖಾನ್ 25 ಮತಗಳನ್ನಷ್ಟೇ ಪಡೆಯಲು ಶಕ್ಯರಾದರು.
ನಿರ್ಮಲಾ ಮತ್ತು ಜೈರಾಂ ರಮೇಶ್ ತಲಾ 46 ಪ್ರಥಮ ಪ್ರಾಶಸ್ತ್ಯ ಮತಗಳನ್ನು ಪಡೆದು ಜಯಗಳಿಸಿದರು. ಜಗ್ಗೇಶ್ ಮೊದಲ ಪ್ರಾಶಸ್ತ್ಯದ 44 ಮತಗಳನ್ನು ಪಡೆದರೆ, ಲಹರ್‌ಸಿಂಗ್ ಮೊದಲ ಪ್ರಾಶಸ್ತ್ಯದಲ್ಲಿ (33) ಒಂದು ಹೆಚ್ಚುವರಿ ಮತ, ಎರಡನೇ ಪ್ರಾಶಸ್ತ್ಯದಲ್ಲಿ ಎರಡು ಹೆಚ್ಚುವರಿ ಮತಗಳನ್ನು ಪಡೆದರು. ಆ ಎರಡೂ ಮತಗಳು ಕಾಂಗ್ರೆಸ್ ಕಡೆಯಿಂದ ಬಂದಿವೆ ಎಂದು ಮೂಲಗಳು ಹೇಳಿವೆ.
ತಮ್ಮ ಎರಡನೇ ಅಭ್ಯರ್ಥಿ ಮನ್ಸೂರ್ ಖಾನ್ ಗೆಲುವಿಗಾಗಿ ಕಾಂಗ್ರೆಸ್ ಮತ್ತು ಕುಪೇಂದ್ರ ರೆಡ್ಡಿ ಗೆಲುವಿಗಾಗಿ ಜೆಡಿಎಸ್ ಹೆಣೆದ ತಂತ್ರಗಳು ಫಲ ನೀಡಲಿಲ್ಲ. ಅಡ್ಡ ಮತದಾನದ ಭೀತಿ ಮತ್ತು ಸಿದ್ದರಾಮಯ್ಯ– ಎಚ್.ಡಿ.ಕುಮಾರಸ್ವಾಮಿ ಪರಸ್ಪರ ಜಗ್ಗಾಟದ ಮಧ್ಯೆಯೂ ಮತದಾನದ ವೇಳೆ ದೊಡ್ಡ ಮಟ್ಟದ ನಾಟಕೀಯ ಬೆಳವಣಿಗೆಗಳೂ ನಡೆಯಲಿಲ್ಲ. ಆದರೆ,ಜೆಡಿಎಸ್‌ನ ಕೋಲಾರ ಶಾಸಕ ಕೆ.ಶ್ರೀನಿವಾಸಗೌಡ ಕಾಂಗ್ರೆಸ್‌ಗೂ, ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಬಿಜೆಪಿ ಅಭ್ಯರ್ಥಿಗೆ ಅಡ್ಡ ಮತದಾನ ಮಾಡಿದರು. ‘ಆತ್ಮಸಾಕ್ಷಿ’ಯ ಮತವನ್ನು ಹಾಕಿ ಎಂದು ಸಿದ್ದರಾಮಯ್ಯ ಅವರು ಜೆಡಿಎಸ್ ಶಾಸಕರಿಗೆ ಮನವಿ ಮಾಡಿ ಬರೆದ ಪತ್ರ ಯಾವುದೇ ಪರಿಣಾಮ ಬೀರಲಿಲ್ಲ.
ಮಧ್ಯಾಹ್ನದ ವೇಳೆಗೇ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರಿಗೆ ಫಲಿತಾಂಶ ಏನಾಗಬಹುದು ಎಂಬ ಸುಳಿವು ಸಿಕ್ಕಿತ್ತು. ಹೀಗಾಗಿ ಬಿಜೆಪಿ ಅಭ್ಯರ್ಥಿ ಗೆದ್ದರೆ ಅವರೇ ಹೊಣೆ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಪರಸ್ಪರ ಬೊಟ್ಟು ಮಾಡಿ ಆರೋಪ ಮಾಡುವುದಕ್ಕಷ್ಟೇ ಸೀಮಿತವಾದರು. ಕುಪೇಂದ್ರ ರೆಡ್ಡಿ ಮಾತ್ರ ಹೆಚ್ಚು ಆತಂಕಭರಿತರಾಗಿ ಮತಗಟ್ಟೆಯಾಗಿದ್ದ ವಿಧಾನಸೌಧದ ಕೊಠಡಿ ಸಂಖ್ಯೆ 106 ಬಳಿ ಓಡಾಡುತ್ತಿದ್ದರು.
ಒಟ್ಟಾಗಿ ಬಂದ ಜೆಡಿಎಸ್ ಶಾಸಕರು:ಅಡ್ಡ ಮತದಾನದ ಭೀತಿಗೆ ಒಳಗಾಗಿದ್ದ ಜೆಡಿಎಸ್ ಪಕ್ಷ ತನ್ನ ಶಾಸಕರನ್ನು ನಗರದ ಹೊಟೇಲ್‌ವೊಂದರಲ್ಲಿ ಗುರುವಾರ ರಾತ್ರಿಯೇ ಹಿಡಿದಿಟ್ಟಿತ್ತು. ಬೆಳಿಗ್ಗೆ ಎಲ್ಲರೂ ಒಟ್ಟಾಗಿ ಬಸ್‌ನಲ್ಲಿ ಮತದಾನಕ್ಕೆ ಬಂದರು. ಆದರೆ, ಕೆ.ಶ್ರೀನಿವಾಸಗೌಡ, ಎಸ್.ಆರ್.ಶ್ರೀನಿವಾಸ್, ಜಿ.ಟಿ.ದೇವೇಗೌಡ ಮತ್ತು ಕೆ.ಎಂ.ಶಿವಲಿಂಗೇಗೌಡ ಈ ತಂಡದಲ್ಲಿ ಇರಲಿಲ್ಲ. ಜಿ.ಟಿ ಮತ್ತು ಶಿವಲಿಂಗೇಗೌಡ ಪಕ್ಷದ ವರಿಷ್ಠರ ಬಗ್ಗೆ ಮುನಿಸಿಕೊಂಡಿದ್ದರೂ ಪಕ್ಷದ ಅಭ್ಯರ್ಥಿಗೇ ಮತ ಚಲಾಯಿಸಿ ‘ಪಕ್ಷ ನಿಷ್ಠೆ’ ಪ್ರದರ್ಶಿಸಿದರು.
ಮತ್ತೊಂದೆಡೆ ಕಾಂಗ್ರೆಸ್ ಕೂಡ ಅಡ್ಡ ಮತದಾನ ಆಗಬಾರದು ಎಂಬ ಕಾರಣಕ್ಕೆ ಬೆಳಿಗ್ಗೆ ಶಾಸಕರ ಸಭೆ ನಡೆಸಿ ಯಾವ ರೀತಿ ಮತ ಚಲಾಯಿಸಬೇಕು ಎಂಬ ಪ್ರಾತ್ಯಕ್ಷಿಕೆಯ ವ್ಯವಸ್ಥೆಯನ್ನೂ ಮಾಡಿತ್ತು.
ಒಂದು ವೇಳೆ ಯಾರಾದರೂ ಅಡ್ಡ ಮತದಾನ ಮಾಡಿದರೆ ಮುಂದೆ ಚುನಾವಣೆಯಲ್ಲಿ ಟಿಕೆಟ್ ನೀಡುವುದಿಲ್ಲ ಎಂಬುದಾಗಿ ಡಿ.ಕೆ.ಶಿವಕುಮಾರ್ ಎಚ್ಚರಿಕೆ ನೀಡಿದ್ದರು.
* ಜೆಡಿಎಸ್‌ನ ಕೆ. ಶ್ರೀನಿವಾಸಗೌಡ ಕಾಂಗ್ರೆಸ್‌ಗೆ ಅಡ್ಡ ಮತದಾನ ಮಾಡಿದ್ದೂ ಅಲ್ಲದೇ, ತಾವು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸುವುದಾಗಿ ಹೇಳಿದರು. ಇದರಿಂದ ಸಿಟ್ಟಿಗೆದ್ದ ಎಚ್.ಡಿ.ಕುಮಾರಸ್ವಾಮಿ ಪಕ್ಷ ಬಿಟ್ಟು ಹೋಗುವಂತೆ ಶ್ರೀನಿವಾಸಗೌಡ ಅವರಿಗೆ ಹೇಳಿದರು.
* ಜೆಡಿಎಸ್‌ನ ಎಸ್.ಆರ್.ಶ್ರೀನಿವಾಸ್ ಅವರು ಚಾಣಾಕ್ಷತೆಯಿಂದ ಮತ ಪತ್ರವನ್ನು ಮಡಚಿ ಖಾಲಿ ಭಾಗವನ್ನು ಮಾತ್ರ ಎಚ್.ಡಿ.ರೇವಣ್ಣ ಅವರಿಗೆ ತೋರಿಸಿ, ಬಳಿಕ ಲಹರ್ ಸಿಂಗ್ ಅವರಿಗೆ ಮತ ಚಲಾಯಿಸಿದ್ದಾರೆ ಎಂದು ಜೆಡಿಎಸ್ ನಾಯಕರು ದೂರಿದ್ದಾರೆ.
* ಜೆಡಿಎಸ್‌ನ ಎಚ್.ಡಿ.ರೇವಣ್ಣ ಅವರು ತಾವು ಮತವನ್ನು ಚಲಾಯಿಸುವುದಕ್ಕೆ ಮುನ್ನ ಮತ ಪತ್ರವನ್ನು ಕಾಂಗ್ರೆಸ್‌ನ ಡಿ.ಕೆ.ಶಿವಕುಮಾರ್ ತೋರಿಸಿದ್ದು ವಿವಾದಕ್ಕೆ ಕಾರಣವಾಯಿತು. ರೇವಣ್ಣ ಅವರ ಮತವನ್ನು ಅಸಿಂಧುಗೊಳಿಸಬೇಕು ಎಂದು ಚುನಾವಣಾ ಆಯೋಗಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ ದೂರು ಸಲ್ಲಿಸಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.