ADVERTISEMENT

‘ಕೈ’ ಅತೃಪ್ತರ ಮನವೊಲಿಕೆಗೆ ಕಸರತ್ತು

ಮುಖ್ಯಮಂತ್ರಿಯಿಂದ ‘ಉಪಾಹಾರ ರಾಜಕೀಯ’

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2019, 19:15 IST
Last Updated 6 ಮಾರ್ಚ್ 2019, 19:15 IST
   

ಬೆಂಗಳೂರು: ಕಾಂಗ್ರೆಸ್‌ ಶಾಸಕ ಉಮೇಶ ಜಾಧವ ಬಿಜೆಪಿ ತೆಕ್ಕೆ ಸೇರುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ‘ಕೈ’ಅತೃಪ್ತ ಶಾಸಕರ ಮನವೊಲಿಕೆಗೆ ಮುಂದಾಗಿದ್ದಾರೆ.

ಸೆವೆನ್ ಮಿನಿಸ್ಟರ್ ಕ್ವಾಟ್ರರ್ಸ್‍ನಲ್ಲಿರುವ ರಮೇಶ ಜಾರಕಿಹೊಳಿ ನಿವಾಸಕ್ಕೆ ಬುಧವಾರ ಬೆಳಿಗ್ಗೆ ‘ಉಪಾಹಾರ’ ನೆಪದಲ್ಲಿ ತೆರಳಿದ ಕುಮಾರಸ್ವಾಮಿ, ಜಾರಕಿಹೊಳಿ, ಬಿ. ನಾಗೇಂದ್ರ, ಮಹೇಶ್ ಕುಮಠಳ್ಳಿ ಜೊತೆ ಮಾತುಕತೆ ನಡೆಸಿದರು.

ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಮುಖ್ಯಮಂತ್ರಿ, ‘ಮನವೊಲಿಕೆ ಏನೂ ಇಲ್ಲ. ಉಪಾಹಾರಕ್ಕೆ ಬಂದಿದ್ದೆ ಅಷ್ಟೆ ಎಲ್ಲರೂ ನನ್ನ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ಕ್ಷೇತ್ರದ ವಿಚಾರ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದೇವೆ’ ಎಂದು ಸ್ಪಷ್ಟಪಡಿಸಿದರು.

ADVERTISEMENT

‘ಉಮೇಶ ಜಾಧವ ರಾಜೀನಾಮೆಗೂ ನನಗೂ ಸಂಬಂಧವಿಲ್ಲ. ರಮೇಶ ಜಾರಕಿಹೊಳಿಗೆ ಅಸಮಾಧಾನ ಇರುವುದು ನಿಜ. ಅದನ್ನು ಕಾಂಗ್ರೆಸ್ ನಾಯಕರು ನಿವಾರಿಸಬೇಕು. ನನ್ನ ಜವಾಬ್ದಾರಿಯನ್ನು ನಾನು ನಿರ್ವಹಿಸುತ್ತೇನೆ’ ಎಂದರು.

ಬಿಜೆಪಿಯವರೂ ನನ್ನ ಜೊತೆ ಸಂಪರ್ಕದಲ್ಲಿದ್ದಾರೆ. ಯಡಿಯೂರಪ್ಪ, ಸಿದ್ದರಾಮಯ್ಯ ಭೇಟಿಯಾಗಿದ್ದರು. ಅದಕ್ಕೆ ರಾಜಕೀಯ ಬೆರೆಸಲು ಸಾಧ್ಯವೇ ಎಂದು ಪ್ರಶ್ನಿಸಿದರು.

‘ಕಾಂಗ್ರೆಸ್ ನಾಯಕರ ನಡವಳಿಕೆ ಬಗ್ಗೆ ಅಸಮಾಧಾನವಿದೆ. ಆದರೆ, ಪಕ್ಷ ಬಿಡುವುದಿಲ್ಲ. ಉಮೇಶ್ ಜಾಧವ್ ರಾಜೀನಾಮೆಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಜಾರಕಿಹೊಳಿ ಹೇಳಿದ್ದಾರೆ ಎಂದರು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಮಾತುಕತೆ ನಡೆಸಿದ ನಂತರ ಸುದ್ದಿಗಾರರದಿಗೆ ಮಾತನಾಡಿದ ರಮೇಶ್‌ ಜಾರಕಿಹೊಳಿ ನನ್ನ ಅಸಮಾಧಾನಕ್ಕೆ ನಾನೇ ಕಾರಣ.ಈ ಸಂದರ್ಭದಲ್ಲಿ ಏನೂ ಹೇಳುವುದಿಲ್ಲ ಎಂದು ಪ್ರತಿಕ್ರಿಯಿಸಿದರು.

‘ಹೈಕಮಾಂಡ್‍ಗೆ ನಮ್ಮ ಭಾವನೆ ತಿಳಿಸಿದ್ದೇವೆ. ಹೈಕಮಾಂಡ್ ಕಡೆಯಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ’ ಎಂದು ಹೇಳಿದರು. ದೇವೇಗೌಡರ ಕುಟುಂಬದ ಜೊತೆ ನನ್ನ ಸಂಬಂಧ ತುಂಬ ಹಳೆಯದು. ಹಲವಾರು ವಿಚಾರಗಳಲ್ಲಿ ಎರಡು-ಮೂರು ಬಾರಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಭೇಟಿ ಮಾಡಿದ್ದಾರೆ. ನಾನು ಪಕ್ಷ ತೊರೆಯುವುದಿಲ್ಲ’ ಎಂದು ಹೇಳಿದರು.

‘ಮುಖ್ಯಮಂತ್ರಿ ಉಪಹಾರಕ್ಕೆ ಬಂದಿದ್ದರು. ನನಗೂ ಆಹ್ವಾನ ನೀಡಿದ್ದರು. ನಮ್ಮ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚರ್ಚೆಯಾಗಿದೆ. ಬೇರೆ ಯಾವ ವಿಚಾರವೂ ಚರ್ಚೆಯಾಗಿಲ್ಲ’ ಎಂದು ಶಾಸಕ ಬಿ.ನಾಗೇಂದ್ರ ಹೇಳಿದರು.

‘ಲೋಕಸಭೆ ಚುನಾವಣೆಗೆ ನನ್ನ ಸೋದರ ಬಿಜೆಪಿ ಅಭ್ಯರ್ಥಿ ಆಗುವ ವಿಷಯದಲ್ಲಿ ಏನೂ ಹೇಳಲಾರೆ. ನನ್ನ ಸೋದರ ಯಾವುದೇ ತೀರ್ಮಾನ ಕೈಗೊಳ್ಳಲು ಸ್ವತಂತ್ರರು. ಅವರ ಜತೆ ಯಾರೋ ಮಾತನಾಡಿರಬಹುದು. ಅವರು ಪಕ್ಷ ಬಿಟ್ಟರೆ ನಾನು ಅವರ ಜತೆ ಇರುವುದಿಲ್ಲ. ನಾನು ಬಳ್ಳಾರಿ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಆದರೆ, ನನಗೆ ಟಿಕೆಟ್ ಕೊಡಲಿಲ್ಲ. ನಾನು ಕಾಂಗ್ರೆಸ್‍ನಲ್ಲಿದ್ದೇನೆ’ ಎಂದರು.

‘ಸಿದ್ದರಾಮಯ್ಯ ಅವರ ಜೊತೆ ಅಸಮಾಧಾನ ತೋಡಿಕೊಂಡಿದ್ದೇವೆ. ಮುಖ್ಯಮಂತ್ರಿ ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಅವರಿಂದಲೂ ಪೂರಕ ಸ್ಪಂದನೆ ಸಿಕ್ಕಿದೆ. ನಮ್ಮ ಅಸಮಾಧಾನ ಶಮನವಾಗಿದೆ. ನಾವು ರಾಜೀನಾಮೆ ಕೊಡುವ ವಿಚಾರವೇ ಇಲ್ಲ’ ಎಂದೂ ನಾಗೇಂದ್ರ ಸ್ಪಷ್ಟಪಡಿಸಿದರು.

‘ಮೋದಿಗೆ ಯಾರ ಭಯವೊ ಗೊತ್ತಿಲ್ಲ’

‘ಬೆಂಗಳೂರಿನ ಯೋಜನೆಗಳನ್ನು ಕಲಬುರ್ಗಿಯಲ್ಲಿ ಉದ್ಘಾಟಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ, ಚುನಾವಣಾ ಪ್ರಚಾರ ಮಾಡಿದ್ದಾರೆ. ರಾಜ್ಯದ ಜನರಿಗೆ ಹೇಳುವುದಕ್ಕೆ ಅವರಲ್ಲಿ ಏನೂ ಇಲ್ಲ. ಅದಕ್ಕೆ ಏನೇನೋ ಹೇಳಿ ಹೋಗಿದ್ದಾರೆ. ಅವರಿಗೆ ಯಾರ ಭಯವೊ ಗೊತ್ತಿಲ್ಲ’ ಎಂದು ಲೋಕಸಭೆ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

‘ಕಲಬುರ್ಗಿ ಜನ ನನ್ನ‌ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಅವರು ನನ್ನ ಕೈ ಬಿಡುವುದಿಲ್ಲ. ಪ್ರಚಾರ ಮಾಡಿ ಹೋದರೆ ಅವರೇನೂ ಬದಲಾಗುವುದಿಲ್ಲ. ಅಭಿವೃದ್ಧಿ ನೋಡಿ ಜನ ಮತ ಹಾಕುತ್ತಾರೆ’ ಎಂದರು.

‘ಹೈದರಾಬಾದ್‌ – ಕರ್ನಾಟಕ ಭಾಗಕ್ಕೆ 371ಜೆ ವಿಶೇಷ ಸ್ಥಾನಮಾನ ವಿರೋಧಿಸಿದವರು ಬಿಜೆಪಿಯವರು. ನಮ್ಮ ಅವಧಿಯಲ್ಲಿ ಅದನ್ನು ತಂದಿದ್ದೇವೆ. ಅದರಿಂದ, ಆ ಭಾಗದ ಜನರಿಗೆ ಲಾಭವಾಗಿದೆ. ಅಲ್ಲಿನ ಜನ ತೃಪ್ತರಿದ್ದಾರೆ ’ ಎಂದೂ ಹೇಳಿದರು.

ಕಾಂಗ್ರೆಸ್‌ ಚುನಾವಣಾ ಸಮಿತಿ ಸಭೆ ಇಂದು

ಕಾಂಗ್ರೆಸ್ ಚುನಾವಣಾ ಸಮಿತಿ ಸಭೆ ಏಟ್ರಿಯಾ ಹೋಟೆಲ್‌ನಲ್ಲಿ ಗುರುವಾರ ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ. ಜೆಡಿಎಸ್‌ ಜೊತೆ ಸೀಟು ಹೊಂದಾಣಿಕೆ, ಅಭ್ಯರ್ಥಿ ಆಯ್ಕೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಈ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.