ಬೆಂಗಳೂರು: ಮೀಸಲಾತಿ ವಿಚಾರಕ್ಕೆ ಸಂಬಂಧಿಸಿ ಹಿಂದಿನ ಬಿಜೆಪಿ ಸರ್ಕಾರ ಮುಸ್ಲಿಮರು, ಲಿಂಗಾಯತ, ಒಕ್ಕಲಿಗರಿಗೆ ದ್ರೋಹ ಎಸಗಿದೆ ಎಂದು ಕಾಂಗ್ರೆಸ್ ಟೀಕಿಸಿದೆ.
ಮೀಸಲಾತಿ ಕುರಿತು ‘ಪ್ರಜಾವಾಣಿ’ಯ ಪ್ರಕಟವಾದ ವರದಿಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್, ‘ಹಿಂದಿನ ಬಿಜೆಪಿ ಸರ್ಕಾರ ಹಿಂದುಳಿದ ವರ್ಗಗಳ ಆಯೋಗದ ಶಿಫಾರಸು ಹಾಗೂ ಅಭಿಪ್ರಾಯ ಪಡೆಯದೆ ಮುಸ್ಲಿಮರ ಮೀಸಲಾತಿ ರದ್ದು ಮಾಡಿ ಒಕ್ಕಲಿಗ, ಲಿಂಗಾಯತರಿಗೆ ಹಂಚಿದ್ದೇವೆ ಎಂದಿದ್ದು, ಜನರಿಗೆ ಮಂಕುಬೂದಿ ಎರಚುವ ತಂತ್ರವಷ್ಟೇ’ ಎಂದು ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿಯ ಈ ನಿಯಮ ಉಲ್ಲಂಘನೆಯ ಹಿಂದೆ ಮುಸ್ಲಿಮರ ಮೇಲಿನ ದ್ವೇಷ ಹಾಗೂ ಒಕ್ಕಲಿಗ & ಲಿಂಗಾಯತರ ಮೇಲಿನ ಅಸಹನೆ ಎದ್ದು ಕಾಣುತ್ತಿದೆ ಎಂದು ಕಾಂಗ್ರೆಸ್ ದೂರಿದೆ.
‘ಕರ್ನಾಟಕದ ಸರ್ಕಾರಕ್ಕೆ ಅಕ್ಕಿ ನೀಡಲು ನಿರಾಕರಿಸಿ, ಖಾಸಗಿ ಮಾರಾಟಕ್ಕೆ ಮುಂದಾಗಿತ್ತು ಕೇಂದ್ರ ಸರ್ಕಾರ. ಆಹಾರ ನಿಗಮದಲ್ಲಿ 3.86 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಮಾರಾಟಕ್ಕಿದ್ದರೂ ಬಿಡ್ ಆಗಿದ್ದು, ಕೇವಲ 170 ಮೆಟ್ರಿಕ್ ಟನ್‌ಗೆ ಮಾತ್ರ! ಉಳಿದ ಅಕ್ಕಿ ಗೋದಾಮಿನಲ್ಲಿ ಕೊಳೆತು ಹೋಗಬೇಕೆ? ಅಕ್ಕಿ ಕೊಳೆತು ಹೋದರೂ ಸರಿ ಬಡವರ ಹಸಿವಿಗೆ ಅನ್ನವಾಗಬಾರದು ಎಂಬ ಮೋದಿಯ ಜನವಿರೋಧಿ ಧೋರಣೆಯಂತಹ ಕ್ರೌರ್ಯ ಇನ್ನೊಂದಿಲ್ಲ’ ಎಂದು ಕಾಂಗ್ರೆಸ್ ಮತ್ತೊಂದು ಟ್ವೀಟ್ ಮಾಡಿದೆ.
ಇದನ್ನೂ ಓದಿ... ಮುಸ್ಲಿಂ ಮೀಸಲಾತಿ: ಶಿಫಾರಸಿಲ್ಲದೇ ಮೀಸಲು ರದ್ದು!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.