ಬೆಂಗಳೂರು: ವಿಧಾನ ಪರಿಷತ್ ಟಿಕೆಟ್ ಕೈತಪ್ಪಿದ ಕಾರಣಕ್ಕೆ ಪಕ್ಷದ ನಾಯಕರ ವಿರುದ್ಧ ಮುನಿಸಿಕೊಂಡಿರುವ ಎಸ್.ಆರ್. ಪಾಟೀಲ ಅವರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಮಂಗಳವಾರ ಭೇಟಿ ಮಾಡಿ ಮಾತುಕತೆ ನಡೆಸಿದರು.
ಕೆಲವು ತಿಂಗಳುಗಳಿಂದ ಸಿದ್ದರಾಮಯ್ಯ ಮತ್ತು ಪಕ್ಷದ ಕಾರ್ಯ ಕ್ರಮಗಳಿಂದ ಎಸ್.ಆರ್. ಪಾಟೀಲ ಅಂತರ ಕಾಪಾಡಿ ಕೊಂಡಿದ್ದರು. ಪರಿಷತ್ ಟಿಕೆಟ್ ನೀಡಿಲ್ಲ ಎಂಬ ಕಾರಣಕ್ಕೆ ಅವರು ತೀವ್ರ ಬೇಸರಗೊಂಡಿದ್ದರು ಎಂದು ಹೇಳಲಾಗಿತ್ತು.
ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಬಳಿಕ ಮಾತನಾಡಿದ ಪಾಟೀಲ, ‘ಎರಡು ಬಾರಿ ನನಗೆ ಟಿಕೆಟ್ ತಪ್ಪಿತ್ತು. ನಾನು ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅಥವಾ ಹೈಕಮಾಂಡ್ ಸೇರಿದಂತೆ ಯಾರ ಮೇಲೂ ದೋಷಾರೋಪಣೆ ಮಾಡಿಲ್ಲ. ಪಕ್ಷದಲ್ಲಿ ಯಾರು ಎಲ್ಲಿಯೇ ಸ್ಪರ್ಧಿಸಲಿ, ಪಕ್ಷದ ಅಭ್ಯರ್ಥಿಗಳಿಗೆ ಬೆಂಬಲ ಕೊಡುವುದು ನನ್ನ ಜವಾಬ್ದಾರಿ. ಸಿದ್ದರಾಮಯ್ಯ ಸಹೋದರನ ನಿಧನಕ್ಕೆ ಸಾಂತ್ವನ ಹೇಳಲು ಬಂದಿದ್ದೆ ಅಷ್ಟೆ’ ಎಂದರು.
ತನಿಖೆಯ ನಂತರ ಗೊತ್ತಾಗಲಿದೆ: ‘ಮುರುಘಾ ಶರಣರ ಪ್ರಕರಣ ಕೇಳಿ ನನಗೆ ಬಹಳ ನೋವಾಗಿದೆ. ಬಸವ ತತ್ವಗಳನ್ನು ಅಕ್ಷರಶಃ ಜಾರಿಗೆ ತಂದವರು ಅವರು. ಷಡ್ಯಂತ್ರ ಇದ್ದರೂ ಇರಬಹುದು, ನನಗೆ ಗೊತ್ತಿಲ್ಲ. ಸತ್ಯ ಹೊರಬರಬೇಕು ಎಂಬುದು ನನ್ನ ಅಪೇಕ್ಷೆ’ ಎಂದರು.
‘ಮುಖ್ಯಮಂತ್ರಿ ಸ್ಥಾನಕ್ಕೆ ಎಸ್.ಆರ್. ಪಾಟೀಲ ಸೂಕ್ತ’ ಎಂಬ ವೀರಪ್ಪ ಮೊಯಿಲಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಮೊಯಿಲಿ ಜೊತೆ ಸಾಕಷ್ಟು ವರ್ಷಗಳಿಂದ ಒಡನಾಟ ಇದೆ. ನಾನು ಎಲ್ಲ ರೀತಿಯಲ್ಲೂ ಅರ್ಹನಾಗಿದ್ದೇನೆ. ರಾಜಕಾರಣದಲ್ಲಿ ಯಾರೂ ಸನ್ಯಾಸಿಗಳಲ್ಲ. ಎಲ್ಲರಿಗೂ ಅವರದ್ದೇ ಅಪೇಕ್ಷೆಗಳು ಇರುತ್ತವೆ’ ಎಂದರು.
ಎಚ್. ಆಂಜನೇಯ ಭೇಟಿ: ಮುರುಘಾ ಶ್ರೀಗಳ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣ ವಿಚಾರವಾಗಿ ಶ್ರೀಗಳ ವಿರುದ್ಧ ದಲಿತಪರ ಸಂಘಟನೆಗಳು ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿವೆ. ಈ ಹಿನ್ನೆಲೆಯಲ್ಲೆ, ಮಾಜಿ ಸಚಿವ ಎಚ್. ಆಂಜನೇಯ ಅವರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ವಿವರಣೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.