ADVERTISEMENT

ಜೆಡಿಎಸ್‌ಗೆ ಮರಳುವ ಪ್ರಶ್ನೆಯೇ ಇಲ್ಲ: ಗುಬ್ಬಿ ಶಾಸಕ ಎಸ್.ಅರ್. ಶ್ರೀನಿವಾಸ್

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2022, 20:34 IST
Last Updated 9 ನವೆಂಬರ್ 2022, 20:34 IST
ಎಸ್‌.ಆರ್‌.ಶ್ರೀನಿವಾಸ್‌
ಎಸ್‌.ಆರ್‌.ಶ್ರೀನಿವಾಸ್‌   

ಗುಬ್ಬಿ(ತುಮಕೂರು): ‘ಜೆಡಿಎಸ್‌ನಿಂದ ಹೊರ ಬಂದಾಗಿದೆ. ಮತ್ತೆ ಆ ಪಕ್ಷಕ್ಕೆ ವಾಪಸ್‌ ಹೋಗುವ ಪ್ರಶ್ನೆಯೇ ಇಲ್ಲ’ ಎಂದು ಜೆಡಿಎಸ್‌ ಉಚ್ಚಾ ಟಿತ ಶಾಸಕ ಎಸ್.ಅರ್. ಶ್ರೀನಿವಾಸ್ ಸ್ಪಷ್ಟವಾಗಿ ಹೇಳಿದ್ದಾರೆ.

‘ಜೆಡಿಎಸ್‌ನಲ್ಲಿರುವ ಅನೇಕ ಶಾಸಕ ಮಿತ್ರರು ಮತ್ತು ಮುಖಂಡರು ಮತ್ತೆ ಜೆಡಿಎಸ್‌ಗೆ ವಾಪಸ್‌ ಬರುವಂತೆ ಒತ್ತಾಯಿಸುತ್ತಿದ್ದಾರೆ. ಆದರೆ, ಗೌರವ ಇಲ್ಲದ ಕಡೆ ನಾನು ಇರಲು ಬಯಸುವುದಿಲ್ಲ’ ಎಂದು ಅವರು ಹೇಳಿದರು.

ಮಂಗಳವಾರ ಶ್ರೀನಿವಾಸ್‌ ಅವರ ನಿವಾಸಕ್ಕೆ ಭೇಟಿ ನೀಡಿದ್ದ ಶಾಸಕ ಸಾ.ರಾ.ಮಹೇಶ್ ಅವರು ಮತ್ತೆ ಜೆಡಿಎಸ್‌ಗೆ ಮರಳುವಂತೆ ಆಹ್ವಾನ ನೀಡಿದ್ದರು. ಅದಕ್ಕೆ ಬುಧವಾರ ಕಡಬದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರತಿಕ್ರಿಯಿಸಿದ ಶ್ರೀನಿವಾಸ್‌, ‘ಜೆಡಿಎಸ್‌ ಶಾಸಕರಾದ ಸಾ.ರಾ. ಮಹೇಶ್‌ ಮತ್ತು ಡಾ.ಕೆ.ಅನ್ನದಾನಿ ಅವರು ಜೆಡಿಎಸ್‌ಗೆ ಮರಳುವಂತೆ ವಿಶ್ವಾಸದಿಂದ ಕರೆದಿದ್ದಾರೆ. ಆದರೆ, ನನಗೆ ಅಂತಹ ಮನಸ್ಥಿತಿ ಇಲ್ಲ’ ಎಂದು ಸ್ಪಷ್ಟಪಡಿಸಿದರು.

ADVERTISEMENT

‘ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ ಕುಮಾರಸ್ವಾಮಿ ನನ್ನ ಬಳಿ ಬರುವ ಸಾಧ್ಯತೆಯೇ ಇಲ್ಲ. ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡರ ಬಗ್ಗೆ ಗೌರವವಿದೆ. ಅವರು ಮನೆಗೆ ಬಂದರೆ ಸ್ವಾಗತಿಸುತ್ತೇನೆ. ಆದರೆ, ರಾಜಕೀಯ ವಿಚಾರದಲ್ಲಿ ಕ್ಷೇತ್ರದ ಕಾರ್ಯಕರ್ತರ ಹಾಗೂ ಅಭಿಮಾನಿಗಳ ತೀರ್ಮಾನ ದಂತೆ ನಡೆದುಕೊಳ್ಳುತ್ತೇನೆ’ ಎಂದರು.

ಜೂನ್‌ನಲ್ಲಿ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷದ ವಿಪ್‌ ಉಲ್ಲಂಘಿಸಿ, ಅಡ್ಡ ಮತದಾನ ಮಾಡಿದ ಆರೋಪದ ಮೇಲೆ ಶ್ರೀನಿವಾಸ್‌ ಅವರನ್ನು ಜೆಡಿಎಸ್‌ನಿಂದ ಉಚ್ಚಾಟಿಸಲಾಗಿದೆ. ಅಧಿಕೃತವಾಗಿ ಅವರು ಇನ್ನೂ ಯಾವುದೇ ಪಕ್ಷ ಸೇರಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.