ADVERTISEMENT

ಸಿದ್ದರಾಮಯ್ಯ– ವಿಜಯೇಂದ್ರ ಎಕ್ಸ್‌ ಪೋಸ್ಟ್ ಸಮರ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2024, 0:03 IST
Last Updated 4 ನವೆಂಬರ್ 2024, 0:03 IST
<div class="paragraphs"><p>ಬಿ.ವೈ. ವಿಜಯೇಂದ್ರ ಮತ್ತು ಸಿದ್ದರಾಮಯ್ಯ</p></div>

ಬಿ.ವೈ. ವಿಜಯೇಂದ್ರ ಮತ್ತು ಸಿದ್ದರಾಮಯ್ಯ

   

ಬೆಂಗಳೂರು: ರಾಜ್ಯ ಸರ್ಕಾರದ ಗ್ಯಾರಂಟಿಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಾಡಿದ್ದ ಎಕ್ಸ್‌–ಪೋಸ್ಟ್‌ಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು ದೇಶ ಮಾತ್ರವಲ್ಲ, ರಾಜ್ಯಮಟ್ಟದಲ್ಲೂ ರಾಜಕೀಯ ಜಟಾಪಟಿ ಸೃಷ್ಟಿಸಿದೆ. ಮುಖ್ಯಮಂತ್ರಿ ಪೋಸ್ಟ್‌ಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅಲ್ಲೇ ಉತ್ತರ ನೀಡಿದ್ದು, ಇಬ್ಬರ ನಡುವೆ ‘ಎಕ್ಸ್‌’ ಸಮರ ಸೃಷ್ಟಿಸಿದೆ. ಇಬ್ಬರೂ ತಲಾ 12ಕ್ಕೂ ಹೆಚ್ಚು ಪೋಸ್ಟ್‌ಗಳ ಮೂಲಕ ವಾಗ್ಯುದ್ಧ ನಡೆಸಿದ್ದಾರೆ.

‘ಬಹಿರಂಗ ಚರ್ಚೆಗೆ ಬನ್ನಿ’
ಪ್ರಧಾನಿ ಮೋದಿ ಅವರೇ, ಹಿಂದಿನ ಎರಡು ಲೋಕಸಭಾ ಚುನಾವಣೆಗಳಿಗೆ ಮುನ್ನ ನಿಮ್ಮ ಪಕ್ಷ ಬಿಡುಗಡೆ ಮಾಡಿದ್ದ ಪ್ರಣಾಳಿಕೆಗಳನ್ನು ಇರಿಸಿಕೊಂಡು ಒಂದು ಸಾರ್ವಜನಿಕ ಚರ್ಚೆಯನ್ನು ಹಮ್ಮಿಕೊಳ್ಳೋಣ. ನೀವು ಕೊಟ್ಟಿರುವ ಭರವಸೆಗಳಲ್ಲಿ ಎಷ್ಟು ಈಡೇರಿಸಿದ್ದೀರಿ? ಬಹಿರಂಗ ಚರ್ಚೆಗೆ ಬನ್ನಿ. ವಿಜಯೇಂದ್ರ ಅವರೇ, ನೀವಿನ್ನೂ ಆಡಳಿತಕ್ಕೆ ಹೊಸಬರು. ತೆರಿಗೆ - ಅನುದಾನ - ಜಿಎಸ್‌ಟಿ ಇತ್ಯಾದಿ ವಿಚಾರಗಳೆಲ್ಲ ನಿಮ್ಮ ಪೂಜ್ಯ ತಂದೆಯವರಾದ ಬಿ.ಎಸ್.ಯಡಿಯೂರಪ್ಪನವರಿಗೇ ಅರ್ಥವಾಗಿಲ್ಲ, ನಿಮಗೆಷ್ಟು ಅರ್ಥವಾಗಬಹುದು? ಏಳು ಕೋಟಿ ಕನ್ನಡಿಗರಿಗೆ ಕೇಂದ್ರ ಸರ್ಕಾರ ಮಾಡುತ್ತಿರುವ ಅನ್ಯಾಯದ ವಿರುದ್ಧ ದನಿ ಎತ್ತುವ ಧಮ್-ತಾಖತ್ ನಿಮಗಾಗಲಿ, ನಿಮ್ಮ ಹದಿನೇಳು ಎಂ.ಪಿಗಳಿಗಾಗಲಿ ಎಲ್ಲಿದೆ? ‘ಬೇಟಿ ಬಚಾವೋ, ಬೇಟಿ ಪಡಾವೋ’ ಎಂದು ಆಗಾಗ ಘೋಷಣೆ ಕೂಗುತ್ತಿರುವ ಪ್ರಧಾನಿ ಅವರು ಈ ಘೋಷಣೆಗೆ ಬದ್ಧರಾಗಿದ್ದರೆ ಪೋಕ್ಸೊ ಆರೋಪಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಪಕ್ಷದ ರಾಷ್ಟ್ರೀಯ ಸಂಸದೀಯ ಮಂಡಳಿಯ ಸದಸ್ಯ ಸ್ಥಾನದಿಂದ ಮತ್ತು ಅವರನ್ನು ರಕ್ಷಿಸುತ್ತಿರುವ ನಿಮ್ಮನ್ನು ಪಕ್ಷದ ಅಧ್ಯಕ್ಷ ಸ್ಥಾನದಿಂದ ಕಿತ್ತುಹಾಕಬೇಕು. ನನ್ನ ವಿರುದ್ದ ಭ್ರಷ್ಟಾಚಾರದ ಆರೋಪ ಹೊರಿಸುವ ನೈತಿಕತೆ ನಿಮಗಿಲ್ಲ. ಸಿಬಿಐ ಮತ್ತು ಇ.ಡಿ ಸಂಸ್ಥೆಗಳು ರಾಜಕೀಯ ಒತ್ತಡಕ್ಕೆ ಮಣಿಯದೇ ನಿಷ್ಪಕ್ಷಪಾತವಾಗಿ ಕೆಲಸ ಮಾಡಿದರೆ, ಡಿನೋಟಿಪೀಕೇಷನ್, ಅಕ್ರಮ ಗಣಿಗಾರಿಕೆ... ಹೀಗೆ ಸಾಲು ಸಾಲು ಭ್ರಷ್ಟಾಚಾರದ ಹಗರಣಗಳ ಕಿಂಗ್‌ಪಿನ್ ಆಗಿರುವ ನಿಮ್ಮ ಜಾಗ ಎಲ್ಲಿರಬಹುದು ಎನ್ನುವುದನ್ನು ಒಮ್ಮೆ ಯೋಚಿಸಿ.
‘ನಮ್ಮ ಪ್ರಶ್ನೆಗಳಿಗೆ ಉತ್ತರಿಸಿ’
ಮೋದಿ ಸರ್ಕಾರದ ಕೊಡುಗೆಗಳು, ಹಿಂದಿನ ನಮ್ಮ ಬಿಜೆಪಿ ಸರ್ಕಾರದ ಯೋಜನೆಗಳ ಪಟ್ಟಿಯನ್ನು ಇಟ್ಟುಕೊಂಡು ನಿಮ್ಮ ಮುಂದೆ ಬರುತ್ತೇವೆ. ನಿಮ್ಮ ಆಡಳಿತಾವಧಿಯ ಮುಡಾ ಹಗರಣ, ಮಹರ್ಷಿ ವಾಲ್ಮೀಕಿ ನಿಮಗದ ಹಣ ದುರ್ಬಳಕೆ ಹಣ, ಕೈಗಾರಿಕಾ ನಿವೇಶನ ಹಂಚಿಕೆ ಹಗರಣ, ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿದ್ದರ ಬಗ್ಗೆ ಜನರಿಗೆ ಉತ್ತರ ನೀಡಿ. ನೀವು 15 ಬಾರಿ ರಾಜ್ಯದ ಬಜೆಟ್ ಮಂಡಿಸಿರುವ ದಾಖಲೆಯ ವೀರ, ನಿಜ. ಸರ್ಕಾರಿ ನೌಕರರಿಗೆ ಸಂಬಳ ಕೊಡುವುದಕ್ಕೂ ಸಾಲ ಮಾಡುವ ದುಸ್ಥಿತಿಗೆ ಇಳಿಸಿ ವಿಫಲರಾಗಿದ್ದೀರಿ ಏಕೆ? ಕೆಲಸ ಮಾಡಿ ಬಿಲ್ ಪಾವತಿಯಾಗದೇ ಕಣ್ಣೀರು ಸುರಿಸುತ್ತಿರುವ ಗುತ್ತಿಗೆದಾರರು ನಿಮ್ಮ ಆರ್ಥಿಕ ಸ್ಥಿತಿಗತಿಯನ್ನು ತಿಳಿಸುವ ನಿಜವಾದ ಸಾಕ್ಷಿದಾರರಾಗಿದ್ದಾರೆ. ಯಡಿಯೂರಪ್ಪ ವಿರುದ್ಧದ ಪಿತೂರಿಯ ಭಾಗವೇ, ‘ಪೋಕ್ಸೊ’ ಹೆಸರಿನ ಸುಳ್ಳು ಕೇಸು. ಇದಕ್ಕೂ ಇಷ್ಟರಲ್ಲೇ ನ್ಯಾಯಾಲಯದಿಂದ ನ್ಯಾಯದ ಉತ್ತರ ಸಿಗಲಿದೆ. ಆದರೆ ನಿಮಗೆ ಸುತ್ತಿಕೊಂಡಿರುವ ಮುಡಾ ಹಗರಣದ ಉರುಳಿನಿಂದ ಹಿಡಿದು, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಕಳಂಕಗಳನ್ನು ಹೊತ್ತ ನೀವು ರಾಜಕೀಯ ಜೀವನದಲ್ಲಿ ಮುಂದೆಂದೂ ಕಳಂಕ ರಹಿತರಾಗಿ ಹೊರಬರಲು ಸಾಧ್ಯವೇ ಇಲ್ಲ. ನನ್ನ ಈ ಹಿಂದಿನ ಪ್ರಶ್ನೆಗಳಿಗೆ ಮೊದಲು ಉತ್ತರಿಸಿ. ನಾನು ನಿಮ್ಮ ವೈಯಕ್ತಿಕ ಬದುಕಿನ ಚರಿತ್ರೆಯನ್ನು ಪ್ರಶ್ನಿಸಿಲ್ಲ ಬದಲಾಗಿ ಈ ನಾಡು ಹಾಗೂ ಜನರ ಹಿತದೃಷ್ಟಿಯಿಂದ ಒಬ್ಬ ಮುಖ್ಯಮಂತ್ರಿಗೆ ಒಬ್ಬ ಪ್ರಜೆಯಾಗಿ ಕೇಳಬೇಕಾದ ಪ್ರಶ್ನೆಗಳನ್ನಷ್ಟೇ ಕೇಳಿದ್ದೇನೆ.

ಮೋದಿ, ವಿಜಯೇಂದ್ರ ಪೋಸ್ಟ್‌ ಡಿಲೀಟ್‌

ADVERTISEMENT

ಕಾಂಗ್ರೆಸ್‌ನ ಗ್ಯಾರಂಟಿ ಮತ್ತು ಭರವಸೆಗಳನ್ನು ಕುರಿತು ನವೆಂಬರ್ 1ರಂದು ಮೋದಿ ಅವರು ‘ಎಕ್ಸ್‌’ನಲ್ಲಿ ಒಟ್ಟು ಐದು ಟ್ವೀಟ್‌ಗಳನ್ನು ಮಾಡಿದ್ದರು. ಇದಕ್ಕೆ ಕಾಂಗ್ರೆಸ್‌ ನಾಯಕರ ಪ್ರತಿಕ್ರಿಯೆ ಮತ್ತು ಟೀಕೆ ಬಂದ ಬೆನ್ನಲ್ಲೇ ಐದರಲ್ಲಿ ಒಂದು ಪೋಸ್ಟ್‌ ಅನ್ನು ಅಳಿಸಿಹಾಕಲಾಗಿದೆ. ಪೋಸ್ಟ್ ಅಳಿಸಿ ಹಾಕಿದ್ದರ ಕುರಿತು ಕಾಂಗ್ರೆಸ್ ನಾಯಕರು ಲೇವಡಿ ಮಾಡಿದ್ದಾರೆ. ಸಿದ್ದರಾಮಯ್ಯ ವಿರುದ್ಧ ಮಾಡಿದ್ದ ಸರಣಿ ಪೋಸ್ಟ್‌ಗಳಲ್ಲಿ ಹಲವನ್ನು ಭಾನುವಾರ ಸಂಜೆಯ ವೇಳೆಗೆ ವಿಜಯೇಂದ್ರ ಅಳಿಸಿಹಾಕಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.