ADVERTISEMENT

ಹೆಚ್ಚುವರಿ ಡಿಸಿಎಂ ಹುದ್ದೆ; ಹೈಕಮಾಂಡ್‌ ಬಳಿ ಹೋಗಿ ಮಾತನಾಡಲಿ: ಡಿ.ಕೆ.ಶಿವಕುಮಾರ್‌

​ಪ್ರಜಾವಾಣಿ ವಾರ್ತೆ
Published 27 ಜೂನ್ 2024, 10:54 IST
Last Updated 27 ಜೂನ್ 2024, 10:54 IST
ಡಿ.ಕೆ.ಶಿವಕುಮಾರ್‌
ಡಿ.ಕೆ.ಶಿವಕುಮಾರ್‌   

ಬೆಂಗಳೂರು: ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆಗಳ ಬಗ್ಗೆ ಮಾತನಾಡುವವರು ಮಾಧ್ಯಮಗಳ ಮುಂದೆ ಮಾತನಾಡುವುದರ ಬದಲು ಹೈಕಮಾಂಡ್‌ ಬಳಿ ಹೋಗಿ ಮಾತನಾಡಲಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ವಿಧಾನಸೌಧದ ಕೆಂಪೇಗೌಡ ಪ್ರತಿಮೆಗೆ ಮಾಲಾರ್ಪಣೆ ಕಾರ್ಯಕ್ರಮದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿ, ಈ ಕುರಿತು ಮಾತನಾಡುವವರು ತಮ್ಮ ಯಾವುದೇ ಆಸೆ, ಆಕಾಂಕ್ಷೆಗಳೇನೇ ಇದ್ದರೂ ಹೈಕಮಾಂಡ್‌ ಮುಂದೆ ಹೋಗಿ ಪರಿಹಾರ ಕಂಡುಕೊಳ್ಳಲಿ. ಮಾಧ್ಯಮಗಳಿಂದ ಪ್ರಚಾರ ಸಿಗುತ್ತದೆಯೇ ಹೊರತು ಪರಿಹಾರ ಸಿಗುವುದಿಲ್ಲ ಎಂದು ಅವರು ತಿರುಗೇಟು ನೀಡಿದರು.

ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆಯ ಕುರಿತು ಆರಂಭವಾಗಿರುವ ಚರ್ಚೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ತುಂಬಾ ಸಂತೋಷ, ಸಮಯ ವ್ಯರ್ಥ ಮಾಡದೇ ಹೈಕಮಾಂಡ್‌ ಬಳಿ ಹೋಗಿ ಪರಿಹಾರ ಕಂಡುಕೊಳ್ಳಲಿ. ಎಲ್ಲಿಗೆ ಬೇಕೋ ಅಲ್ಲಿಗೆ ಹೋಗಲಿ. ವೈದ್ಯರ ಬಳಿ ಹೋದರೆ ಔಷಧಿ ಕೊಡುತ್ತಾರೆ. ವಕೀಲರ ಬಳಿ ಹೋದರೆ ನ್ಯಾಯ ಕೊಡಿಸುತ್ತಾರೆ. ಯಾರು ಎಲ್ಲಿಗೆ ಬೇಕಾದರೂ ಹೋಗಲಿ ನನ್ನದೇನೂ ಅಭ್ಯಂತರವಿಲ್ಲ ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು.

ADVERTISEMENT

ಕೆಂಪೇಗೌಡ ಜಯಂತಿ ಆಹ್ವಾನ ಪತ್ರಿಕೆಯಲ್ಲಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಮತ್ತು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರ ಹೆಸರು ಕೈಬಿಟ್ಟಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅಧಿಕಾರಿಗಳು ಶಿಷ್ಟಾಚಾರ ಅನುಸರಿಸಿದ್ದಾರೆ. ದೇವೇಗೌಡರು ಹಾಸನ ಜಿಲ್ಲೆ ವ್ಯಾಪ್ತಿಗೆ ಸೇರಿದವರು. ಕುಮಾರಸ್ವಾಮಿ ಮಂಡ್ಯ ಸಂಸದರು. ನಿರ್ಮಲಾ ಸೀತಾರಾಮನ್‌ ಬೆಂಗಳೂರಿನಿಂದ ಆಯ್ಕೆ ಆಗಿರುವುದರಿಂದ ಅವರ ಹೆಸರು ಸೇರಿಸಲಾಗಿದೆ. ನಾವು ಯಾರನ್ನೂ ಅಗೌರವಿಸಿಲ್ಲ. ಅವರ ಹೆಸರು ಹಾಕಬೇಕಿತ್ತು. ಲೋಪವಾಗಿದೆ, ಮುಂದೆ ಸರಿಪಡಿಸುತ್ತೇವೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.