ADVERTISEMENT

ಪಿಎಸ್‌ಐ 545 ಹುದ್ದೆ: ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2024, 22:40 IST
Last Updated 21 ಅಕ್ಟೋಬರ್ 2024, 22:40 IST
<div class="paragraphs"><p>ಪೊಲೀಸ್</p></div>

ಪೊಲೀಸ್

   

(ಸಾಂದರ್ಭಿಕ ಚಿತ್ರ)

ಬೆಂಗಳೂರು: ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ (ಪಿಎಸ್‌ಐ) 545 ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳ ತಾತ್ಕಾಲಿಕ ಪಟ್ಟಿಯನ್ನು ಗೃಹ ಇಲಾಖೆ ಸೋಮವಾರ ಪ್ರಕಟಿಸಿದೆ.

ADVERTISEMENT

ಹುದ್ದೆಗಳ ಭರ್ತಿಗೆ ಪೊಲೀಸ್ ನೇಮಕಾತಿ ಮಂಡಳಿ ನಡೆಸಿದ್ದ ಪರೀಕ್ಷೆಯಲ್ಲಿ ಅಕ್ರಮ ನಡೆದಿತ್ತು. ಪರೀಕ್ಷಾ ಪ್ರಕ್ರಿಯೆ ವಿವಾದಕ್ಕೆ ಸಿಲುಕಿತ್ತು. ಬಳಿಕ, ಹೈಕೋರ್ಟ್‌ ಆದೇಶದಂತೆ ರಾಜ್ಯ ಸರ್ಕಾರ ಮರು ಪರೀಕ್ಷೆ ನಡೆಸಿತ್ತು. ಮರು ಪರೀಕ್ಷೆ ನಡೆಸಿದ್ದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಗೃಹ ಇಲಾಖೆಗೆ ಸಲ್ಲಿಸಿತ್ತು. ಆದರೆ, ಹೈದರಾಬಾದ್– ಕರ್ನಾಟಕ ಅಭ್ಯರ್ಥಿಗಳಿಗೆ ಮೀಸಲಾತಿ ನೀಡುವ ವಿಚಾರದಲ್ಲಿ ಗೊಂದಲ ಉಂಟಾದ ಕಾರಣ ಆಯ್ಕೆ ಪಟ್ಟಿ ಪ್ರಕಟ ಆಗಿರಲಿಲ್ಲ.  

ಅಭ್ಯರ್ಥಿಗಳಿಗೆ ಮೀಸಲಾತಿಗೆ ಸಂಬಂಧಿಸಿದಂತೆ 2023ರ ಫೆ. 1ರಂದು ಹೊರಡಿಸಿದ್ದ ಸುತ್ತೋಲೆಯಂತೆ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಇಲಾಖೆ ಸಿದ್ಧಪಡಿಸಿದೆ. ಅಲ್ಲದೆ, 2020ರ ಜೂನ್‌ 6ರ ಸುತ್ತೋಲೆಯ ಅನ್ವಯ ಆಯ್ಕೆ ಪಟ್ಟಿಯಿಂದ ಹೊರಗುಳಿಯುವ 40 ಕಲ್ಯಾಣ ಕರ್ನಾಟಕ ವೃಂದದ ಅಭ್ಯರ್ಥಿಗಳಿಗೆ ಅನುಗುಣವಾಗಿ 40 ಹುದ್ದೆಗಳನ್ನು ಕಲ್ಯಾಣ ಕರ್ನಾಟಕ ವೃಂದದಲ್ಲಿ ಕಾಯ್ದಿರಿಸಿ ಈ ಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಆಯ್ಕೆ ಪಟ್ಟಿಯು ಹೈಕೋರ್ಟ್‌ನಲ್ಲಿ ವಿಚಾರಣಾ ಹಂತದಲ್ಲಿರುವ ರಿಟ್‌ ಅರ್ಜಿಯ ಅಂತಿಮ ತೀರ್ಪಿಗೆ ಒಳಪಟ್ಟಿದೆ ಎಂದೂ ಇಲಾಖೆ ಸ್ಪಷ್ಟಪಡಿಸಿದೆ.

ಪಿಎಸ್ಐ ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳು ನೇಮಕಾತಿ ಪ್ರಕ್ರಿಯೆ ನಡೆಸುವಂತೆ ಆಗ್ರಹಿಸಿ ಇತ್ತೀಚೆಗೆ ಪ್ರತಿಭಟನೆ ನಡೆಸಿದ್ದರು.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.