ಬೆಂಗಳೂರು: ದ್ವಿತೀಯ ಪಿಯು ಫಲಿತಾಂಶದಲ್ಲಿ ಈ ಬಾರಿ ನಗರ ಮತ್ತು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಸಮಬಲ ಸಾಧಿಸಿದ್ದಾರೆ.
ಪರೀಕ್ಷೆಗೆ ಹಾಜರಾಗಿದ್ದ 1.48 ಲಕ್ಷ ಗ್ರಾಮೀಣರಲ್ಲಿ 1.20 ಲಕ್ಷ (ಶೇ 81.31) ವಿದ್ಯಾರ್ಥಿಗಳು, ನಗರ ಪ್ರದೇಶದ 5.32 ಲಕ್ಷ ವಿದ್ಯಾರ್ಥಿಗಳಲ್ಲಿ 4.32 ಲಕ್ಷ (ಶೇ 81.10) ತೇರ್ಗಡೆಯಾಗಿದ್ದಾರೆ. ಕಳೆದ ಬಾರಿ ಗ್ರಾಮೀಣ ವಿದ್ಯಾರ್ಥಿಗಳು ಕೊಂಚ ಮೇಲುಗೈ ಸಾಧಿಸಿದ್ದರು. ಕಳೆದ ಬಾರಿ ಪರೀಕ್ಷೆ ತೆಗೆದುಕೊಂಡಿದ್ದ 5.41 ಲಕ್ಷ ನಗರದ ಮಕ್ಕಳಲ್ಲಿ 4.04 ಲಕ್ಷ ಹಾಗೂ 1.60 ಲಕ್ಷ ಗ್ರಾಮೀಣರಲ್ಲಿ 1.19 ಲಕ್ಷ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರು. ಆದರೆ, ನಗರ ಪ್ರದೇಶದ ಕಾಲೇಜುಗಳಲ್ಲಿ ಪದವಿಪೂರ್ವ ಶಿಕ್ಷಣಕ್ಕೆ ಸೇರುವ ಮಕ್ಕಳ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆಯಾಗುತ್ತಿದೆ. ಗ್ರಾಮೀಣ ಕಾಲೇಜುಗಳ ಪ್ರವೇಶ ಕುಸಿಯುತ್ತಾ ಸಾಗಿರುವುದನ್ನು ಫಲಿತಾಂಶ ಸಾಬೀತುಪಡಿಸುತ್ತಿದೆ.
ವಿವಿಧ ನ್ಯೂನತೆ ಇರುವ ಮಕ್ಕಳ ಸಾಧನೆ: ದೃಷ್ಟಿ, ಶ್ರವಣ ದೋಷ ಸೇರಿದಂತೆ ವಿವಿಧ ನ್ಯೂನತೆ ಇರುವ 1,816 ಮಕ್ಕಳ ಪೈಕಿ 1,197 ಮಕ್ಕಳು ಈ ಬಾರಿಯ ದ್ವಿತೀಯ ಪಿಯು ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ದೃಷ್ಟಿದೋಷ ಇರುವ ಶೇ 79.19ರಷ್ಟು ಮಕ್ಕಳು, ಕಲಿಕೆಯಲ್ಲಿ ಹಿಂದುಳಿದಿದ್ದ 108 ಹಾಗೂ ಮಂದ ಬುದ್ದಿಯ 62 ಮಕ್ಕಳು ಉತ್ತೀರ್ಣರಾಗಿದ್ದಾರೆ. ಬಹು ಅಂಗವೈಕಲ್ಯ ಇದ್ದರೂ 69 ವಿದ್ಯಾರ್ಥಿಗಳು ಯಶಸ್ವಿಯಾಗಿ ಪದವಿಪೂರ್ವ ಶಿಕ್ಷಣವನ್ನು ಪೂರೈಸಿದ್ದಾರೆ. ವಿಜ್ಞಾನ ವಿಷಯದಲ್ಲಿ ಇದುವರೆಗೂ ರಾಜಧಾನಿ ಹಾಗೂ ಕರಾವಳಿ ಕಾಲೇಜು ಗಳ ವಿದ್ಯಾರ್ಥಿಗಳದ್ದೇ ಪಾರುಪತ್ಯ ಇತ್ತು. ಈ ಬಾರಿ ಮೊದಲ ಸ್ಥಾನ ಹುಬ್ಬಳ್ಳಿ ಪಾಲಾಗಿದೆ.
ಎರಡನೇ ಸ್ಥಾನವನ್ನು ನಾಲ್ವರು ಹಂಚಿಕೊಂಡಿದ್ದು, ಅವರಲ್ಲಿ ಇಬ್ಬರು ಮೈಸೂರು ವಿದ್ಯಾರ್ಥಿಗಳು ತಲಾ ಒಬ್ಬರು ಉಡುಪಿ ಹಾಗೂ ದಕ್ಷಿಣ ಕನ್ನಡದವರು. ವಾಣಿಜ್ಯ ವಿಭಾಗದ ಮೊದಲ ಸ್ಥಾನ ತುಮಕೂರಿಗೆ ಒಲಿದಿದೆ. ಎರಡನೇ ಸ್ಥಾನವನ್ನು ನಾಲ್ವರು ಹಂಚಿಕೊಂಡಿದ್ದು, ಶಿವಮೊಗ್ಗ, ಬೆಂಗಳೂರು, ಉಡುಪಿ ಹಾಗೂ ದಕ್ಷಿಣ ಕನ್ನಡದ ತಲಾ ಒಬ್ಬರು ಇದ್ದಾರೆ. ಕಲಾ ವಿಭಾಗದಲ್ಲಿ ವಿಜಯಪುರ, ಬಳ್ಳಾರಿ ಹಾಗೂ ಬೆಂಗಳೂರಿನ ತಲಾ ಒಬ್ಬರು ಮೊದಲ ಸ್ಥಾನ ಹಂಚಿಕೊಂಡಿದ್ದಾರೆ. ಎರಡನೇ ಸ್ಥಾನ ಧಾರವಾಡದ ಪಾಲಾಗಿದೆ. ವಾಣಿಜ್ಯ ವಿಭಾಗದಲ್ಲಿ ಮೂರನೇ ಸ್ಥಾನ ಪಡೆದ 11 ವಿದ್ಯಾರ್ಥಿಗಳಲ್ಲಿ ಎಂಟು ಹಾಗೂ ವಿಜ್ಞಾನ ವಿಭಾಗದಲ್ಲಿ ಮೂರನೇ ಸ್ಥಾನ ಪಡೆದ ಐವರಲ್ಲಿ ಮೂವರು ಬೆಂಗಳೂರಿನ ವಿದ್ಯಾರ್ಥಿಗಳು.
ಕೂಲಿಕಾರನ ಮಗಳಿಗೆ 5ನೇ ರ್‍ಯಾಂಕ್
ಲಿಂಗಸುಗೂರು (ರಾಯಚೂರು ಜಿಲ್ಲೆ): ಇಲ್ಲಿನ ಉಮಾ ಮಹೇಶ್ವರಿ ಪದವಿ ಪೂರ್ವ ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿನಿ ಕಾವೇರಿ ಶಿವಪ್ಪ ಅವರು ದ್ವಿತೀಯ ಪಿಯು ಪರೀಕ್ಷೆಯಲ್ಲಿ 600ಕ್ಕೆ 592 ಅಂಕ ಗಳಿಸಿ ರಾಜ್ಯಕ್ಕೆ 5ನೇ ರ‍್ಯಾಂಕ್ ಪಡೆದಿದ್ದಾರೆ.
ಲಿಂಗಸುಗೂರು ತಾಲ್ಲೂಕಿನ ಭೂಪುರ ತಾಂಡಾದ ಕೃಷಿ ಕೂಲಿಕಾರ ಶಿವಪ್ಪ ಅವರ ಮಗಳು ಕಾವೇರಿ ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿ ತಾಂಡಾದ ಕೀರ್ತಿ ಹೆಚ್ಚಿಸಿದ್ದಾರೆ ಎಂದು ತಾಂಡಾದ ನಿವಾಸಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
‘ಪ್ರಜಾವಾಣಿ’ ಜೊತೆ ಮಾತನಾಡಿದ ಕಾವೇರಿ, ‘ಇಷ್ಟೊಂದು ಅಂಕ ನಿರೀಕ್ಷೆ ಮಾಡಿರಲಿಲ್ಲ. ಕಾಲೇಜಿನಲ್ಲಿ ಉಪನ್ಯಾಸಕರ ಬೋಧನೆ ಸರಿಯಾಗಿ ಆಲಿಸಿ, ಪರಿಶ್ರಮ ಪಟ್ಟು ಓದಿರುವೆ. ಐಎಎಸ್ ಅಧಿಕಾರಿಯಾಗುವ ಗುರಿ ಇಟ್ಟುಕೊಂಡಿರುವೆ’ ಎಂದರು.
ರಾಜ್ಯದ ಮೊದಲ 10ರಲ್ಲಿ ಆಳ್ವಾಸ್‌ನ 45 ವಿದ್ಯಾರ್ಥಿಗಳು
ಮೂಡುಬಿದಿರೆ (ದಕ್ಷಿಣ ಕನ್ನಡ): ದ್ವಿತೀಯ ಪಿಯುಸಿ ಪರೀಕ್ಷೆಯ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ ರಾಜ್ಯದ ಮೊದಲ 10 ಸ್ಥಾನಗಳಲ್ಲಿ ಇಲ್ಲಿನ ಆಳ್ವಾಸ್ ಕಾಲೇಜಿನ ಒಟ್ಟು 45 ವಿದ್ಯಾರ್ಥಿಗಳು ಇದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ತಿಳಿಸಿದರು.
ಸಂಸ್ಥೆಯ 682 ವಿದ್ಯಾರ್ಥಿಗಳು ಶೇ 95ಕ್ಕಿಂತ ಅಧಿಕ ಅಂಕ ಪಡೆದಿದ್ದಾರೆ. ವಿಜ್ಞಾನ ವಿಭಾಗದಲ್ಲಿ ನೂತನ ಆರ್. ಗೌಡ 595 ಅಂಕ ಪಡೆದು ರಾಜ್ಯಕ್ಕೆ 4ನೇ ಸ್ಥಾನ, ವಾಣಿಜ್ಯ ವಿಭಾಗದಲ್ಲಿ ತರುಣ್ ಕುಮಾರ್ ಪಾಟೀಲ 594 ಅಂಕ ಪಡೆದು 4ನೇ ಸ್ಥಾನ ಗಳಿಸಿದ್ದಾರೆ ಎಂದು ಅವರು ವಿವರಿಸಿದರು.
ಆಕಾಶ್ ಪಿ.ಎಸ್., ಅನಿರುದ್ಧ ಪಿ.ಮೆನನ್, ಸುಮಿತ್ ಹಾಗೂ ಸುಧೀಂದ್ರ 5ನೇ ರ‍್ಯಾಂಕ್. ಸಹನಾ ಕೆ ಮತ್ತು ಶಿವಷೇಶ 6ನೇ ರ‍್ಯಾಂಕ್. ವಾಣಿ ಕೆ., ಮೇಧಾ ವಿ., ಜೀವಿಕಾ ಎಸ್., ಹರೀಶ್ ಉದಯ್, ಭೂಮಿ, ಷಾನ್ ಪಿಂಟೊ, ಅಶೋಕ್ ಸುತಾರ್ ಮತ್ತು ಮಂಜುನಾಥ ಡಿ. 7ನೇ ರ‍್ಯಾಂಕ್ ಗಳಿಸಿದ್ದಾರೆ. ಕಾಲೇಜಿನ 5 ವಿಶೇಷ ಚೇತನ ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸಿದ್ದಾರೆ ಎಂದು ಅವರು ತಿಳಿಸಿದರು.
9 ವಿದ್ಯಾಥಿಗಳು 4 ವಿಷಯಗಳಲ್ಲಿ, 38 ವಿದ್ಯಾರ್ಥಿಗಳು 3 ವಿಷಯಗಳಲ್ಲಿ, 148 ವಿದ್ಯಾಥಿಗಳು 2 ವಿಷಯಗಳಲ್ಲಿ, 571 ವಿದ್ಯಾರ್ಥಿಗಳು 1 ವಿಷಯದಲ್ಲಿ ಶೇ100 ಅಂಕ ಪಡೆದಿದ್ದಾರೆ ಎಂದರು. ಪ್ರಾಂಶುಪಾಲ ಪ್ರೊ.ಎಂ. ಸದಾಕತ್, ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಂ.ಡಿ. ಇದ್ದರು.
ತಾಯಿ, ಮಗಳು ಉತ್ತೀರ್ಣ
ಗೋಣಿಕೊಪ್ಪಲು (ಕೊಡಗು): ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತಾಯಿ ಮತ್ತು ಮಗಳು ಉತ್ತೀರ್ಣರಾಗಿದ್ದಾರೆ.
ಮಗಳು ಟಿ.ಎಸ್.ರಿನಿಶಾ ಅರುವತ್ತೊಕ್ಕಲಿನ ವಿದ್ಯಾನಿಕೇತನ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ 570 ಅಂಕ ಗಳಿಸಿದ್ದರೆ, ತಾಯಿ ಎಂ.ಯು.ಬೇಬಿರಾಣಿ ಅವರು ನೆಲ್ಲಿಹುದಿಕೇರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಖಾಸಗಿಯಾಗಿ ಪರೀಕ್ಷೆ ಬರೆದು 388 ಅಂಕ ಗಳಿಸಿದ್ದಾರೆ. ರಿನಿಶಾ ಕನ್ನಡದಲ್ಲಿ 96 ಅಂಕ, ಬೇಬಿರಾಣಿ 93 ಅಂಕ ಪಡೆದಿದ್ದಾರೆ.
ಸೌಂದರ್ಯ ಕಾಲೇಜಿನ ಸಾಧನೆ
ಪೀಣ್ಯ ದಾಸರಹಳ್ಳಿ: ಹಾವನೂರು ಬಡಾವಣೆಯ ಸೌಂದರ್ಯ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಐಮನ್ ಫಾತಿಮಾ ಅವರು ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ 592 (ಶೇ 98.66) ಅಂಕಗಳನ್ನು ಪಡೆದು ರಾಜ್ಯಕ್ಕೆ ಐದನೇ ಸ್ಥಾನ ಪಡೆದಿದ್ದಾರೆ.
ವಿಕಾಸ್ ಬಿ.ಆರ್. ಶೇ 98.5, ಪೂಜಾ ಎಂ., ಶಿಲ್ಪಾ ಎಸ್. ತಲಾ ಶೇ 98.33 ಅಂಕ ಪಡೆದಿದ್ದಾರೆ. ವಿಜ್ಞಾನ ವಿಭಾಗದ ವಿದ್ಯಾರ್ಥಿ ಕೆ. ದೀಪಾಂಕರ್ ವಸಂತ್ ಶೇ 98.66 ಅಂಕ ಗಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.