ಬೆಂಗಳೂರು:'ಜ್ಞಾನ ದೇಗುಲ'ಗಳೆಂದೇ ಕರೆಸಿಕೊಳ್ಳುವ ಸರ್ಕಾರಿ ಗ್ರಂಥಾಲಯಗಳು ಈಗ ಕತ್ತಲ ಕೂಪಗಳಾಗಿವೆ. ಮಳೆ ಬಂದರೆ ಸೋರುತ್ತವೆ, ವಿದ್ಯುತ್ ಇಲ್ಲದಿದ್ದರೆ ಕತ್ತಲು ಆವರಿಸುತ್ತದೆ, ಮೇಜು– ಕುರ್ಚಿಗಳೂ ಮುರಿದು ಹೋಗಿವೆ. ಗ್ರಂಥಾಲಯ ಇಲಾಖೆಯೇ ಅಕ್ಷರಶಃ ಸ್ಥಗಿತಗೊಳ್ಳುವ ಸ್ಥಿತಿಗೆ ತಲುಪಿದೆ!
ಇದು ರಾಜ್ಯದಲ್ಲಿರುವ ಗ್ರಂಥಾಲಯಗಳ ಒಟ್ಟಾರೆ ಸ್ಥಿತಿ. ಇದಕ್ಕೆ ಮುಖ್ಯ ಕಾರಣ ಪ್ರತಿ ವರ್ಷ ಗ್ರಂಥಾಲಯ ಇಲಾಖೆ ಸಿದ್ಧಪಡಿಸಿಕೊಡುವ ಬಜೆಟ್‌ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸಕಾಲದಲ್ಲಿ ಒಪ್ಪಿಗೆ ನೀಡದೇ ಸತಾಯಿಸುತ್ತಿರುವುದು. 2018–19ರ ಸಾಲಿನ ಬಜೆಟ್‌ಗೆ ಇನ್ನೂ ಒಪ್ಪಿಗೆ ನೀಡಿಲ್ಲ. ಇದರಿಂದ ಇಲಾಖೆ ಅಧಿಕಾರಿಗಳು ಮತ್ತು ಪ್ರಕಾಶಕರು ಆತಂಕಕ್ಕೆ ಒಳಗಾಗಿದ್ದಾರೆ.
ಶಿಕ್ಷಣ ಇಲಾಖೆ ಕಳೆದ ಕೆಲವು ವರ್ಷಗಳಿಂದ ಬಜೆಟ್‌ಗೆ ಸಕಾಲದಲ್ಲಿ ಒಪ್ಪಿಗೆ ನೀಡದೇ ಇರುವುದರಿಂದ ಪುಸ್ತಕಗಳ ಖರೀದಿ, ಗ್ರಂಥಾಲಯಗಳ ದುರಸ್ತಿ, ಮೇಜು– ಕುರ್ಚಿಗಳ ದುರಸ್ತಿ ಅಥವಾ ಹೊಸ ಪೀಠೋಪಕರಣಗಳ ಖರೀದಿ, ಕಂಪ್ಯೂಟರ್ ರಿಪೇರಿ ಅಥವಾ ಹೊಸ ಕಂಪ್ಯೂಟರ್‌ಗಳ ಖರೀದಿ, ಯುಪಿಎಸ್ ದುರಸ್ತಿ ಸಾಧ್ಯವಾಗುತ್ತಿಲ್ಲ. ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುವ ವಿದ್ಯಾರ್ಥಿಗಳಿಗೆ ಹೊಸ ಪುಸ್ತಕಗಳನ್ನು ಖರೀದಿಸಿ ಕೊಡಲು ಸಾಧ್ಯವಾಗುತ್ತಿಲ್ಲ ಎಂದು ಇಲಾಖೆ ಮೂಲಗಳು ತಿಳಿಸಿವೆ.
2016 ಕ್ಕೂ ಹಿಂದೆ ಗ್ರಂಥಾಲಯ ಪ್ರಾಧಿಕಾರಗಳು ಸಿದ್ಧಪಡಿಸಿ ಸಲ್ಲಿಸುತ್ತಿದ್ದ ಬಜೆಟ್‌ಗೆ ಇಲಾಖೆ ನಿರ್ದೇಶಕರು ಒಪ್ಪಿಗೆ ನೀಡುತ್ತಿದ್ದರು. ಇಲಾಖೆಯ ಬೈಲಾ ಕೂಡ ನಿರ್ದೇಶಕರಿಗೆ ಆ ಅಧಿಕಾರವನ್ನು ನೀಡಿತ್ತು. ಆದರೆ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 2016 ರಲ್ಲಿ ಬೈಲಾಗೆ ತಿದ್ದುಪಡಿ ಮಾಡದೇ ಈ ಅಧಿಕಾರಕ್ಕೆ ಕೊಕ್ಕೆ ಹಾಕಿದೆ. ಇದು ಕಾನೂನು ಬಾಹಿರ. ಗ್ರಂಥಾಲಯ ಇಲಾಖೆ ನಿರ್ದೇಶಕರು ಇದಕ್ಕೆ ಆಕ್ಷೇಪ ಎತ್ತದೇ ಸುಮ್ಮನಿರುವ ಕಾರಣ ಗ್ರಂಥಾಲಯ ಇಲಾಖೆಯೇ ಈಗ ತ್ರಿಶಂಕು ಸ್ಥಿತಿ ತಲುಪಿದೆ ಎಂದು ಗ್ರಂಥಾಲಯ ಇಲಾಖೆಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
‘ವಿವಿಧ ಜಿಲ್ಲೆಗಳ ಗ್ರಂಥಾಲಯಗಳು, ಬಿಬಿಎಂಪಿ, ನಗರ ಪಾಲಿಕೆಗಳು ಮತ್ತು ಸ್ಥಳೀಯ ಸಂಸ್ಥೆಗಳಿಗೆ ಪ್ರತ್ಯೇಕ ಗ್ರಂಥಾಲಯ ಪ್ರಾಧಿಕಾರಗಳು ಇರುತ್ತವೆ. ಇವು ಇಡೀ ವರ್ಷದ ಖರ್ಚು– ವೆಚ್ಚದ ಅಂದಾಜಿನ ಬಜೆಟ್ ತಯಾರಿಸಿ ನಿರ್ದೇಶಕರಿಗೆ ಕಳಿಸಬೇಕು. 2016 ರಿಂದ ಈ ಪರಿಪಾಠಕ್ಕೆ ಕಡಿವಾಣ ಬಿದ್ದಿದೆ. 2016 ರಲ್ಲಿ ವಿತ್ತೀಯ ವರ್ಷ ಮುಗಿಯಲು ಕೇವಲ 3 ದಿನಗಳು ಇದ್ದಾಗ ಒಪ್ಪಿಗೆ ನೀಡಲಾಗಿತ್ತು. ಅಲ್ಲಿಂದ ಈವರೆಗೂ ಇದೇ ಸಮಸ್ಯೆ ಮುಂದು
ವರಿದಿದೆ’ ಎಂದು ಅವರು ಹೇಳಿದರು.
‘ಸಾಮಾನ್ಯ ಆಡಳಿತ, ಗ್ರಂಥಗಳು ಮತ್ತು ಉಪಕರಣಗಳ ಖರೀದಿ, ಗ್ರಂಥಾಲಯ ನಿರ್ವಹಣೆ, ಸಾರ್ವಜನಿಕ ಕಾರ್ಯ ಮತ್ತು ಇತರ ಬಾಬ್ತುಗಳ ಅಡಿಯಲ್ಲಿ ಖರ್ಚು– ವೆಚ್ಚ ಅಂದಾಜು ಮಾಡಿ ಬಜೆಟ್ ರೂಪಿಸಲಾಗುತ್ತದೆ. ಇದಕ್ಕೆ ಬೇಗನೆ ಅನುಮೋದನೆ ಸಿಕ್ಕಿದರೆ ಇಲಾಖೆ ಕೆಲಸಗಳನ್ನು ಮಾಡಬಹುದು. ವಿತ್ತೀಯ ವರ್ಷ ಕೊನೆಗೊಳ್ಳುವ ಹಂತದಲ್ಲಿ ಅನುಮೋದನೆ ನೀಡುವುದರಿಂದ ಇಲಾಖೆಯ ಯಾವುದೇ ತುರ್ತು ಕೆಲಸಗಳನ್ನೂ ಮಾಡಿಸಲು ಸಾಧ್ಯವಾಗುತ್ತಿಲ್ಲ’ ಎಂದು ಅವರು ವಿವರಿಸಿದರು.
2015 ರ ಬಳಿಕ ಗ್ರಂಥಗಳ ಖರೀದಿ ಆಗಿಲ್ಲ
ಬಜೆಟ್‌ಗೆ ಅನುಮೋದನೆ ತಡವಾಗುತ್ತಿರುವುದರಿಂದ ಪುಸ್ತಕಗಳ ಖರೀದಿಯೂ ಸರಿಯಾಗಿ ಆಗುತ್ತಿಲ್ಲ. 2015 ಸಾಲಿನ ಪುಸ್ತಕ ಖರೀದಿ 2017 ರಲ್ಲಿ ಆಗಿದೆ. ಈ ಖರೀದಿಯಲ್ಲೂ ಶೇ 50 ರಷ್ಟು ಪುಸ್ತಕಗಳ ಖರೀದಿಗೆ ಮಾತ್ರ ಹಣ ಸಂದಾಯ ಆಗಿದೆ. 2016 ರಿಂದ 2018 ರವರೆಗಿನ ಪುಸ್ತಕ ಖರೀದಿ ನನೆಗುದಿಯಲ್ಲಿವೆ. ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಪ್ರಕಾಶಕ ಸೃಷ್ಟಿ ನಾಗೇಶ್ ದೂರಿದರು.
ಅನುಮೋದನೆಗೆ ಕ್ರಮ
ಗ್ರಂಥಾಲಯ ಇಲಾಖೆಯ ಪರಿಶೀಲನಾ ಸಭೆ ಮುಂದಿನ ವಾರ ನಡೆಸಲಾಗುವುದು ಮತ್ತು ಬಜೆಟ್ ಅನುಮೋದನೆಗೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು. ಗ್ರಂಥಾಲಯ ಇಲಾಖೆ ಕಾಯಕಲ್ಪಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.