ಚಿಕ್ಕಮಗಳೂರು/ಶಿವಮೊಗ್ಗ: ರಾಜ್ಯದ ಹಲವೆಡೆ ಶನಿವಾರ ರಾತ್ರಿ ಮತ್ತು ಭಾನುವಾರ ಬಿರುಸಿನ ಮಳೆಯಾಗಿದೆ. ಶನಿವಾರ ರಾತ್ರಿಯಿಂದ ಬಿಟ್ಟೂಬಿಡದೆ ಸುರಿದ ಮಳೆಯ ಆರ್ಭಟಕ್ಕೆ ಶಿವಮೊಗ್ಗ ನಗರ ಅಕ್ಷರಶಃ ತತ್ತರಿಸಿತು.
ಕೊಡಗು ಜಿಲ್ಲೆಯ ವಿರಾಜಪೇಟೆ ಪಟ್ಟಣ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾನುವಾರ ಬಿರುಸಿನ ಮಳೆಯಾಗಿದೆ. ಮಂಡ್ಯ ಜಿಲ್ಲೆಯ ಚಿನ್ನೇನಹಳ್ಳಿಯಲ್ಲಿ ಸತತ ಮಳೆಗೆ ಮನೆಯೊಂದು ಕುಸಿದು ಬಿದ್ದಿದೆ.
ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ ಭಾಗದಲ್ಲಿ ಭಾರಿ ಮಳೆ ಸುರಿದು ಆತಂಕ ಸೃಷ್ಟಿಸಿತು. ಮುಳ್ಳಯ್ಯನಗಿರಿ ಮತ್ತು ಬಾಬಾಬುಡನ್ ಗಿರಿ ಭಾಗದಲ್ಲಿ ರಾತ್ರಿಯಿಡೀ ಮಳೆ ಸುರಿಯಿತು. ಮುಳ್ಳಯ್ಯನಗಿರಿಯ ರಸ್ತೆಯಲ್ಲಿ ಎರಡು ಅಡಿಗೂ ಹೆಚ್ಚು ನೀರು ನುಗ್ಗಿತು. ಧಾರಾಕಾರವಾಗಿ ಹರಿದ ಕೆಂಪು ನೀರನ್ನು ಕಂಡು ಪ್ರವಾಸಿಗರು ಮತ್ತು ಸ್ಥಳೀಯರು ಆತಂಕಗೊಂಡರು. ಇಲ್ಲಿ ಹಿಂದೆಂದೂ ಕಂಡು ಕೇಳರಿಯದಷ್ಟು ಜೋರು ಮಳೆಯಾಗಿದೆ.
ಶಿವಮೊಗ್ಗ ನಗರದ ಬಳಿ ಇರುವ ತುಂಗಾ ಹಾಗೂ ಭದ್ರಾ ಎಡದಂಡೆ ಕಾಲುವೆಗಳು ತುಂಬಿ ಹರಿದು ಆಸುಪಾಸಿನ ಮನೆಗಳಿಗೆ ನೀರು ನುಗ್ಗಿದೆ. ವಿನೋಬನಗರ ಚಾನಲ್ ಬಳಿ ಐದು ಮನೆಗಳು ಕುಸಿದಿವೆ. ಇಲ್ಲಿನ ನವುಲೆ ಕೆರೆಗೆ ಹೊಂದಿಕೊಂಡಂತೆಯೇ ಇರುವ ಎರಡು ಕ್ರೀಡಾಂಗಣಗಳು ಸಂಪೂರ್ಣ ಜಲಾವೃತವಾಗಿವೆ. ತಗ್ಗು ಪ್ರದೇಶದಲ್ಲಿರುವವರ ಸ್ಥಳಾಂತರಕ್ಕೆ ಮುಂದಾಗಿರುವ ಮಹಾನಗರ ಪಾಲಿಕೆ, ಎರಡು ಕಡೆ ಕಾಳಜಿ ಕೇಂದ್ರಗಳ ತೆರೆದಿದೆ.
ಸಮೀಪದ ಉಂಬ್ಳೆಬೈಲು ಬಳಿಯ ಕೈದೊಟ್ಲು ಚಂದ್ರೇಗೌಡರ ಕೋಳಿಫಾರಂಗೆ ಮಳೆಯ ನೀರು ನುಗ್ಗಿ ಮೂರು ಸಾವಿರಕ್ಕೂ ಹೆಚ್ಚು ಕೋಳಿಗಳು ನೀರಿನಲ್ಲಿ ಮುಳುಗಿ ಸಾವಿಗೀಡಾಗಿವೆ. ವಿನೋಬನಗರದ ವಿಕಾಸ ಶಾಲೆ ಹಿಂಭಾಗ ಮನೆಗೆ ನೀರು ನುಗ್ಗಿ ಅದರಲ್ಲಿ ಸಿಲುಕಿದ್ದ ವೃದ್ಧ ದಂಪತಿಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದರು.
ಅಜ್ಜಂಪುರ ತಾಲ್ಲೂಕಿನಲ್ಲಿ ದೊಡ್ಡಬೋಕಿ ಬಳಿ ಮಳೆಯ ನೀರು ಹೊಲಗದ್ದೆಗಳಿಗೆ ನುಗ್ಗಿದೆ. ಅಡಿಕೆ ತೋಟಗಳು ಜಲಾವೃತವಾಗಿವೆ. ಕಡೂರು, ತರೀಕೆರೆ, ಎನ್.ಆರ್.ಪುರ, ಕೊಪ್ಪ, ಕಳಸ, ಮೂಡಿಗೆರೆ, ಆಲ್ದೂರು, ಬಾಳೆಹೊನ್ನೂರು ಸೇರಿ ಎಲ್ಲೆಡೆ ಉತ್ತಮ ಮಳೆಯಾಗಿದೆ.
ಐಗಳಿ ವರದಿ(ಬೆಳಗಾವಿ ಜಿಲ್ಲೆ):
ಅಥಣಿ ತಾಲ್ಲೂಕಿನ ಐಗಳಿ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಮೆಕ್ಕೆಜೋಳ, ಶೇಂಗಾ ಬೆಳೆದಿದ್ದ ಜಮೀನುಗಳಲ್ಲಿ ಅಪಾರ ಪ್ರಮಾಣದಲ್ಲಿ ನೀರು ನುಗ್ಗಿದೆ. ತೊಗರಿ ಬೆಳೆಗೂ ಹಾನಿಯ ಆತಂಕ ಕಾಡುತ್ತಿದೆ.
ರೈತರು ಮೆಕ್ಕೆಜೋಳ, ಶೇಂಗಾ ಕಟಾವಿಗೆ ಸಿದ್ಧತೆ ನಡೆಸಿದ್ದರು. ಆದರೆ, ಮಳೆಯಿಂದ ರೈತರ ಜಮೀನುಗಳಲ್ಲಿ ನೀರು ನಿಂತಿದೆ. ಕೆಲವು ರೈತರು ಮೆಕ್ಕೆಜೋಳ ಕಟಾವು ಮಾಡಿ, ರಾಶಿಗೆ ತಯಾರಿ ನಡೆಸಿದ್ದರು. ಅದಕ್ಕೂ ಈಗ ತೊಡಕಾಗಿದೆ. ವಾತಾವರಣ ತಂಪೇರಿದ ಕಾರಣ, ಮೆಕ್ಕೆಜೋಳ ಕಪ್ಪು ಬಣ್ಣಕ್ಕೆ ತಿರುಗಿದೆ. ತೊಗರಿ ಬೆಳೆಗಳ ಹೂ ಉದುರುತ್ತಿದ್ದು ರೈತರು ಕಂಗಾಲಾಗಿದ್ದಾರೆ.
‘ಮಳೆಯಿಂದ ಹಾನಿಗೀಡಾದ ಬೆಳೆಗಳ ಸಮೀಕ್ಷೆ ಮಾಡಲಾಗುತ್ತಿದೆ’ ಎಂದು ತೆಲಸಂಗದ ಸಹಾಯಕ ಕೃಷಿ ಅಧಿಕಾರಿ ವೆಂಕಪ್ಪ ಉಪ್ಪಾರ ತಿಳಿಸಿದ್ದಾರೆ.
ದಾವಣಗೆರೆ ವರದಿ:
ಜಿಲ್ಲೆಯ ಚನ್ನಗಿರಿ, ನ್ಯಾಮತಿ ಮತ್ತು ಹೊನ್ನಾಳಿ ತಾಲ್ಲೂಕಿನಲ್ಲಿ ಭಾನುವಾರ ಭಾರಿ ಮಳೆ ಸುರಿದಿದೆ. ಚನ್ನಗಿರಿಯಲ್ಲಿ ಅರಿದ್ರಾವತಿ ಹಳ್ಳ ತುಂಬಿಹರಿದಿದ್ದು, ತೋಟ–ಗದ್ದೆಗಳು ಜಲಾವೃತಗೊಂಡಿವೆ. ಮಳೆ–ಗಾಳಿಗೆ ಅಡಿಕೆ ಮರಗಳು ನೆಲಕಚ್ಚಿವೆ.
ಕಿಕ್ಕೇರಿ ವರದಿ (ಮಂಡ್ಯ ಜಿಲ್ಲೆ):
ಶನಿವಾರ ತಡರಾತ್ರಿ ಸುರಿದ ಮಳೆಯಿಂದಾಗಿ ಹೋಬಳಿಯ ಚಿನ್ನೇನಹಳ್ಳಿಯ ರಾಜೇಗೌಡರ ಪತ್ನಿ ಪಾರ್ವತಮ್ಮ ಅವರ ಮಣ್ಣಿನ ಮನೆ ಕುಸಿದಿದೆ. ದವಸಧಾನ್ಯ, ಪಾತ್ರೆ, ಮಂಚ, ಬಟ್ಟೆಗಳು ನಾಶವಾಗಿವೆ. ಪ್ರಾಣಾಪಾಯ ಉಂಟಾಗಿಲ್ಲ. ಗೋಡೆ ಕುಸಿದ ಶಬ್ದ ಕೇಳಿದ ಪಾರ್ವತಮ್ಮ ತಕ್ಷಣ ಹೊರಗೆ ಬಂದಿದ್ದಾರೆ.
ನೀರುಪಾಲಾಗಿದ್ದ ಯುವಕನ ಮೃತದೇಹ ಪತ್ತೆ
ನೇಸರಗಿ (ಬೆಳಗಾವಿ ಜಿಲ್ಲೆ): ಸಮೀಪದ ಕೊಳದೂರ ಹಳ್ಳದಲ್ಲಿ ತೇಲಿಹೋಗಿದ್ದ ಬೆಳಗಾವಿ ತಾಲ್ಲೂಕಿನ ಕರಡಿಗುದ್ದಿ ಗ್ರಾಮದ ನಿವಾಸಿ ಯಲ್ಲಪ್ಪ ಬೋರನ್ನವರ(34) ಮೃತದೇಹ ಭಾನುವಾರ ಪತ್ತೆಯಾಗಿದೆ.
ಸತತ ಮಳೆಯಿಂದಾಗಿ ಈಚೆಗೆ ಈ ಹಳ್ಳ ಉಕ್ಕಿ ಹರಿಯುತ್ತಿತ್ತು. ಆದರೆ, ಅದರ ರಭಸವನ್ನೂ ಲೆಕ್ಕಸದೆ ಯಲ್ಲಪ್ಪ ದಾಟುತ್ತಿದ್ದಾಗ, ಬೈಕ್ ಸಮೇತವಾಗಿ ನೀರುಪಾಲಾಗಿದ್ದರು. ಮೃತದೇಹ ಪತ್ತೆಗಾಗಿ ಅಗ್ನಿಶಾಮಕ ದಳ, ಎನ್‌ಡಿಆರ್‌ಎಫ್ ಸಿಬ್ಬಂದಿ ಮತ್ತು ನೇಸರಗಿ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಗ್ರಾಮದ ಜೋಡಗುಡಿ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿನ ಸೇತುವೆ ಕೆಳಗೆ ಮೃತದೇಹ ಪತ್ತೆಯಾಯಿತು.
13 ಜಿಲ್ಲೆಗಳಿಗೆ ಇಂದು ‘ಯೆಲ್ಲೊ ಅಲರ್ಟ್’
ಬೆಂಗಳೂರು: ರಾಜ್ಯದ ವಿವಿಧೆಡೆ ಸೋಮವಾರ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಹವಾಮಾನ
ಇಲಾಖೆಯು 13 ಜಿಲ್ಲೆಗಳಿಗೆ ‘ಯೆಲ್ಲೊ ಅಲರ್ಟ್’ ಘೋಷಿಸಿದೆ.
ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಬಳ್ಳಾರಿ, ದಾವಣಗೆರೆ, ಶಿವಮೊಗ್ಗ, ಉತ್ತರ ಕನ್ನಡ, ಉಡುಪಿ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಿಗೆ ‘ಯೆಲ್ಲೊ ಅಲರ್ಟ್’ ನೀಡಲಾಗಿದೆ. ಈ ಜಿಲ್ಲೆಗಳ ಕೆಲವೆಡೆ ಗುಡುಗು ಸಹಿತ ಭಾರಿ ಮಳೆಯಾಗುವ ಸಂಭವವಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.
ಕರಾವಳಿಯಲ್ಲಿ ಪ್ರತಿ ಗಂಟೆಗೆ 35 ಕಿ.ಮೀ.ನಿಂದ 55 ಕಿ.ಮೀ.ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದ್ದು, ಚಂಡಮಾರುತದ ವಾತಾವರಣ ಇರಲಿದೆ. ಆದ್ದರಿಂದ, ಮೀನುಗಾರರು ಎಚ್ಚರವಹಿಸಬೇಕು ಎಂದು ಇಲಾಖೆ ತಿಳಿಸಿದೆ.
ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಕೆಲವೊಮ್ಮೆ ಮಳೆ ಜೋರಾಗುವ ಸಂಭವವಿದೆ ಎಂದಿದೆ.
ಮಂಗಳವಾರವೂ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರು ನಗರ ಸೇರಿ ಎಂಟು ಜಿಲ್ಲೆಗಳಿಗೆ ‘ಯೆಲ್ಲೊ ಅಲರ್ಟ್’ ನೀಡಲಾಗಿದೆ. ಇದೇ 26ರವರೆಗೂ ಮಳೆ ಮುಂದುವರಿಯುವ ಮುನ್ಸೂಚನೆಯನ್ನು ಇಲಾಖೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.