ಹುಬ್ಬಳ್ಳಿ/ದಾವಣಗೆರೆ: ಹಾವೇರಿ, ಗದಗ, ಹುಬ್ಬಳ್ಳಿ–ಧಾರವಾಡ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಮೈಸೂರು, ಮಂಡ್ಯ ಸೇರಿದಂತೆ ರಾಜ್ಯದ ಹಲವೆಡೆ ಭಾನುವಾರ ರಾತ್ರಿ ಮತ್ತು ಸೋಮವಾರ ಧಾರಾಕಾರ ಮಳೆಯಾಗಿದೆ.
ದಾವಣಗೆರೆ ತಾಲ್ಲೂಕಿನ ಮಂಡಲೂರು ಗ್ರಾಮದ ಹಳ್ಳ ತುಂಬಿ ಹರಿದಿದ್ದು, ಸೇತುವೆ ಕೊಚ್ಚಿ ಹೋಗಿದೆ. ಜಿಲ್ಲೆಯ ಗಡಿಭಾಗದಲ್ಲಿರುವ ಮಂಡಲೂರು ಹಾಗೂ ಗೊಲ್ಲರಹಟ್ಟಿ, ಚಿತ್ರದುರ್ಗ ಜಿಲ್ಲೆಯ ಹಲವು ಗ್ರಾಮಗಳ ನಡುವಿನ ಸಂಪರ್ಕ ಕಡಿತಗೊಂಡಿದೆ. ಕುರ್ಕಿ ಗ್ರಾಮದ ರೈಲ್ವೆ ಕೆಳಸೇತುವೆಯಲ್ಲಿ ಹರಿಯುತ್ತಿದ್ದ ಭಾರಿ ಪ್ರಮಾಣದ ನೀರಿನಲ್ಲಿ ಶಾಲಾ ವಾಹನವೊಂದು ಸಿಲುಕಿಕೊಂಡಿತ್ತು. ವಾಹನದಲ್ಲಿದ್ದ ವಿದ್ಯಾರ್ಥಿಗಳನ್ನು ಸ್ಥಳೀಯರು ರಕ್ಷಿಸಿದ್ದಾರೆ.
ಹಾವೇರಿ ಜಿಲ್ಲೆಯಲ್ಲಿ ಹಲವು ಗ್ರಾಮಗಳಲ್ಲಿ ಪ್ರವಾಹ ಸ್ಥಿತಿ ಉಂಟಾಗಿದೆ. ಮನೆಗಳಿಗೆ ನೀರು ನುಗ್ಗಿ ಸಂಕಷ್ಟದಲ್ಲಿ ಸಿಲುಕಿರುವ 282 ಮಂದಿಯನ್ನು ರಕ್ಷಿಸಿರುವ ಜಿಲ್ಲಾಡಳಿತ, ಕಾಳಜಿ ಕೇಂದ್ರದಲ್ಲಿ ಆಶ್ರಯ ಕಲ್ಪಿಸಿದೆ. ಸವಣೂರು–ಬಂಕಾಪೂರ ಕ್ರಾಸ್ ಸಂಪರ್ಕಿಸುವ ರಾಜ್ಯ ಹೆದ್ದಾರಿ ನಾಲ್ಕು ತಾಸು ಬಂದ್ ಆಗಿತ್ತು. ಹಾವೇರಿ ಜಿಲ್ಲೆ ಸವಣೂರು ತಾಲ್ಲೂಕಿನ ಬರದೂರು ಗ್ರಾಮದ ರಾಮಲಿಂಗೇಶ್ವರ ಮಠ ಸಂಪೂರ್ಣ ಜಲಾವೃತಗೊಂಡಿದ್ದರಿಂದ ಮಠದಲ್ಲಿ ತಂಗಿದ್ದ 24 ಜನರ ಪಂಢರಪುರ ಪಾದಯಾತ್ರಿಗಳ ತಂಡವನ್ನು ಅಗ್ನಿಶಾಮಕದಳದ ಸಿಬ್ಬಂದಿ ರಕ್ಷಿಸಿದರು.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಬ್ಯಾಡರಹಳ್ಳಿ ಗ್ರಾಮದಲ್ಲಿ ಸೋಮವಾರ ಬೆಳಿಗ್ಗೆ ಮನೆಯ ಶಿಥಿಲ ಗೋಡೆ ಕುಸಿದು ಮೀನಾಕ್ಷಮ್ಮ ಮಹಾಂತೇಶ್ (56) ಎಂಬುವರು ಮೃತಪಟ್ಟಿದ್ದಾರೆ. ಸೋಮವಾರ ಸಂಭವಿಸಿದೆ. ಮನೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಗೋಡೆ ಅವರ ಮೇಲೆ ಬಿದ್ದಿದೆ.
ನಿರಂತರ ಮಳೆಯಿಂದ ಉಂಟಾದ ಹತ್ತಿ ಬೆಳೆ ಹಾನಿಗೆ ಮನನೊಂದು ಬಳ್ಳಾರಿ ಜಿಲ್ಲೆಯ ಹಳೇಕೋಟೆ ಗ್ರಾಮದ ರೈತ ಖಿಚಡಿ ಸಿದ್ದಯ್ಯ(58) ಸೋಮವಾರ ತಮ್ಮ ಹೊಲದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
‘ಸಿದ್ದಯ್ಯ ಈ ಮುಂಗಾರಿನಲ್ಲಿ ತಮ್ಮ 10 ಎಕರೆ ಹೊಲದಲ್ಲಿ ಹತ್ತಿ ಬೆಳೆದಿದ್ದರು. ಮಳೆ ಸುರಿದಿದ್ದರಿಂದ ಹತ್ತಿ ಬೆಳೆ ಕೊಳೆತು ಕಪ್ಪಾಗಿತ್ತು. ‘ಕರ್ನಾಟಕ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್’ನಲ್ಲಿ ₹1.60 ಲಕ್ಷ ಸಾಲವನ್ನೂ ಪಡೆದಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.