ADVERTISEMENT

Karnataka Rains | ಸೇತುವೆ ಮುಳುಗಡೆ: ಮನೆ, ತೋಟ ಜಲಾವೃತ

ತುಂಗಭದ್ರಾ ಅಣೆಕಟ್ಟೆ: 1.01 ಲಕ್ಷ ಕ್ಯುಸೆಕ್‌ ನೀರು ಹೊರಕ್ಕೆ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2024, 0:26 IST
Last Updated 23 ಅಕ್ಟೋಬರ್ 2024, 0:26 IST
<div class="paragraphs"><p>ಹಾಸನ ಹೊರವಲಯದ ರಿಂಗ್‌ ರಸ್ತೆಯಲ್ಲಿ ನೀರು ಹರಿದು, ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿತ್ತು.</p></div>

ಹಾಸನ ಹೊರವಲಯದ ರಿಂಗ್‌ ರಸ್ತೆಯಲ್ಲಿ ನೀರು ಹರಿದು, ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿತ್ತು.

   

ಹಾಸನ/ರಾಮನಗರ: ಹಾಸನ ಜಿಲ್ಲೆಯ ಹಾಸನ, ಬೇಲೂರು ತಾಲ್ಲೂಕಿನಲ್ಲಿ ಸೋಮವಾರ ರಾತ್ರಿ ಧಾರಾಕಾರ ಮಳೆಯಾಗಿದ್ದು ಕೆರೆಗಳು ತುಂಬಿ ಕೋಡಿ ಹರಿದಿವೆ. ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಮಂಚನಬೆಲೆ ಜಲಾಶಯದಿಂದ ಹೆಚ್ಚುವರಿ ನೀರು ಹೊರ ಬಿಟ್ಟಿರುವುದರಿಂದ ಅರ್ಕಾವತಿ ನದಿ ಮೈದುಂಬಿ ಹರಿಯುತ್ತಿದೆ.

ಸಣ್ಣ ಸೇತುವೆ ಹಾಗೂ ಒಡ್ಡು ಮುಳುಗಡೆಯಾಗಿವೆ. ತೆಂಗು, ಅಡಕೆ, ರೇಷ್ಮೆ ತೋಟ ಹಾಗೂ ಜಮೀನುಗಳಿಗೆ ನದಿ ನೀರು ನುಗ್ಗಿದೆ.  ನದಿ ಅಂಚಿನ ಮನೆಯಂಗಳಕ್ಕೆ ನೀರು ಹರಿದು ಬಂದಿದೆ. ಕೂನಗಲ್ ಮತ್ತು ಕೆ.ಪಿ. ದೊಡ್ಡಿ ಬ್ರಿಡ್ಜ್ ಕಂ ಬ್ಯಾರೇಜ್ ಮುಳುಗಡೆಯಾಗಿದ್ದು ಸಂಪರ್ಕ ಕಡಿತಗೊಂಡಿದೆ.

ADVERTISEMENT

ಬಾಗೇಪಲ್ಲಿ ತಾಲ್ಲೂಕಿನ ಚಿತ್ರಾವತಿ ಜಲಾಶಯ ತುಂಬಿ ಹರಿಯುತ್ತಿದ್ದು, ಹೊಲ, ತೋಟಗ‌‌ಳಿಗೆ ನೀರು ನುಗ್ಗಿದೆ. ಚಿಂತಾಮಣಿಯ ರೇಷ್ಮೆಗೂಡು ಮಾರುಕಟ್ಟೆ ಜಲಾವೃತವಾಗಿದೆ. ದೇವನಹಳ್ಳಿ ತಾಲ್ಲೂಕಿನ ವಿಜಯಪುರ ಹೋಬಳಿ ವೆಂಕಟಗಿರಿಕೋಟೆ, ದೊಡ್ಡಸಾಗರ ಹಳ್ಳಿಯಲ್ಲಿ ಮನೆ, ಹೊಲ, ತೋಟಗಳಿಗೆ ನೀರು ನುಗ್ಗಿದೆ. 

ಕೆ.ಆರ್.ಪೇಟೆ ‌ತಾಲ್ಲೂಕಿನ ಬಳ್ಳೇಕೆರೆ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಚಾವಣಿ ಕುಸಿದಿದೆ. ಶ್ರೀರಂಗ ಪಟ್ಟಣ ತಾಲ್ಲೂಕಿನ ರಾಂಪುರದಲ್ಲಿ ಹೆಂಚಿನ ಮನೆ ಒಂದು ಭಾಗ ಕುಸಿದಿದ್ದು, ಮತ್ತೊಂದೆಡೆ ಮಲಗಿದ್ದ ಕೆಂಪಮ್ಮ–ಬಸವಶೆಟ್ಟಿ ದಂಪತಿ ಹಾಗೂ ಮಗ ಅಪಾಯದಿಂದ ಪಾರಾದರು.

ಹಾಸನ ನಗರದ ಮಹಾಲಕ್ಷ್ಮಿ ಲೇಔಟ್, ಹಾಸನಾಂಬ ಬಡಾವಣೆ, ಉದ್ದೂರು ಸೇರಿದಂತೆ ಹಲವು ಬಡಾವಣೆಗಳು ಜಲಾವೃತಗೊಂಡಿದ್ದು, ನಿವಾಸಿಗಳು ಹೊರಬರಲಾರದೆ ಪರದಾಡಿದರು.

ಹಳೇಬೀಡಿನ ದ್ವಾರಸಮುದ್ರ ಕೆರೆಯಲ್ಲಿ ಮಂಗಳವಾರ ಬೆಳಿಗ್ಗೆ ಹೊರಹರಿವು ಹೆಚ್ಚಾಗಿ, ಕೃಷಿ ಜಮೀನುಗಳಿಗೆ ನೀರು ನುಗ್ಗಿ, ಅಪಾರ ಪ್ರಮಾಣದ ಮೆಕ್ಕೆಜೋಳ, ರಾಗಿ, ಶುಂಠಿ ಬೆಳೆಗೆ ಹಾನಿಯಾಗಿದೆ. 

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಬಿಂಡಿಗನವಿಲೆ ಹೋಬಳಿಯಲ್ಲಿ ಮಂಗಳವಾರ ಸಂಜೆ ಒಂದೂವರೆ ಗಂಟೆ ಕಾಲ ಬಿರುಸಿನ ಮಳೆಯಾಯಿತು. ಸೋಮವಾರದ ಮಳೆಯಿಂದ ಹಲವು ಕೆರೆ –ಕಟ್ಟೆಗಳಲ್ಲಿ ಕೋಡಿ ಬಿದ್ದಿದೆ. ಮಡಿಕೇರಿಯಲ್ಲಿ ಮಂಗಳವಾರ ಬಿರುಸಿನಿಂದ ಮಳೆ ಸುರಿಯಿತು.

ತುಂಗಭದ್ರಾ ಅಣೆಕಟ್ಟೆ: 1.01 ಲಕ್ಷ ಕ್ಯುಸೆಕ್‌ ನೀರು ಹೊರಕ್ಕೆ

ಹೊಸಪೇಟೆ (ವಿಜಯನಗರ) ವರದಿ:

ತುಂಗಭದ್ರಾ ಜಲಾಶಯದ ಒಳಹರಿವಿನ ಪ್ರಮಾಣ 1.04 ಲಕ್ಷ ಕ್ಯುಸೆಕ್‌ ಆಗಿದ್ದು, 1.01 ಲಕ್ಷ ಕ್ಯುಸೆಕ್ ನೀರನ್ನು 28 ಗೇಟ್‌ಗಳ ಮೂಲಕ ಹೊರಬಿಡಲಾಗುತ್ತಿದೆ.

ಹೊಸಪೇಟೆ ತಾಲ್ಲೂಕು ಮರಿಯಮ್ಮನಹಳ್ಳಿ ಹೋಬಳಿಯಲ್ಲಿ ಮನೆಗಳಿಗೆ ಹಾನಿಯಾಗಿದೆ. ಮೂರು ಎಕರೆ ರಾಗಿ, 2 ಎಕರೆ ಭತ್ತ, 5 ಎಕರೆ ಸಜ್ಜೆ ಬೆಳೆ ನಾಶವಾಗಿದೆ. ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಬಾಚಿಗೊಂಡನಹಳ್ಳಿಯಲ್ಲಿ ಮಳೆಯಿಂದ 15 ಎಕರೆ ಭತ್ತ ನೆಲಕ್ಕೊರಗಿದೆ.

ಕಂಪ್ಲಿ ವರದಿ: ತುಂಗಭದ್ರಾ ಜಲಾಶಯದಿಂದ ಇಲ್ಲಿಯ ಕೋಟೆ ಪ್ರದೇಶದ ಬಳಿಯ ನದಿಗೆ 1 ಲಕ್ಷ ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ಸೇತುವೆ ಮುಳುಗಡೆಗೆ ಕೆಲವೇ ಅಡಿಗಳು ಬಾಕಿ ಇದೆ. ಮುನ್ನೆಚ್ಚರಿಕೆ ಕ್ರಮವಾಗಿ ತಾಲ್ಲೂಕು ಆಡಳಿತ ಕಂಪ್ಲಿ– ಗಂಗಾವತಿ ಸಂಪರ್ಕ ಸಂಪೂರ್ಣ ಬಂದ್ ಮಾಡಲಾಗಿದೆ. ಸದ್ಯ ವಿಜಯನಗರ ಜಿಲ್ಲೆಯ ಬುಕ್ಕಸಾಗರ ಗ್ರಾಮದ ಬಳಿ ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕಡೆಬಾಗಿಲು ಸೇತುವೆ ಮೂಲಕ ಎಲ್ಲ ವಾಹನಗಳು ಸಂಚರಿಸುತ್ತಿವೆ.

ಬದುಕು ಅತಂತ್ರ; ಮತದಾನ ಬಹಿಷ್ಕಾರದ ಎಚ್ಚರಿಕೆ

ಹಾವೇರಿ: ಜಿಲ್ಲೆಯ ಸವಣೂರು ತಾಲ್ಲೂಕಿನ ಬರದೂರು ಗ್ರಾಮದಲ್ಲಿರುವ 30ಕ್ಕೂ ಹೆಚ್ಚು ಮನೆಗಳಿಗೆ ಹಳ್ಳದ ನೀರು ನುಗ್ಗಿದ್ದು, ಗೃಹೋಪಯೋಗಿ ಹಾಗೂ ಅಗತ್ಯ ವಸ್ತುಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಮನೆಗಳಿಗೂ ಹಾನಿಯಾಗಿದೆ.

ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿರುವ ನಿವಾಸಿಗಳು, ‘ನಮಗೆ ಶಾಶ್ವತ ಪರಿಹಾರ ಬೇಕು. ಇಲ್ಲದಿದ್ದರೆ, ಈ ಸಲ ಮತದಾನ ಬಹಿಷ್ಕರಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದ್ದಾರೆ.

‘ಜೋರು ಮಳೆಯಾದಾಗ, ಹಳ್ಳದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಮನೆಗಳಿಗೂ ನೀರು ನುಗ್ಗುತ್ತದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಇಲ್ಲದಿದ್ದರೆ, ನಾವು ಚುನಾವಣೆಯಲ್ಲಿ ಮತದಾನ ಮಾಡಲ್ಲ. ಬಹಿಷ್ಕರಿಸುತ್ತೇವೆ’ ಎಂದು ನಿವಾಸಿಗಳಾದ ಮೆಹಬೂಬಸಾಬ್ ನದಾಫ್, ಶಿವಪುತ್ರಪ್ಪ, ಫಕ್ಕೀರಪ್ಪ, ಮಂಜಣ್ಣ ಹೊಸಪೇಟೆ, ಹನುಮಂತಪ್ಪ ಕರ್ಜಗಿ, ಕೇದಾರಲಿಂಗ ತೆಗ್ಗಿಹಳ್ಳಿ ಎಚ್ಚರಿಕೆ ನೀಡಿದ್ದಾರೆ.

ಜಿಲ್ಲೆಯಲ್ಲಿ ಭಾನುವಾರ ರಾತ್ರಿ ಸುರಿದ ಮಳೆಯಿಂದ 426 ಮನೆಗಳಿಗೆ ನೀರು ನುಗ್ಗಿ 282 ಮಂದಿ ನಿರಾಶ್ರಿತರಾಗಿದ್ದರು. ಇವರೆಲ್ಲರೂ ಕಾಳಜಿ ಕೇಂದ್ರದಲ್ಲಿ ಸೋಮವಾರ ರಾತ್ರಿ ತಂಗಿದ್ದರು. ಮಂಗಳವಾರ ಬೆಳಿಗ್ಗೆ ನೀರು ಕಡಿಮೆಯಾಗಿದ್ದರಿಂದ  ನಿವಾಸಿಗಳು, ತಮ್ಮ ಮನೆಗಳತ್ತ ಹೆಜ್ಜೆ ಹಾಕಿದರು. ಮನೆಗಳ ಸ್ಥಿತಿ ಕಂಡು ಕಣ್ಣೀರು ಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.