ADVERTISEMENT

ರಾಜ್ಯದ ವಿವಿಧೆಡೆ ಧಾರಾಕಾರ ಮಳೆ: ಕೋಡಿ ಬಿದ್ದ ಕೆರೆಗಳು, ಜಲಾವೃತಗೊಂಡ ರಸ್ತೆಗಳು

ವರ್ಷಧಾರೆಗೆ ಈರುಳ್ಳಿ ಬೆಳೆ ನೀರುಪಾಲು; ವಿದ್ಯುತ್‌ ಪೂರೈಕೆ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2024, 23:30 IST
Last Updated 12 ಅಕ್ಟೋಬರ್ 2024, 23:30 IST
<div class="paragraphs"><p>ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕಿನ ಕಾಲವಾಡ ಸಮೀಪ ಬೆಣ್ಣೆಹಳ್ಳ ಮತ್ತು ಎಮ್ಮಿ ಹಳ್ಳದ ನಡುವಿನ ಗುಡಿ ಪ್ರದೇಶದಲ್ಲಿ ಸಿಲುಕಿದ್ದ ರೈತ ಲಕ್ಷ್ಮಣ ಅವರನ್ನು ಅಗ್ನಿಶಾಮಕ ಸಿಬ್ಬಂದಿ ಶನಿವಾರ ರಕ್ಷಿಸಿ, ದಡಕ್ಕೆ ತಂದರು.</p></div>

ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕಿನ ಕಾಲವಾಡ ಸಮೀಪ ಬೆಣ್ಣೆಹಳ್ಳ ಮತ್ತು ಎಮ್ಮಿ ಹಳ್ಳದ ನಡುವಿನ ಗುಡಿ ಪ್ರದೇಶದಲ್ಲಿ ಸಿಲುಕಿದ್ದ ರೈತ ಲಕ್ಷ್ಮಣ ಅವರನ್ನು ಅಗ್ನಿಶಾಮಕ ಸಿಬ್ಬಂದಿ ಶನಿವಾರ ರಕ್ಷಿಸಿ, ದಡಕ್ಕೆ ತಂದರು.

   

ಪ್ರಜಾವಾಣಿ ಚಿತ್ರ: ಬಿ.ಎಂ.ಕೇದಾರನಾಥ

ಬೆಂಗಳೂರು: ರಾಜ್ಯದ ವಿವಿಧೆಡೆ ಶುಕ್ರವಾರ ಮತ್ತು ಶನಿವಾರ ಉತ್ತಮ ಮಳೆಯಾಗಿದೆ. ಹಲವೆಡೆ ಕೆರೆಗಳು ಕೋಡಿ ಬೀಳುವ ಹಂತ ತಲುಪಿವೆ, ಇನ್ನು ಕೆಲವೆಡೆ ಕೋಡಿಬಿದ್ದಿವೆ. ವಿವಿಧೆಡೆ ಹಿಂಗಾರು ಹಂಗಾಮಿನ ಬೆಳೆಗೆ ಸಿದ್ಧತೆ ನಡೆಸಿರುವ ರೈತರಲ್ಲಿ ಈ ಮಳೆಯು ಸಂತಸ ತಂದಿದೆ.

ADVERTISEMENT

ಹುಬ್ಬಳ್ಳಿ ವರದಿ: ಧಾರವಾಡ, ಗದಗ, ಹಾವೇರಿ, ಬಾಗಲಕೋಟೆ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯಲ್ಲಿ ಶುಕ್ರವಾರ ಮತ್ತು ಶನಿವಾರ ಧಾರಾಕಾರ ಮಳೆ ಸುರಿದಿದೆ. ಬಹುತೇಕ ಕಡೆ ರಸ್ತೆಗಳು ಜಲಾವೃತವಾದರೆ, ಇನ್ನೂ ಕೆಲ ಕಡೆ ಬೆಳೆಗೆ ಹಾನಿಯಾಗಿದೆ. ಜನಜೀವನಕ್ಕೆ ತುಸು ತೊಂದರೆಯಾಗಿದೆ.

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಗಂಡಬೊಮ್ಮನಹಳ್ಳಿ ಕೆರೆಯಲ್ಲಿ ಶುಕ್ರವಾರ ಕೆ.ದಿಬ್ಬದಹಳ್ಳಿ ಗ್ರಾಮದ ಪಿ.ಚೇತನ್ ಕುಮಾರ್ (21) ಎಂಬುವರು ಕೊಚ್ಚಿಕೊಂಡು ಹೋಗಿ, ಮೃತಪಟ್ಟಿದ್ದಾರೆ.

ಧಾರವಾಡ ಸೇರಿ ಜಿಲ್ಲಾ ವ್ಯಾಪ್ತಿಯ ಹುಬ್ಬಳ್ಳಿ, ಉಪ್ಪಿನಬೆಟಗೇರಿ, ತಡಕೋಡ ಮುಂತಾದ ಕಡೆ ಸುರಿದ ಭಾರಿ ಮಳೆಯಿಂದ ರಸ್ತೆಗಳು ಜಲಾವೃತಗೊಂಡಿದ್ದವು. ಮನೆಗಳಿಗೂ ನೀರು ನುಗ್ಗಿತು.

ಹಾವೇರಿ ಜಿಲ್ಲೆಯ ಬ್ಯಾಡಗಿ, ಸವಣೂರು ಮತ್ತು ತಡಸದಲ್ಲಿ ಸುರಿದ ಮಳೆಯಿಂದ ಕೆರೆಗಳು ಕೋಡಿ ಬಿದ್ದಿವೆ. ಧಾರಾಕಾರ ಮಳೆ ಅಲ್ಲದೇ ತುಂಬಿ ಹರಿಯುತ್ತಿರುವ ಕೆರೆಗಳಿಂದ ಬೆಳೆಗಳಿಗೆ ಹಾನಿಯಾಗಬಹುದು ಎಂಬ ಆತಂಕ ರೈತರಲ್ಲಿ ಮೂಡಿದೆ.

ಬಾಗಲಕೋಟೆ ತಾಲ್ಲೂಕಿನ ಶೀಗಿಕೇರಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ನೂರಾರು ಎಕರೆ ವ್ಯಾಪ್ತಿಯಲ್ಲಿ ಬೆಳೆದಿದ್ದ ಈರುಳ್ಳಿ ಬೆಳೆ ಕೊಚ್ಚಿಕೊಂಡು ಹೋಗಿದೆ.

ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನಾದ್ಯಂತ ಸುರಿದ ಧಾರಾಕಾರ ಮಳೆಗೆ 10ಕ್ಕೂ ಹೆಚ್ಚು ಮನೆಗಳು ಕುಸಿದು, ಹಳ್ಳ, ಕೆರೆಗಳು ಕೋಡಿ ಬಿದ್ದಿವೆ. ಹರಪನಹಳ್ಳಿಯ ಅಯ್ಯನಕೆರೆ, ಮಾದಾಪುರ ಗ್ರಾಮದ ಕೆರೆ, ಕೋಡಿ ಬಿದ್ದಿದೆ.  ಹೂವಿನಹಡಗಲಿ ತಾಲ್ಲೂಕಿನಲ್ಲಿ ಉತ್ತಮ ಮಳೆ ಸುರಿಯಿತು.

ಕೊಪ್ಪಳ, ಮೈಸೂರು, ಕೊಡಗು, ಚಾಮರಾಜನಗರ ಜಿಲ್ಲೆಗಳ ಹಲವೆಡೆ ಉತ್ತಮ ಮಳೆಯಾಗಿದೆ.

ಗುಡಿ ಪ್ರದೇಶದಲ್ಲಿ ಸಿಲುಕಿದ್ದ ರೈತನ ರಕ್ಷಣೆ

ನವಲಗುಂದ (ಧಾರವಾಡ ಜಿಲ್ಲೆ): ತಾಲ್ಲೂಕಿನ ಕಾಲವಾಡ ಗ್ರಾಮದ ಸಮೀಪ ಬೆಣ್ಣೆಹಳ್ಳ ಮತ್ತು ಎಮ್ಮಿ ಹಳ್ಳದ ನಡುವಿನ ಗುಡಿ ಪ್ರದೇಶದಲ್ಲಿ ಮೂರು ದಿನಗಳಿಂದ ಸಿಲುಕಿದ್ದ ರೈತ ಲಕ್ಷ್ಮಣ ಬಾರಕೇರ ಅವರನ್ನು ಶನಿವಾರ ರಕ್ಷಿಸಲಾಯಿತು.

‘ಜಮೀನಿಗೆ ಹೋಗಿ ವಾಪಸ್ ಹೊರಡುವಷ್ಟರಲ್ಲಿ ಎಮ್ಮಿಹಳ್ಳ ತುಂಬಿ ಹರಿಯುತ್ತಿತ್ತು. ಬೆಣ್ಣೆಹಳ್ಳದಲ್ಲೂ ಪ್ರವಾಹ ಹೆಚ್ಚಾಗಿತ್ತು. ಹೀಗಾಗಿ, ಗುಡಿ ಬಳಿ ರಕ್ಷಣೆಗೆ ನಿಂತಿದ್ದೆ. ನೀರಿನ ರಭಸ ಇಳಿಯಲಿಲ್ಲ. ಮೂರು ದಿನ ಅಲ್ಲಿಯೇ ಇದ್ದೆ’ ಎಂದು ಲಕ್ಷ್ಮಣ ಬಾರಕೇರ ತಿಳಿಸಿದರು.

‘ಹಳ್ಳದಲ್ಲಿ ನೀರು ರಭಸವಾಗಿ ಹರಿಯುತ್ತಿರುವುದರಿಂದ ಕಾರ್ಯಾಚರಣೆ ಸವಾಲಾಗಿತ್ತು. ದೋಣಿ ಬಳಸಿ ಲಕ್ಷ್ಮಣ ಅವರನ್ನು ಕರೆತಂದೆವು’ ಎಂದು ಅಗ್ನಿಶಾಮಕ ಅಧಿಕಾರಿ ಬಸವರಾಜ ‘ಪ್ರಜಾವಾಣಿ’ಗೆ ತಿಳಿಸಿದರು.

ದಾವಣಗೆರೆಯಲ್ಲಿ ಉತ್ತಮ ಮಳೆ

ದಾವಣಗೆರೆ: ಜಿಲ್ಲೆಯಲ್ಲಿ ಮಳೆ ಮುಂದುವರಿದಿದ್ದು, ಹರಿಹರ ತಾಲ್ಲೂಕಿನ ಉಕ್ಕಡಗಾತ್ರಿಯ
ಹಲವು ಮನೆಗಳಿಗೆ ಶುಕ್ರವಾರ ರಾತ್ರಿ ನೀರು ನುಗ್ಗಿತ್ತು. ಜಲಮೂಲಗಳು ಭರ್ತಿಯಾಗಿದ್ದು, ಹಿಂಗಾರು ಹಂಗಾಮಿನ ಸಿದ್ಧತೆಯಲ್ಲಿರುವ ರೈತರು ಹರ್ಷಗೊಂಡಿದ್ದಾರೆ.

ದಾವಣಗೆರೆ, ಹರಿಹರ, ಜಗಳೂರು ತಾಲ್ಲೂಕಿನ ಹಲವು ಕೆರೆಗಳು ಭರ್ತಿಯಾಗಿವೆ. ಜಗಳೂರಿನ ಗಡಿಮಾಕುಂಟೆ ಕೆರೆ 20 ವರ್ಷಗಳ ನಂತರ ಕೋಡಿ ಬಿದ್ದಿದೆ.

ಚಿತ್ರದುರ್ಗ ವರದಿ: ಜಿಲ್ಲೆಯ ವಿವಿಧೆಡೆ ಗುರುವಾರ, ಶುಕ್ರವಾರ ಸುರಿದ ಧಾರಾಕಾರ ಮಳೆಯಿಂದಾಗಿ

ಕೆರೆ, ಹಳ್ಳಗಳು ತುಂಬಿ ಹರಿಯುತ್ತಿವೆ. ತಾಲ್ಲೂಕಿನ ತರಳಬಾಳು ಮಠದ ಶಾಂತಿವನದಲ್ಲಿ ನಿರ್ಮಿಸಿರುವ ಮಿನಿ ಜಲಾಶಯ ಭರ್ತಿಯಾಗಿ 4 ಗೇಟ್‌ಗಳಿಂದ ನೀರು ಹೊರ ಹರಿಯುತ್ತಿದೆ. ಮೊಳಕಾಲ್ಮುರು ತಾಲ್ಲೂಕಿನ ನಾಯಕನಹಟ್ಟಿ ಗುರುತಿಪ್ಪೇರುದ್ರಸ್ವಾಮಿ ಚಿಕ್ಕಕೆರೆಯಲ್ಲಿ 8 ಅಡಿಗಳಷ್ಟು ನೀರು ಸಂಗ್ರಹವಾಗಿದ್ದು, ಕೋಡಿಬೀಳುವತ್ತ ಸಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.