ಹಾಸನ/ಮಂಡ್ಯ: ರಾಜ್ಯದ ಕೆಲವೆಡೆ ಮಂಗಳವಾರ ರಾತ್ರಿ ಮತ್ತು ಬುಧವಾರ ಧಾರಾಕಾರ ಮಳೆಯಾಗಿದೆ. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಅಣೆ ಚನ್ನಾಪುರ ಗ್ರಾಮದ ಕೆರೆ ಕೋಡಿ ನೀರಿನಲ್ಲಿ ಬೈಕ್ ಸವಾರ ಕೊಚ್ಚಿ ಹೋಗಿದ್ದರೆ, ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಜಿ. ಹೊಸಹಳ್ಳಿ ಗ್ರಾಮದಲ್ಲಿ ಮನೆ ಗೋಡೆ ಕುಸಿದು ಸಹನಾ (30) ಎಂಬುವರು ಮೃತಪಟ್ಟಿದ್ದಾರೆ.
ಹಾಸನ ಜಿಲ್ಲೆಯ ಸಕಲೇಶಪುರ, ಕೊಡಗು ಜಿಲ್ಲೆಯ ಮಡಿಕೇರಿ ಹಾಗೂ ಗೋಣಿಕೊಪ್ಪಲಿನಲ್ಲಿ, ಅರಸೀಕೆರೆ ತಾಲ್ಲೂಕಿನಲ್ಲಿ ಗುಡುಗು–ಸಿಡಿಲು ಸಹಿತ ಧಾರಾಕಾರ ಮಳೆ ಸುರಿದಿದ್ದು, ಅಂಗಡಿ, ಮನೆಗಳಿಗೆ ನೀರು ನುಗ್ಗಿತ್ತು.
ಕಂಬದಹಳ್ಳಿಯ ರಾಮಚಂದ್ರೇಗೌಡ (65) ಬುಧವಾರ ಬೆಳ್ಳೂರು ಕ್ರಾಸ್‌ನಿಂದ ಕಂಬದಹಳ್ಳಿಯ ಕಡೆಗೆ ಹೋಗುತ್ತಿದ್ದರು. ಈ ವೇಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಮೃತದೇಹ ಮತ್ತು ಬೈಕ್ ಅನ್ನು ನೀರಿನಿಂದ ಹೊರತೆಗೆದರು.
ಸ್ನಾನಕ್ಕೆ ತೆರಳಿದ್ದ ಸಹನಾ ಮೇಲೆ ಮನೆ ಗೋಡೆ ಕುಸಿದು ಬಿದ್ದಿದೆ. ಪ್ರಜ್ಞಾಹೀನರಾಗಿದ್ದ ಅವರನ್ನು ತಕ್ಷಣ ಕುಟುಂಬಸ್ಥರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಮಾರ್ಗಮಧ್ಯೆ ಅವರು ಮೃತಪಟ್ಟಿದ್ದಾರೆ. ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಹಳೆಯ ಮಣ್ಣಿನ ಮನೆ ನೆನೆದಿತ್ತು ಎಂದು ತಿಳಿದು ಬಂದಿದೆ.
ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿ ಲೋಕಪಾವನಿ ನದಿಯ ಸೆಳೆತಕ್ಕೆ ಸಿಕ್ಕಿ ಕೊಚ್ಚಿ ಹೋಗುತ್ತಿದ್ದ ಎತ್ತಿನ ಗಾಡಿ ಹಾಗೂ ಸವಾರನನ್ನು ಪೊಲೀಸರು ಹಾಗೂ ಸ್ಥಳೀಯರು ಬುಧವಾರ ರಕ್ಷಿಸಿದರು. ಶ್ರೀನಿವಾಸ ಅಗ್ರಹಾರ ಗ್ರಾಮದ ರಾಜು ಗಾಡಿಯನ್ನು ತೊಳೆಯಲು ಬಾಬುರಾಯನಕೊಪ್ಪಲು ಬಳಿ ನದಿಗೆ ಹೋದಾಗ ಘಟನೆ ನಡೆಯಿತು.
ಕೆ.ಆರ್.ಪೇಟೆ ತಾಲ್ಲೂಕಿನ ಕಿಕ್ಕೇರಿಯ ಬಸ್‌ನಿಲ್ದಾಣ ಸಮೀಪದ ಜಯಮ್ಮ ಎಂಬವರ ಮನೆ ಗೋಡೆ ಮಂಗಳವಾರ ರಾತ್ರಿ ಕುಸಿದಿದ್ದು, ದಿನಬಳಕೆ ವಸ್ತುಗಳು ಹಾಳಾಗಿವೆ. ನಾಡಹೆಂಚುಗಳು ಪುಡಿಯಾಗಿವೆ.
ಸಕಲೇಶಪುರದಲ್ಲಿ ಆಜಾದ್ ರಸ್ತೆ ಜಲಾವೃತಗೊಂಡಿತ್ತು. ಅಂಗಡಿಗಳಿಗೆ ನೀರು ನುಗ್ಗಿದ್ದರಿಂದ ವರ್ತಕರು ಪರದಾಡಿದರು. ಅರಸೀಕೆರೆ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಕೆರೆ ಕೋಡಿ ಬಿದ್ದಿದ್ದು, ಬಡಾವಣೆಗಳಿಗೆ ನೀರು ನುಗ್ಗಿತ್ತು. ತಾಲ್ಲೂಕಿನ ಯಾದಾಪುರ-ಸಂಕೋಡನಹಳ್ಳಿ ಸೇತುವೆ ಜಲಾವೃತವಾಗಿತ್ತು.
ಕೊಡಗು ಜಿಲ್ಲೆಯ ಮಡಿಕೇರಿ ಹಾಗೂ ಗೋಣಿಕೊಪ್ಪಲಿನಲ್ಲಿ ಬುಧವಾರ ಎರಡು ಗಂಟೆಗೂ ಅಧಿಕ ಕಾಲ ಗುಡುಗು ಸಿಡಿಲಿನಿಂದ ಕೂಡಿದ ಮಳೆ ಸುರಿಯಿತು.
ಉಪ್ಪಿನಂಗಡಿ ವರದಿ (ದಕ್ಷಿಣ ಕನ್ನಡ):
ಕಡಬ ತಾಲ್ಲೂಕಿನಾದ್ಯಂತ ಬುಧವಾರ ಸಂಜೆ ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ. ಅರ್ಧ ತಾಸಿಗೂ ಹೆಚ್ಚು ಕಾಳ ಸುರಿದ ಮಳೆಯಿಂದ ಉಪ್ಪಿನಂಗಡಿ-ಕಡಬ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಮರ್ದಾಳ ಪೇಟೆಯ ರಸ್ತೆಯಲ್ಲೇ ನೀರು ಹರಿದು ನದಿಯಂತಾಗಿತ್ತು. ಸುಳ್ಯದ ಹಲವು ಕಡೆಗಳಲ್ಲಿ ಜೋರು ಮಳೆಯಾಗಿದೆ.
ದಾವಣಗೆರೆ ವರದಿ:
ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿದಿದೆ. ನಿರಂತರವಾಗಿ ಬೀಳುತ್ತಿರುವ ಮಳೆಯಿಂದಾಗಿ ರೈತರು ಮತ್ತೆ ಆತಂಕಗೊಂಡಿದ್ದಾರೆ.
ಮಂಗಳವಾರ ವರುಣ ಬಿಡುವು ನೀಡಿದ್ದರಿಂದ ರೈತರು ನಿರಾಳರಾಗಿದ್ದರು.
ಮೋಡಗಳು ಮರೆಯಾಗಿ ಸೂರ್ಯ ಕಣ್ತೆರೆದಿದ್ದು ಕಂಡು ಹರ್ಷಗೊಂಡಿದ್ದರು.
ಮೆಕ್ಕೆಜೋಳ, ರಾಗಿ ಕೊಯ್ಲಿಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಆದರೆ, ಬುಧವಾರ ಸುರಿದ ಮಳೆಗೆ ಬೆಳೆಗಳು ಮತ್ತೆ ಜಲಾವೃತಗೊಂಡಿವೆ.
ಎರಡು ವಾರಗಳಿಂದ ಬಿಟ್ಟೂಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಜಲಮೂಲಗಳು ಭರ್ತಿಯಾಗಿವೆ. ಬುಧವಾರ ಮಧ್ಯಾಹ್ನ ಎರಡು ಗಂಟೆ ಸುರಿದ ಮಳೆಗೆ ಕಾಲುವೆಗಳು ತುಂಬಿ ಹರಿದವು. ಪುನೀತ್ ರಾಜ್‌ಕುಮಾರ್ ಬಡಾವಣೆ, ಎಸ್.ಎಸ್.ಬಡಾವಣೆಯ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನರು ಸಮಸ್ಯೆ ಅನುಭವಿಸಿದರು.
ತಗ್ಗಲಿದೆ ಮಳೆಯ ತೀವ್ರತೆ: ಮುನ್ಸೂಚನೆ
ಬೆಂಗಳೂರು: ರಾಜ್ಯದಲ್ಲಿ ಗುರುವಾರದಿಂದ ಮಳೆಯ ತೀವ್ರತೆ ತಗ್ಗುವ ಸಾಧ್ಯತೆ ಇದೆ ಎಂಬ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು, ವಿವಿಧೆಡೆ ಸಾಧಾರಣ ಮಳೆಯಾಗುವ ಸಂಭವವಿದೆ ಎಂದು ತಿಳಿಸಿದೆ.
ರಾಜ್ಯದ ಯಾವುದೇ ಜಿಲ್ಲೆಗೆ ಗುರುವಾರ ಭಾರಿ ಮಳೆಯ ಮುನ್ಸೂಚನೆಯಿಲ್ಲ. ಕರಾವಳಿಯ ಒಂದೆರಡು ಸ್ಥಳಗಳು ಹಾಗೂ ದಕ್ಷಿಣ ಒಳನಾಡಿನ ಹಲವು ಸ್ಥಳಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ ಹಾಗೂ ಹಾವೇರಿ ಜಿಲ್ಲೆಯ ಒಂದೆರಡು ಸ್ಥಳಗಳಲ್ಲಿ ಮಳೆಯಾಗಲಿದ್ದು, ಉಳಿದೆಡೆ ಒಣಹವೆ ಇರುವ ಸಂಭವವಿದೆ ಎಂದು ಇಲಾಖೆ ಹೇಳಿದೆ.
ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಳವಾಗುವ ಸಂಭವವಿದೆ ಎಂದಿದೆ. ಶುಕ್ರವಾರದಿಂದ ದಕ್ಷಿಣ ಒಳನಾಡಿನ ಕೆಲವೆಡೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದ್ದು, ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಒಣಹವೆ ಇರುವ ಸಂಭವವಿದೆ ಎಂದು ಇಲಾಖೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.