ADVERTISEMENT

ರಾಜ್ಯದ ದೊಡ್ಡತಪ್ಪಲೆಯಲ್ಲಿ ಮತ್ತೆ ಭೂಕುಸಿತ

​ಪ್ರಜಾವಾಣಿ ವಾರ್ತೆ
Published 31 ಜುಲೈ 2024, 0:27 IST
Last Updated 31 ಜುಲೈ 2024, 0:27 IST
<div class="paragraphs"><p>ದೊಡ್ಡತಪ್ಪಲೆ ಬಳಿ ಮಂಗಳವಾರ ಭೂಕುಸಿತದಲ್ಲಿ ಲಾರಿ, ಟ್ಯಾಂಕರ್‌ ಉರುಳಿ ಬಿದ್ದಿದ್ದು, ಕಾರುಗಳು ಮಣ್ಣಿನಡಿ ಸಿಲುಕಿದ್ದವು</p></div>

ದೊಡ್ಡತಪ್ಪಲೆ ಬಳಿ ಮಂಗಳವಾರ ಭೂಕುಸಿತದಲ್ಲಿ ಲಾರಿ, ಟ್ಯಾಂಕರ್‌ ಉರುಳಿ ಬಿದ್ದಿದ್ದು, ಕಾರುಗಳು ಮಣ್ಣಿನಡಿ ಸಿಲುಕಿದ್ದವು

   

ಹಾಸನ: ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ದೊಡ್ಡತಪ್ಪಲೆ ಬಳಿ ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಮಂಗಳವಾರ ಮಧ್ಯಾಹ್ನ ಮತ್ತೆ ಭಾರಿ ಪ್ರಮಾಣದ ಭೂಕುಸಿತವಾಗಿದ್ದು, ಅನಿಲ ಟ್ಯಾಂಕರ್‌ ಮತ್ತು ಲಾರಿ ಉರುಳಿ ಬಿದ್ದಿವೆ. ಒಟ್ಟು 4 ವಾಹನಗಳು ಮಣ್ಣಿನಡಿ ಸಿಲುಕಿವೆ.

21 ಟನ್‌ ಅಡುಗೆ ಅನಿಲ ತುಂಬಿರುವ ಟ್ಯಾಂಕರ್‌ನಿಂದ ಗ್ಯಾಸ್‌ ಸೋರಿಕೆಯ ಆತಂಕ ಎದುರಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.

ADVERTISEMENT

ಈ ಪ್ರದೇಶದಲ್ಲಿ 15 ದಿನಗಳಿಂದ ನಿರಂತರವಾಗಿ ಮಣ್ಣು ಕುಸಿಯುತ್ತಿದ್ದು, ಆಗಾಗ ತೆರವುಗೊಳಿಸಿ, ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತಿತ್ತು. ಮಂಗಳವಾರ ಮಧ್ಯಾಹ್ನ ವಾಹನಗಳು ಸಂಚರಿಸುತ್ತಿರುವಾಗಲೇ ಮತ್ತೆ ಭಾರಿ ಪ್ರಮಾಣದಲ್ಲಿ ಮಣ್ಣು ಕುಸಿದಿದೆ. ಕೆಲ ಪ್ರಯಾಣಿಕರು ಕಾರಿನಲ್ಲೇ ಸಿಲುಕಿದ್ದರು. ಯಾರಿಗೂ ಅಪಾಯವಾಗಿಲ್ಲ. ಹಿಟಾಚಿ, ಜೆಸಿಬಿ ಮೂಲಕ‌ ಮಣ್ಣು ತೆರವುಗೊಳಿಸಲಾಗುತ್ತಿದೆ.

‘ಹೆಚ್ಚಿನ ಪ್ರಮಾಣ ಮಣ್ಣು ಕುಸಿದಿದ್ದರೆ, ಶಿರೂರು ಮಾದರಿಯಲ್ಲಿ ದೊಡ್ಡ ಅನಾಹುತ ಸಂಭವಿಸುತ್ತಿತ್ತು’ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ರಸ್ತೆಗೆ ಬಿದ್ದಿರುವ ಮಣ್ಣು ಹಾಗೂ ವಾಹನ ತೆರವುಗೊಳಿಸುವವರೆಗೆ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಶಿರಾಡಿ ಘಾಟ್ ರಸ್ತೆಯಲ್ಲಿ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದವು.

ಸಕಲೇಶಪುರ ತಾಲ್ಲೂಕಿನ ಕುಂಬರಡಿ ಹಾಗೂ ಹಾರ್ಲೆ ಎಸ್ಟೇಟ್‌ ನಡುವೆ ಭೂಕುಸಿತವಾಗಿದ್ದು, ಅಲ್ಲಿನ ರಸ್ತೆ 200 ಮೀಟರ್‌ಗೂ ಹೆಚ್ಚು ದೂರಕ್ಕೆ ಕೊಚ್ಚಿ ಹೋಗಿದೆ. 20 ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.

‘ರಸ್ತೆಯ ಪಕ್ಕ ಎತ್ತಿನಹೊಳೆ ಯೋಜನೆ ಪೈಪ್‌ಲೈನ್‌ ಅಳವಡಿಸಲಾಗಿದ್ದು, ಅವೈಜ್ಞಾನಿಕ ಕಾಮಗಾರಿಯಿಂದಲೇ ಭೂಕುಸಿತವಾಗಿದೆ’ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಸಂಪಾಜೆ ಮಾರ್ಗದಲ್ಲಿ ಸಾಗಲು ಸೂಚನೆ:

ಮಂಗಳೂರು– ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ದೊಡ್ಡತಪ್ಪಲೆ ಸಮೀಪ ಗುಡ್ಡ ಕುಸಿದು ರಸ್ತೆ ಸಂಚಾರ ಸ್ಥಗಿತಗೊಂಡಿರುವುದರಿಂದ, ಮುಂದಿನ ಸೂಚನೆಯವರೆಗೆ ಮಂಗಳೂರು ಕಡೆಯಿಂದ ಬೆಂಗಳೂರಿಗೆ ಹೋಗುವವರು ಸಂಪಾಜೆ, ಮಡಿಕೇರಿ ಮಾರ್ಗದ ರಸ್ತೆಯಲ್ಲಿ ಸಂಚಾರ ಮಾಡಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.