ADVERTISEMENT

ಹೆದ್ದಾರಿ ಸಂಪರ್ಕ ಕಡಿತದ ಭೀತಿಯಲ್ಲಿ ದ.ಕ.

ಶಿರಾಡಿ, ಸಂಪಾಜೆ ಘಾಟಿಯಲ್ಲಿ ಭೂಕುಸಿತ, ಚಾರ್ಮಾಡಿ ಒಂದೇ ಲಭ್ಯ

ವಿ.ಎಸ್.ಸುಬ್ರಹ್ಮಣ್ಯ
Published 15 ಆಗಸ್ಟ್ 2018, 19:30 IST
Last Updated 15 ಆಗಸ್ಟ್ 2018, 19:30 IST
ಶಿರಾಡಿ ಘಾಟಿ ರಸ್ತೆಯಲ್ಲಿ ಕುಸಿದ ಮಣ್ಣನ್ನು ತೆರವುಗೊಳಿಸುತ್ತಿರುವುದು. -ಪ್ರಜಾವಾಣಿ ಚಿತ್ರ
ಶಿರಾಡಿ ಘಾಟಿ ರಸ್ತೆಯಲ್ಲಿ ಕುಸಿದ ಮಣ್ಣನ್ನು ತೆರವುಗೊಳಿಸುತ್ತಿರುವುದು. -ಪ್ರಜಾವಾಣಿ ಚಿತ್ರ   

ಮಂಗಳೂರು: ದಕ್ಷಿಣ ಕನ್ನಡ ಮತ್ತು ಬೆಂಗಳೂರಿನ ನಡುವೆ ರಸ್ತೆ ಸಂಪರ್ಕದ ಪ್ರಮುಖ ಕೊಂಡಿಯಾಗಿರುವ ಮೂರು ರಾಷ್ಟ್ರೀಯ ಹೆದ್ದಾರಿಗಳ ಪೈಕಿ ಎರಡು ನಿರಂತರ ಭೂಕುಸಿತದಿಂದ ಬಂದ್‌ ಆಗಿದ್ದು, ಚಾರ್ಮಾಡಿ ಘಾಟಿಯೊಂದೇ ಸಂಚಾರಕ್ಕೆ ಲಭ್ಯವಿದೆ. ಈಗ ದಕ್ಷಿಣ ಕನ್ನಡ ಜಿಲ್ಲೆ ಅಕ್ಷರಶಃ ಹೆದ್ದಾರಿ ಸಂಪರ್ಕ ಕಡಿತದ ಭೀತಿಯಲ್ಲಿದೆ.

ಮಡಿಕೇರಿ, ಮೈಸೂರು ಮಾರ್ಗವಾಗಿ ಬೆಂಗಳೂರು ತಲುಪಲು ಬಳಕೆಯಾಗುತ್ತಿದ್ದ ಸಂಪಾಜೆ ಘಾಟಿ ಮಾರ್ಗ ಭೂಕುಸಿತದ ಕಾರಣದಿಂದ ಮೂರು ದಿನಗಳಿಂದ ಬಂದ್‌ ಆಗಿದೆ. ಆಗಸ್ಟ್‌ ಮೊದಲ ವಾರದಲ್ಲಿ ಪೂರ್ಣ ಪ್ರಮಾಣದಲ್ಲಿ ವಾಹನ ಸಂಚಾರಕ್ಕೆ ತೆರೆದುಕೊಂಡಿದ್ದ ಶಿರಾಡಿ ಘಾಟಿ ಮಾರ್ಗದಲ್ಲಿ ಮಂಗಳವಾರ ಬೆಳಿಗ್ಗೆಯಿಂದ ನಿರಂತರ ಭೂಕುಸಿತ ಸಂಭವಿಸುತ್ತಿದೆ. ಈ ಮಾರ್ಗದಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ಈ ಎರಡೂ ಮಾರ್ಗಗಳಲ್ಲಿ ವಾಹನ ಸಂಚಾರ ಪುನರಾರಂಭದ ಕುರಿತು ಅನಿಶ್ಚಿತತೆ ಮೂಡಿದೆ.

ಚಾರ್ಮಾಡಿ ಘಾಟಿ ಮಾರ್ಗದಲ್ಲಿ ಜೂನ್‌ 12ರಂದು ಹಲವೆಡೆ ಭೂಕುಸಿತ ಸಂಭವಿಸಿತ್ತು. ಮೂರು ದಿನಗಳ ಕಾಲ ಈ ಮಾರ್ಗ ಬಂದ್‌ ಆಗಿತ್ತು. ಈಗ ಕರಾವಳಿಯ ಪ್ರಮುಖ ವಾಣಿಜ್ಯ ಕೇಂದ್ರ ಮಂಗಳೂರು ಸೇರಿದಂತೆ ಇಡೀ ದಕ್ಷಿಣ ಕನ್ನಡ ಜಿಲ್ಲೆಯ ಜನರು ಬೆಂಗಳೂರಿನ ಜೊತೆ ರಸ್ತೆ ಸಂ‍ಪರ್ಕ ಇರಿಸಿಕೊಳ್ಳಲು ಇದೊಂದೇ ಮಾರ್ಗ ಉಳಿದಿದೆ. ಮಳೆ ಹೆಚ್ಚಾಗಿ ಚಾರ್ಮಾಡಿಯಲ್ಲೂ ಮತ್ತೆ ಭೂಕುಸಿತ ಸಂಭವಿಸಿದರೆ ಇಡೀ ಜಿಲ್ಲೆ ಬೆಂಗಳೂರಿನ ಜೊತೆ ನೇರ ಹೆದ್ದಾರಿ ಸಂಪರ್ಕದಿಂದ ಕಡಿತಗೊಳ್ಳಲಿದೆ.

ADVERTISEMENT

ಹೆಚ್ಚಿದ ಒತ್ತಡ: ಲೋಕೋಪಯೋಗಿ ಇಲಾಖೆಯ ಮಾಹಿತಿ ಪ್ರಕಾರ, ದಕ್ಷಿಣ ಕನ್ನಡ ಜಿಲ್ಲೆಯಿಂದ ನಿತ್ಯವೂ ಶಿರಾಡಿ (ಎನ್‌ಎಚ್‌ 75) ಘಾಟಿಯಲ್ಲಿ 14,000ದಿಂದ 15,000 ವಾಹನಗಳು ಸಂಚರಿಸುತ್ತವೆ. ಸಂಪಾಜೆ (ಎನ್‌ಎಚ್‌ 275) ಮತ್ತು ಚಾರ್ಮಾಡಿ (ಎನ್‌ಎಚ್‌ 234) ಘಾಟಿಗಳ ಮೂಲಕ ತಲಾ 12,000ದಷ್ಟು ವಾಹನಗಳು ಸಂಚರಿಸುತ್ತವೆ. ಈಗ ಮೂರು ಮಾರ್ಗಗಳಲ್ಲಿನ ವಾಹನಗಳ ಸಂಚಾರದ ಒತ್ತಡವನ್ನು ಒಂದೇ ಮಾರ್ಗ ತಡೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ.

‘ಶಿರಾಡಿ ಮತ್ತು ಸಂಪಾಜೆ ಎರಡೂ ಘಾಟಿಗಳಲ್ಲಿ ಭೂಕುಸಿತ ಇನ್ನೂ ನಿಂತಿಲ್ಲ. ಕೆಲವು ಕಡೆಗಳಲ್ಲಿ ಗುಡ್ಡದ ಮಣ್ಣು ಸಂಪೂರ್ಣ ಸಡಿಲಗೊಂಡಿದೆ. ತೆರವು ಮಾಡಿದಷ್ಟೂ ಭೂಕುಸಿತ ಸಂಭವಿಸುತ್ತಲೇ ಇದೆ. ಎರಡೂ ಘಾಟಿಗಳಲ್ಲಿ ಮಳೆ ಕೂಡ ಜೋರಾಗಿ ಸುರಿಯುತ್ತಲೇ ಇದೆ. ಇದರಿಂದಾಗಿ ಮಣ್ಣು ತೆರವು ಕಾರ್ಯಾಚರಣೆಗೂ ಅಡಚಣೆ ಉಂಟಾಗಿದೆ’ ಎಂದು ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ವಿಭಾಗದ ಸೂಪರಿಂಟೆಂಡಿಂಗ್‌ ಎಂಜಿನಿಯರ್‌ ರಾಘವನ್ ‘ಪ್ರಜಾವಾಣಿ’ಗೆ ತಿಳಿಸಿದರು.

ಸಾರಿಗೆ ಇಲಾಖೆ ಅಧಿಕಾರಿಗಳ ಪ್ರಕಾರ, ಮಂಗಳೂರು, ಪುತ್ತೂರು, ಸುಳ್ಯ, ಬೆಳ್ತಂಗಡಿ ಮತ್ತು ಬಂಟ್ವಾಳದಿಂದ ಪ್ರತಿನಿತ್ಯ ಬೆಂಗಳೂರಿಗೆ 100ಕ್ಕೂ ಹೆಚ್ಚು ಸರ್ಕಾರಿ ಬಸ್‌ಗಳು ಸಂಚರಿಸುತ್ತವೆ. 200ಕ್ಕೂ ಹೆಚ್ಚು ಖಾಸಗಿ ಬಸ್‌ಗಳು ಈ ಮಾರ್ಗದಲ್ಲಿ ಓಡಾಡುತ್ತವೆ. ಬಹುತೇಕ ದೊಡ್ಡ ಗಾತ್ರದ, ಐಷಾರಾಮಿ ಬಸ್‌ಗಳೇ ಇವೆ. ಉದ್ದ ಮತ್ತು ಅಗಲ ಕಡಿಮೆ ಇರುವ ಕೆಎಸ್‌ಆರ್‌ಟಿಸಿ ಎಕ್ಸ್‌ಪ್ರೆಸ್ ಬಸ್‌ಗಳು ಮಾತ್ರ ಚಾರ್ಮಾಡಿ ಘಾಟಿಯಲ್ಲಿ ಸಂಚರಿಸಬಹುದು. ಉಳಿದ ಎಲ್ಲ ಬಸ್‌ಗಳು ಶಿರಾಡಿ ಅಥವಾ ಸಂಪಾಜೆ ಮಾರ್ಗದ ಮೂಲಕ ಮಾತ್ರ ತೆರಳಬಹುದು. ಈಗ ಎರಡೂ ಮಾರ್ಗಗಳು ಬಂದ್ ಆಗಿರುವುದರಿಂದ ಮಂಗಳೂರು– ಬೆಂಗಳೂರು ನಡುವಿನ ಬಸ್ ಸಂಚಾರ ಬಹುತೇಕ ಸ್ಥಗಿತಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.