ಮೈಸೂರು/ಚಿಕ್ಕಮಗಳೂರು: ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಚಿತ್ರದುರ್ಗ ಹಾಗೂ ಹಾಸನ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆ ಭಾನುವಾರ ರಾತ್ರಿ ಹಾಗೂ ಸೋಮವಾರ ಬಿರುಗಾಳಿ, ಗುಡುಗು–ಸಿಡಿಲು ಸಹಿತ ಮಳೆಯಾಗಿದ್ದು, ಹಲವು ಬೆಳೆ ನಾಶವಾಗಿವೆ. ಮನೆಗಳೂ ಹಾಗೂ ವಿದ್ಯುತ್ ಕಂಬಗಳು ಬಿದ್ದಿವೆ. ಕೆಲ ಸೇತುವೆಗಳು ಕೊಚ್ಚಿಹೋಗಿದ್ದರೆ, ಹಲವು ಮುಳುಗಡೆಯಾಗಿವೆ.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಸಂತೇಬಾಚಹಳ್ಳಿಯಲ್ಲಿ ಅಘಲಯ ಕೆರೆ ತುಂಬಿ ಹರಿದಿದ್ದರಿಂದ ಹಳ್ಳ ಒಡೆದು ನೂರಾರು ಎಕರೆ ಕೃಷಿ ಭೂಮಿ ಜಲಾವೃತವಾಗಿದೆ. ಶ್ರವಣಬೆಳಗೊಳ, ಮೇಲುಕೋಟೆ ಸೇರಿದಂತೆ ವಿವಿಧ ಸ್ಥಳಗಳಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ 47ಕ್ಕೆ ಹಾನಿಯಾಗಿದೆ.
ಮಳವಳ್ಳಿ ಪಟ್ಟಣದ ಹೊರಕೋಟೆಯಲ್ಲಿ ಹಾಗೂ ತಾಲ್ಲೂಕಿನ ಪೂರಿಗಾಲಿಯಲ್ಲಿ ಮನೆಗಳಿಗೆ ಹಾನಿಯಾಗಿದೆ. ಹೊರವಲಯದ ನಿಡಘಟ್ಟ ರಸ್ತೆ ಶನೇಶ್ವರಸ್ವಾಮಿ ದೇವಸ್ಥಾನಕ್ಕೆ ನೀರು ನುಗ್ಗಿದೆ. ಕಿಕ್ಕೇರಿ ಹೋಬಳಿಯ ಮಾದಿಹಳ್ಳಿ ಸೇತುವೆ ಮುಳುಗಡೆಯಾಗಿ ಬೇರೆಡೆಗೆ ತೆರಳಲು ಗ್ರಾಮಸ್ಥರು ಪರದಾಡಿದರು.
ಒಳಹರಿವು ಹೆಚ್ಚಳವಾಗಿದ್ದರಿಂದ ಹಾಸನ ಜಿಲ್ಲೆಯ ಯಗಚಿ ಜಲಾಶಯದಿಂದ 1ಸಾವಿರ ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗಿದೆ. ಹಿರೀಸಾವೆ ಹೋಬಳಿಯಲ್ಲಿ ಬಾಳಗಂಚಿ ಕೆರೆ ತುಂಬಿ ಕೋಡಿ ಹರಿದಿದ್ದು, ವಿದ್ಯುತ್ ಕಂಬಗಳು ಬಿದ್ದಿವೆ. ಹಳೇಬೀಡು ಹೋಬಳಿಯ ಕೊಂಡ್ಲಿ ಗೊಲ್ಲರಟ್ಟಿಯ ಜೋಗಿಹಳ್ಳಿಯಲ್ಲಿ ತಮ್ಮಣ್ಣಗೌಡ ಅವರ ಒಂದು ಎಕರೆ ಬೀನ್ಸ್ ಬೆಳೆ ಹಾಳಾಗಿದೆ.
ಚಾಮರಾಜನಗರ ತಾಲ್ಲೂಕಿನ ಹಲವೆಡೆ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿದೆ. ವೆಂಕಟಯ್ಯನ ಛತ್ರ ಹಾಗೂ ವಿ.ಸಿ ಹೊಸೂರಿನಲ್ಲಿ 50 ಎಕರೆಯಷ್ಟು ಬಾಳೆ, 10 ಎಕರೆಗೂ ಹೆಚ್ಚು ಮುಸುಕಿನ ಜೋಳ ಹಾಳಾಗಿದೆ. ಮಡಿಕೇರಿಯಲ್ಲಿ ಬಿರುಸಿನ ಮಳೆ ಸುರಿದಿದೆ.
ಮೈಸೂರಿನ ದಸರಾ ವಸ್ತುಪ್ರದರ್ಶನ ಆವರಣದ ಕೆಲವು ಮಳಿಗೆಗಳಿಗೆ ಹಾನಿಯಾಗಿದೆ. ತಂತಿ ತುಂಡಾಗಿದ್ದರಿಂದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿ, ವಸ್ತುಪ್ರದರ್ಶನವನ್ನು ಸ್ಥಗಿತಗೊಳಿಸಿ ನೆರೆದಿದ್ದ ಜನರನ್ನು ಹೊರ ಕಳುಹಿಸಲಾಯಿತು.
ತುಮಕೂರು ವರದಿ: ಕೊಡಿಗೇನಹಳ್ಳಿ ಹೋಬಳಿಯಲ್ಲಿನ ದೊಡ್ಡಮಾಲೂರು ಕೆರೆ ಸೋಮವಾರ ಕೋಡಿ ಬಿದ್ದಿದೆ. ಹುಳಿಯಾರು ಹೋಬಳಿ ಚಿಕ್ಕಬಿದರೆ ಗ್ರಾಮದ ಕೆರೆ ಸತತ ಮಳೆಗೆ ಭಾನುವಾರದಿಂದ ಕೋಡಿ
ಹರಿಯುತ್ತಿದೆ.
ರಾಮನಗರ ಜಿಲ್ಲೆ ಮಾಗಡಿ ಬಳಿ ಅರ್ಕಾವತಿ ನದಿಗೆ ಅಡ್ಡಲಾಗಿ ಕಟ್ಟಿರುವ ಮಂಚನಬೆಲೆ ಜಲಾಶಯಕ್ಕೆ ಸುರಿದ ಮಳೆಯಿಂದಾಗಿ ಅಪಾರ ಪ್ರಮಾಣದ ನೀರು ಹರಿದು ಬಂದಿದೆ. ಜಲಾಶಯದಿಂದ ಸೋಮವಾರ 2.50 ಸಾವಿರ ಕ್ಯುಸೆಕ್ ಹೆಚ್ಚುವರಿ ನೀರು ಹೊರಕ್ಕೆ ಬಿಡಲಾಗಿದೆ. ಇದರಿಂದ ಜಲಾಶಯದ ಬಳಿ ₹30ಲಕ್ಷ ವೆಚ್ಚದಲ್ಲಿ ತಾತ್ಕಾಲಿಕವಾಗಿ ನಿರ್ಮಾಣ ಮಾಡಿದ್ದ ಸೇತುವೆ ಕೊಚ್ಚಿ ಹೋಗಿದೆ. ಅದರ ಸಮೀಪದಲ್ಲಿಯೇ ಇದ್ದ ಹಳೆಯ ಸೇತುವೆ ಕೂಡ ಭಾಗಶಃ ಮುಳುಗಡೆ
ಯಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ ಮತ್ತು ಬಾಬಾಬುಡನ್ ಗಿರಿ ಭಾಗದಲ್ಲಿ ಮಳೆ ಅಬ್ಬರಿಸಿತು. ಬೀದರ್ ನಗರ ನಗರ ಸೇರಿದಂತೆ ಜಿಲ್ಲೆಯ ಹುಲಸೂರ ಹಾಗೂ ಔರಾದ್ ತಾಲ್ಲೂಕಿನಲ್ಲೂ ಒಂದು ಗಂಟೆಗೂ ಹೆಚ್ಚು ಕಾಲ ಮಳೆಯಾಗಿದೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲ್ಲೂಕಿನ ಶಿಗ್ಲಿ, ಒಡೆಯರಮಲ್ಲಾಪುರ ಭಾಗದಲ್ಲಿ ಜೋರು ಮಳೆ ಸುರಿದು ಹಳ್ಳ ಭರ್ತಿಯಾಗಿ ನೀರು ರಸ್ತೆ ಮೇಲೆ ಹರಿಯಿತು.
‘ನಿರಂತರ ಮಳೆಗೆ ಸವಣೂರು ತಾಲ್ಲೂಕಿನಲ್ಲಿ ವಿವಿಧ ಗ್ರಾಮಗಳಲ್ಲಿ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ. ಮನೆಗಳು ಸಂಪೂರ್ಣ ಜಲಾವೃತಗೊಂಡಿದ್ದು ಬರದೂರ ಸೇರಿದಂತೆ ಕೆಲ ಗ್ರಾಮಗಳಲ್ಲಿ ಸರ್ಕಾರಿ ಶಾಲೆಯಲ್ಲಿ ಕಾಳಜಿ ಕೇಂದ್ರ ತೆರೆದು ಸಾರ್ವಜನಿಕರಿಗೆ ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದು ಸವಣೂರು ತಹಶೀಲ್ದಾರ್ ಭರತರಾಜ್ ಕೆ.ಎನ್. ತಿಳಿಸಿದ್ದಾರೆ.
ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಒಂದು ದಿನದಲ್ಲಿ ವಾಡಿಕೆಗಿಂತಲೂ ಹೆಚ್ಚಿನ ಮಳೆ ಬಿದ್ದಿದ್ದು, ಹಲವು ಕಡೆ ಮನೆ, ಬೆಳೆಗಳಿಗೆ ಹಾನಿಯಾಗಿದೆ.
ಚಿಕ್ಕಮಗಳೂರು ಪ್ರವಾಸ ಸದ್ಯ ಬೇಡ–ಡಿ.ಸಿ
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಳೆ ಮುಂದುವರಿದಿದ್ದು, ಒಂದು ವಾರ ಪ್ರವಾಸಕ್ಕೆ ಬರದಂತೆ ಪ್ರವಾಸಿಗರಲ್ಲಿ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.
ಅತಿಯಾದ ಮಳೆಯಿಂದ ಗುಡ್ಡ ಕುಸಿತ ಉಂಟಾಗುವ ಸಂಭವ ಇರುವುದರಿಂದ ಒಂದು ವಾರ ಪ್ರವಾಸ ಮುಂದೂಡ
ಬೇಕು. ಹೋಂಸ್ಟೆ, ರೆಸಾರ್ಟ್, ಅರಣ್ಯ ಇಲಾಖೆ ವತಿಯಿಂದ ಕೈಗೊಳ್ಳುವ ಚಾರಣವನ್ನು ಒಂದು ವಾರ ಸ್ಥಗಿತಗೊಳಿಸಬೇಕು ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.