ADVERTISEMENT

ರಾಜ್ಯದ ಹಲವೆಡೆ ಧಾರಾಕಾರ ಮಳೆ: ಮೂರು ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಣೆ

ರಾಜ್ಯದಲ್ಲಿ ಇಬ್ಬರ ಸಾವು

​ಪ್ರಜಾವಾಣಿ ವಾರ್ತೆ
Published 19 ಮೇ 2022, 21:27 IST
Last Updated 19 ಮೇ 2022, 21:27 IST
ಮೈಸೂರು ಜಿಲ್ಲೆಯ ಸಾಲಿಗ್ರಾಮ ಸಮೀಪ ಗಂಧನಹಳ್ಳಿಯ ಮಂಚೇಗೌಡ ನಾಲೆಯ ಏರಿ ಒಡೆದು ಜಮೀನಿಗೆ ನೀರು ನುಗ್ಗಿ ಅಡಿಕೆ, ಬಾಳೆ ಮತ್ತು ತೆಂಗಿನ ತೋಟಗಳಿಗೆ ಹಾನಿಯಾಗಿದೆ
ಮೈಸೂರು ಜಿಲ್ಲೆಯ ಸಾಲಿಗ್ರಾಮ ಸಮೀಪ ಗಂಧನಹಳ್ಳಿಯ ಮಂಚೇಗೌಡ ನಾಲೆಯ ಏರಿ ಒಡೆದು ಜಮೀನಿಗೆ ನೀರು ನುಗ್ಗಿ ಅಡಿಕೆ, ಬಾಳೆ ಮತ್ತು ತೆಂಗಿನ ತೋಟಗಳಿಗೆ ಹಾನಿಯಾಗಿದೆ   

ಬೆಂಗಳೂರು/ ಮೈಸೂರು:ರಾಜ್ಯದ ಹಲವೆಡೆ ಗುರುವಾರವೂ ಧಾರಾಕಾರ ಮಳೆ ಮುಂದುವರಿದಿದ್ದು, ವಿವಿಧೆಡೆ ಜನ ಜೀವನ ಅಸ್ತವ್ಯಸ್ತವಾಗಿದೆ. ಕೆಲವೆಡೆ ಕೆರೆ ಏರಿಗಳು ಒಡೆದಿದ್ದು,ರಸ್ತೆ ಸಂಪರ್ಕ ಕಡಿತಗೊಂಡಿವೆ. ಕೃಷಿ ಜಮೀನಿನಲ್ಲಿ ನೀರು ನಿಂತು ಬೆಳೆಗಳು ಕೊಳೆಯಲಾರಂಭಿಸಿವೆ.ಮಡಿಕೇರಿ– ಚಟ್ಟಳ್ಳಿ ರಸ್ತೆ ಬದಿಯ ನಾಲ್ಕು ಸ್ಥಳದಲ್ಲಿ ಮಣ್ಣು ಕುಸಿದು ಅಪಾಯದ ಮುನ್ಸೂಚನೆ ನೀಡುತ್ತಿದೆ.

ಸಿಡಿಲು ಬಡಿದು ಬೀದರ್ ತಾಲ್ಲೂಕಿನ ಚಿಮಕೋಡ ಗ್ರಾಮದ ರೈತ ಮಹಿಳೆ ವಿದ್ಯಾವತಿ ನರಸಪ್ಪ ಟೊಳ್ಳೆ (52) ಮತ್ತು ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ಹೊರಟ್ಟಿ ಗ್ರಾಮದಲ್ಲಿ ರೈತ ಭೀಮಪ್ಪ ಕೊಡ್ಲಿ (62) ಮೃತಪಟ್ಟಿದ್ದಾರೆ.ಹುಣಸಗಿಯಲ್ಲಿ ಎಮ್ಮೆ ಮತ್ತು ಕೊಡೇಕಲ್ಲ ಗ್ರಾಮದಲ್ಲಿ ಕುರಿ ಸಿಡಿಲಿಗೆ ಬಲಿಯಾಗಿವೆ.

ಭಾರಿ ಮಳೆಯ ಕಾರಣ ಮೈಸೂರು ಜಿಲ್ಲೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಗುರುವಾರ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ದಾವಣಗೆರೆ ಮತ್ತು ಶಿವಮೊಗ್ಗದಲ್ಲಿಯೂ ಶುಕ್ರವಾರ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಶುಕ್ರವಾರ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಗೆ ರಜೆ ಘೋಷಿಸಲಾಗಿದೆ.

ADVERTISEMENT

ಮಂಡ್ಯ ನಗರದ ಬೀಡಿ ಕಾರ್ಮಿಕರ ಕಾಲೊನಿಯ 80ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿದ್ದವು. ನೀರಿನಲ್ಲಿ ಬಂದ ಹಾವು ಬಾಲಕಿಯೊಬ್ಬಳಿಗೆ ಕಚ್ಚಿದ್ದು, ಆಕೆಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾಲೊನಿಗೆ ಮಧ್ಯ‌‌‌ರಾತ್ರಿ ನೀರು ನುಗ್ಗಿ ಧವಸ, ದಾನ್ಯ, ಬಟ್ಟೆ, ಬರೆ ಕೊಚ್ಚಿ ಹೋದವು. ಸಮೀಪದ ನಾಲೆಯಲ್ಲಿ ಕಸ ಕಟ್ಟಿಕೊಂಡಿದ್ದರಿಂದ ನಾಲೆ ನೀರು ಕೂಡ ನುಗ್ಗಿತ್ತು. ನಗರಸಭೆ ಸಿಬ್ಬಂದಿ ಕಸ ತೆರವುಗೊಳಿಸದೇ ಶುಕ್ರವಾರ ಮಧ್ಯಾಹ್ನದವರೆಗೂ ಜನ ಅತಂತ್ರರಾಗಿದ್ದರು. ಇಡೀ ಬಡಾವಣೆಯಲ್ಲಿ ಕೊಳಚೆ ತಾಂಡವವಾಡುತ್ತಿದೆ.

ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಮಗಾರಿಗಾಗಿ ತೋಡಿದ್ದ ಗುಂಡಿಗೆ ಲಾರಿಯೊಂದು ಬಿದ್ದು, ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ನಾಗಮಂಗಲ ತಾಲ್ಲೂಕು ಹಾಲಾಳು ಗ್ರಾಮದ ಕೆರೆ ಏರಿ ಒಡೆದು ಜಮೀನಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.

ಕುರಿ‌–ಮೇಕೆ ಬಲಿ:ಹಾಸನ ಜಿಲ್ಲೆಯ ಹಿರೀಸಾವೆ ದೊಡ್ಡ ಕೆರೆ ತುಂಬಿ ಹರಿದಿದ್ದರಿಂದ ಸಂತಸಗೊಂಡ ಸ್ಥಳೀ
ಯರು, ನೀರಿನ ಮಧ್ಯೆಯೇ ಕುರಿ ಮತ್ತು ಮೇಕೆಯನ್ನು ಬಲಿಕೊಟ್ಟು ಸಂಭ್ರಮಾಚರಣೆ ಮಾಡಿದರು.
ಚಿಕ್ಕಮಗಳೂರಿನ ಯಗಚಿ ಜಲಾಶಯ ಭರ್ತಿಗೆ ಕೇವಲ ಒಂದೂವರೆ ಅಡಿ ಬಾಕಿ ಇದೆ. ಜಲಾಶಯದ ಗರಿಷ್ಠ ನೀರಿನ ಮಟ್ಟ 3164.900 ಅಡಿಗಳಷ್ಟಿದೆ.

ಕೊಡಗು ಜಿಲ್ಲೆಯಲ್ಲೂ ಭಾರಿ ಮಳೆ ಹಾಗೂ ಗಾಳಿಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಾರಂಗಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಜಲಾಶಯದ ಭರ್ತಿಗೆ 9 ಅಡಿಯಷ್ಟೇ ಉಳಿದಿದೆ.ಕಾವೇರಿ ನದಿಯೂ ಸೇರಿದಂತೆ ಹಳ್ಳ, ಕೊಳ್ಳಗಳಲ್ಲಿ ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗಿದೆ.

ಕಬಿನಿ ಒಳ ಹರಿವು ಹೆಚ್ಚಳ

ನಾಗರಹೊಳೆಹುಲಿ ಸಂರಕ್ಷಿತ ಪ್ರದೇಶ ಹಾಗೂ ಕೇರಳದ ವಯನಾಡು ಸುತ್ತಮುತ್ತ ಭಾರಿ ಮಳೆಯಾಗುತ್ತಿರುವುದರಿಂದ, ಮೈಸೂರು ಜಿಲ್ಲೆಯ ಕಬಿನಿ ಜಲಾಶಯಕ್ಕೆ ನೀರಿನ ಒಳಹರಿವಿನ ಪ್ರಮಾಣ 3,424 ಕ್ಯುಸೆಕ್‌ ತಲುಪಿದೆ. ಕಳೆದ ವರ್ಷ ಇದೇ ಸಮಯದಲ್ಲಿ 88 ಕ್ಯುಸೆಕ್ ಮಾತ್ರ ಇತ್ತು. ನಾಗರಹೊಳೆ ಅರಣ್ಯದೊಳಗಿನ ಬಹುತೇಕ ಕೆರೆಗಳು ತುಂಬಿವೆ. ಹೆಬ್ಬಳ್ಳ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ.

ತುಂಬಿಹರಿದ ಲಕ್ಷ್ಮಣತೀರ್ಥ

ಹುಣಸೂರು ತಾಲ್ಲೂಕಿನ ಲಕ್ಷ್ಮಣತೀರ್ಥ ನದಿ ತುಂಬಿ ಹರಿದಿದೆ. ಮನುಗನಹಳ್ಳಿ ಕೆರೆ ಕೋಡಿ ಬಿದ್ದು ತಗ್ಗು ಪ್ರದೇಶಗಳಿಗೆ ಹರಿದಿದೆ.ಮಂಚೇಗೌಡ ನಾಲೆ ಏರಿ ಒಡೆದು, ಮೈಸೂರು ಜಿಲ್ಲೆಯ ಸಾಲಿಗ್ರಾಮ ತಾಲ್ಲೂಕಿನ ಗಂಧನಹಳ್ಳಿಯಲ್ಲಿ ಕೃಷಿ ಜಮೀನಿಗೆ ನೀರು ನುಗ್ಗಿ ಅಡಿಕೆ, ಬಾಳೆ, ವೀಳ್ಯೆದೆಲೆ ಹಾಗೂ ತೆಂಗಿನ ಮರಗಳಿಗೆ ಹಾನಿಯಾಗಿದೆ.ತಿ.ನರಸೀಪುರ ತಾಲ್ಲೂಕಿನ ಮೂಗೂರು ಗ್ರಾಮದ ಪುರಾತನ ದೇಶೇಶ್ವರ ದೇವಾಲಯದ ಕಾಂಪೌಂಡ್ ಕುಸಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.