ADVERTISEMENT

Karnataka Rains: ರಾಜ್ಯದ ಜಲಾಶಯಗಳಲ್ಲಿ ಕಳೆದ ವರ್ಷಕ್ಕಿಂತ ದುಪ್ಪಟ್ಟು ನೀರು

​ಪ್ರಜಾವಾಣಿ ವಾರ್ತೆ
Published 19 ಜುಲೈ 2024, 23:30 IST
Last Updated 19 ಜುಲೈ 2024, 23:30 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕರ್ನಾಟಕದ ಪ್ರಮುಖ 16 ಜಲಾಶಯಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಹೆಚ್ಚಳವಾಗಿದೆ. ಈ ಜಲಾಶಯಗಳಲ್ಲಿ ಶೇ 51ರಷ್ಟು ನೀರಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶೇ 20ರಷ್ಟು ನೀರಿತ್ತು. 

ದೇಶದ 150 ಪ್ರಮುಖ ಜಲಾಶಯಗಳ ನೀರಿನ ಸಂಗ್ರಹಣಾ ಸಾಮರ್ಥ್ಯದ ಮಾಹಿತಿಯನ್ನೊಳಗೊಂಡಿರುವ ವಾರದ ವರದಿಯನ್ನು ಕೇಂದ್ರ ಜಲ ಆಯೋಗ (ಸಿಡಬ್ಲ್ಯುಸಿ) ಬಿಡುಗಡೆ ಮಾಡಿದೆ. ಕರ್ನಾಟಕ, ಕೇರಳ, ಅಸ್ಸಾಂ, ತ್ರಿಪುರ, ನಾಗಾಲ್ಯಾಂಡ್‌ ಹಾಗೂ ಜಾರ್ಖಂಡ್‌ನ ಜಲಾಶಯಗಳಲ್ಲಿ ಕಳೆದ ವರ್ಷಕ್ಕಿಂತ ಜಾಸ್ತಿ ನೀರಿದೆ. 

ADVERTISEMENT

ಪ್ರಮುಖ 16 ಜಲಾಶಯಗಳ ಗರಿಷ್ಠ ಸಂಗ್ರಹ ಸಾಮರ್ಥ್ಯ 24.62 ಬಿಸಿಎಂ (ಶತಕೋಟಿ ಘನ ಮೀಟರ್‌ಗಳು). ಸದ್ಯ, ಒಟ್ಟು ಸಾಮರ್ಥ್ಯದ ಶೇ 51ರಷ್ಟು ಅಂದರೆ, 12.56 ಬಿಸಿಎಂನಷ್ಟು ನೀರು ಸಂಗ್ರಹ ಇದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಈ ಜಲಾಶಯಗಳಲ್ಲಿ 4.89 ಬಿಸಿಎಂನಷ್ಟು ನೀರು ಸಂಗ್ರಹ ಇತ್ತು. ಪ್ರಸ್ತುತ ಸಂಗ್ರಹವು 10 ವರ್ಷಗಳ ಸರಾಸರಿ (ಸಾಮಾನ್ಯ) 10.08 ಬಿಸಿಎಂಗಿಂತ ಹೆಚ್ಚು ಎಂದು ಜಲ ಆಯೋಗ ವಿಶ್ಲೇಷಿಸಿದೆ. 

ಕಾವೇರಿ ನೀರು ಬಿಡುಗಡೆಗೆ ಸಂಬಂಧಿಸಿದಂತೆ ತಮಿಳುನಾಡು ಈ ವರ್ಷವೂ ತಕರಾರು ಎತ್ತಿದೆ. ಪ್ರತಿದಿನ 1 ಟಿಎಂಸಿ ಅಡಿಯನ್ನು ನೀರನ್ನು ನೆರೆ ರಾಜ್ಯಕ್ಕೆ ಬಿಡುಗಡೆ ಮಾಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿಯು ಶಿಫಾರಸು ಮಾಡಿದೆ. ಒಂದು ವೇಳೆ ನೀರು ಬಿಡುಗಡೆ ಮಾಡದಿದ್ದರೆ ಸುಪ್ರೀಂ ಕೋರ್ಟ್‌ ಮೆಟ್ಟಿಲೇರುವುದಾಗಿ ಎಚ್ಚರಿಸಿದೆ. ಈ ನಡುವೆ, ತಮಿಳುನಾಡಿನ ಜಲಾಶಯಗಳಲ್ಲಿ ಕಳೆದ ವರ್ಷಕ್ಕಿಂತ ಕಡಿಮೆ ನೀರಿನ ಸಂಗ್ರಹ ಇದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶೇ 44ರಷ್ಟು ನೀರಿದ್ದರೆ, ಈ ವರ್ಷ ಶೇ 31ರಷ್ಟಿದೆ. 

ರಾಜ್ಯದ ಕೃಷ್ಣಾ ಹಾಗೂ ಕಾವೇರಿ ನದಿಗಳಲ್ಲಿ ನೀರಿನ ಸಂಗ್ರಹ ಉತ್ತಮವಾಗಿದೆ ಎಂದು ಜಲ ಆಯೋಗ ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.