ADVERTISEMENT

ಅಪಘಾತ: ರೈತರ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಜೆ.ಕಾರ್ತಿಕ್‌ ನಿಧನ

​ಪ್ರಜಾವಾಣಿ ವಾರ್ತೆ
Published 31 ಜನವರಿ 2024, 4:11 IST
Last Updated 31 ಜನವರಿ 2024, 4:11 IST
<div class="paragraphs"><p>ಜೆ.ಕಾರ್ತಿಕ್‌</p></div>

ಜೆ.ಕಾರ್ತಿಕ್‌

   

ಹೊಸಪೇಟೆ (ವಿಜಯನಗರ): ಕರ್ನಾಟಕ ರಾಜ್ಯ ರೈತರ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಜೆ.ಕಾರ್ತಿಕ್‌ (42) ಅವರು ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಬುಧವಾರ ಮುಂಜಾನೆ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ ಪತ್ನಿ, ಪುತ್ರಿ ಇದ್ದಾರೆ.

ಕಾರ್ತಿಕ್ ಅವರು ಕೊಪ್ಪಳ ತಾಲ್ಲೂಕು ಶಹಾಪುರ ಟೋಲ್ ಗೇಟ್ ಹತ್ತಿರ ಸಂಭವಿಸಿದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ ನಸುಕಿನ 4.30ರ ಸುಮಾರಿಗೆ ಕೊನೆಯುಸಿರೆಳೆದರು ಎಂದು ಮುನಿರಾಬಾದ್‌ ಠಾಣೆ ಪೊಲೀಸರು ತಿಳಿಸಿದ್ದಾರೆ.

ADVERTISEMENT

‘ರಸ್ತೆ ಅಪಘಾತ ಹೇಗೆ ಸಂಘವಿಸಿದೆ ಎಂಬ ಬಗ್ಗೆ ಯಾರಿಗೂ ನಿರ್ದಿಷ್ಟ ಮಾಹಿತಿ ಇಲ್ಲ. ಸೋಮವಾರ ಸಂಜೆ 7 ಗಂಟೆಯಿಂದ ಅವರು ಫೋನ್‌ ಕರೆ ಸ್ವೀಕರಿಸಿಲ್ಲ. ಮಂಗಳವಾರ ಬೆಳಿಗ್ಗೆ 10ರ ಸುಮಾರಿಗೆ ಪೊಲೀಸ್‌ ಅಧಿಕಾರಿ ಫೋನ್‌ ಸ್ವೀಕರಿಸಿ ವಿಷಯ ತಿಳಿಸಿದ ಮೇಲಷ್ಟೇ ಅಪಘಾತದ ವಿಷಯ ಗೊತ್ತಾಗಿದೆ. ಕಾರ್ತಿಕ್‌ ರಾತ್ರಿ ಎಲ್ಲಿ ತಂಗಿದ್ದರು, ಅವರು ಫೋನ್‌ ಕರೆ ಸ್ವೀಕರಿಸದೆ ಇರುವುದಕ್ಕೆ ಕಾರಣ ಏನು ಎಂಬ ಬಗ್ಗೆ ಸಂಶಯ ಇದೆ’ ಎಂದು ಅವರ ಕುಟುಂಬದ ಆಪ್ತರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಈಚೆಗಷ್ಟೇ ಹೊಸ ಸಂಘಟನೆ ರಚನೆ: ಕೋಡಿಹಳ್ಳಿ ಚಂದ್ರಶೇಖರ್‌ ನೇತೃತ್ವದ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಕಾರ್ತಿಕ್‌ ಅವರು ಆ ಸಂಘಟನೆಯಲ್ಲಿ ಸುಮಾರು 15 ವರ್ಷ ಇದ್ದರು. ಕೆಲವೊಂದು ಭಿನ್ನಾಭಿಪ್ರಾಯ ಕಾರಣ ಕಾರ್ತಿಕ್‌ ಅವರು ಈಚೆಗೆ ರೈತ ಸಂಘದಿಂದ ಹೊರಬಂದು ಕರ್ನಾಟಕ ರಾಜ್ಯ ರೈತರ ಸಂಘ ಮತ್ತು ಹಸಿರು ಸೇನೆ ಎಂಬ ಪ್ರತ್ಯೇಕ ಸಂಘಟನೆ ರಚಿಸಿಕೊಂಡು ಅದರ ರಾಜ್ಯ ಕಾರ್ಯಾಧ್ಯಕ್ಷರಾಗಿದ್ದರು.

ಅಂತಿಮ ದರ್ಶನಕ್ಕೆ ವ್ಯವಸ್ಥೆ: ಕಾರ್ತಿಕ್‌ ಅವರ ಅಂತಿಮ ದರ್ಶನಕ್ಕೆ ಅವರ ಇಲ್ಲಿನ ಎಂ.ಪಿ.ಪ್ರಕಾಶ ನಗರದ ಎಸ್.ವಿ ಕಿಂಗ್ ಕೋರ್ಟ್‌ ಅಪಾರ್ಟ್‌ಮೆಂಟ್‌ನಲ್ಲಿ ವ್ಯವಸ್ಥೆ ಮಾಡಲಾಗಿದೆ. ಅಂತ್ಯ ಸಂಸ್ಕಾರ ಬುಧವಾರ ಸಂಜೆ ಇಲ್ಲಿನ ವೀರಶೈವ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.