ADVERTISEMENT

ರಾಜ್ಯದಾದ್ಯಂತ ಸಂಭ್ರಮದ ಕರ್ನಾಟಕ ರಾಜ್ಯೋತ್ಸವ ಆಚರಣೆ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2019, 5:58 IST
Last Updated 1 ನವೆಂಬರ್ 2019, 5:58 IST
ಶಿರಸಿಯಲ್ಲಿ ನ್ನಡ ರಾಜ್ಯೋತ್ಸವದ ಅಂಗವಾಗಿ ಶಾಲಾ ಮಕ್ಕಳು, ಸಾರ್ವಜನಿಕರು 450 ಮೀಟರ್ ಉದ್ದದ ಕನ್ನಡ ಧ್ವಜ ಹಿಡಿದು ಸಂಚರಿಸಿದರು.
ಶಿರಸಿಯಲ್ಲಿ ನ್ನಡ ರಾಜ್ಯೋತ್ಸವದ ಅಂಗವಾಗಿ ಶಾಲಾ ಮಕ್ಕಳು, ಸಾರ್ವಜನಿಕರು 450 ಮೀಟರ್ ಉದ್ದದ ಕನ್ನಡ ಧ್ವಜ ಹಿಡಿದು ಸಂಚರಿಸಿದರು.   

ಬೆಂಗಳೂರು: ಕನ್ನಡ ಕಂಪು ಕಮರಿ ಹೋಗುತ್ತಿದೆ ಎನ್ನುವ ಮಾತುಗಳ ನಡುವೆಯೂ ರಾಜ್ಯದಾದ್ಯಂತ ಇಂದು 64ನೇ ಕನ್ನಡ ರಾಜ್ಯೋತ್ಸವ ತುಸು ಜೋರಾಗಿಯೇ ನಡೆಯುತ್ತಿದೆ.

ಎಲ್ಲಾದರು ಇರು ಎಂತಾದರು ಇರು ||೨||
ಎಂದೆಂದಿಗೂ ನೀ ಕನ್ನಡವಾಗಿರು
ಕನ್ನಡವೇ ಸತ್ಯ, ಕನ್ನಡವೇ ನಿತ್ಯ..

–ಕುವೆಂಪು

ADVERTISEMENT

ಎಲ್ಲೆಡೆ ಕನ್ನಡದ ಹಾಡುಗಳು, ಕನ್ನಡಾಂಬೆಯ ಭಾವಚಿತ್ರದೊಂದಿಗೆ ಮೆರವಣಿಗೆ, ಕನ್ನಡ ಬಾವುಟಗಳ ಹಾರಾಟ, ಜೈಕಾರ, ಘೋಷಣೆಗಳಿಂದ ಕನ್ನಡ ಭಾಷೆ ಎಲ್ಲೆಡೆಮಾರ್ದನಿಸುತ್ತಿದೆ.

ಬೆಂಗಳೂರು ಸೇರಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅದ್ಧೂರಿ ಕನ್ನಡ ರಾಜ್ಯೋತ್ಸವ ಆಚರಣೆ ನಡೆಯುತ್ತಿದೆ. ರಾಜಧಾನಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಧ್ವಜಾರೋಹಣ ಮಾಡುವ ಮೂಲಕ ಚಾಲನೆ ನೀಡಿದರು.

ಚಿಕ್ಕಮಗಳೂರಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಅವರು ರಾಜ್ಯೋತ್ಸವದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿದರು.

ಕಲಬುರ್ಗಿಯಲ್ಲಿ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿರುವ ಮೆರವಣಿಗೆಗೆ ಜಿಲ್ಲಾಧಿಕಾರಿ ಬಿ.ಶರತ್ ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿದರು.

ಬೀದರ್ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆದು ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಮಹಾದೇವ ಹಾಗೂ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಭುವನೇಶ್ವರಿ ದೇವಿ ಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಚಿತ್ರದುರ್ಗದ ಪೊಲೀಸ್ ಕವಾಯತು ಮೈದಾನದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ವಿನೋತ್ ಪ್ರಿಯಾಧ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ನೀಡಿದರು.

ರಾಮನಗರದ ಜಿಲ್ಲಾ ಕ್ರೀಡಾಂಗಣ ದಲ್ಲಿ ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ ಧ್ವಜಾರೋಹಣ ನೆರವೇರಿಸಿದರು. ವಿಧ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಕೊಪ್ಪಳದಲ್ಲಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ 64ನೇ ರಾಜ್ಯೋತ್ಸವಕ್ಕೆ ಚಾಲನೆ ನೀಡಿದರು.

ಮಂಗಳೂರಿನ ನೆಹರು ಮೈದಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಧ್ವಜಾರೋಹಣ ಮಾಡಿದರು.

ಶ್ರೀರಾಮುಲು ಭಾಷಣದಲ್ಲಿ ತಾಳತಪ್ಪಿದ ಕನ್ನಡ

ರಾಯಚೂರು:‌ ರಾಜ್ಯೋತ್ಸವ ನಿಮಿತ್ತ ಜಿಲ್ಲಾ ಪೊಲೀಸ್ ಮೈದಾನದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಅವರು ಭಾಷಣ ಮಾಡಿದರು.

ಭಾಷಣದಲ್ಲಿ ಸಚಿವರು ಉಚ್ಛರಿಸಿದ ಕನ್ನಡ ಪದಗಳು ತಾಳ ತಪ್ಪಿದ್ದು ಗಮನ ಸೆಳೆಯಿತು.
ಬೇರೆಂದ್ರ (ಬೇಂದ್ರೆ), ಸಂಘ- ಸಮಸ್ಯೆಗಳು (ಸಂಘ- ಸಂಸ್ಥೆಗಳು), ಸಸಂತ್ರ (ಸ್ವತಂತ್ರ), ಅಂದ್ರಗೀನ (ಅಂದರೆ), ದೇವಪ್ರಾಣಿಯ ಅಶೋಕ (ದೇವನಾಂಪ್ರಿಯ ಅಶೋಕ), ಪ್ರಗತಿ-ಪದಕದಲ್ಲಿ (ಪ್ರಗತಿ ಪಥದಲ್ಲಿ)... ಸಚಿವರು ಭಾಷಣದಲ್ಲಿ ಉಚ್ಚರಿಸಿದ ಕೆಲವು ಪದಗಳಿವು.

ತುಮಕೂರು: ಎಲ್ಲರಿಗೂ ಸಮಾನ ಅವಕಾಶ ಸಿಗುವವರೆಗೂ ಸಮಾನತೆ ಎಂಬುದು ಸಮಾಜದಲ್ಲಿ ಬರುವುದಿಲ್ಲ ಎಂದು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ರಾಜ್ಯೋತ್ಸವ ಪ್ರಯುಕ್ತ ರಾಷ್ಟ್ರ ಮತ್ತು ಕನ್ಮಡ ಧ್ವಜಾರೋಹಣ ಮಾಡಿ ಅವರು ಮಾಡಿದರು.

ನೀರು, ವಿದ್ಯುತ್ ಸೇರಿದಂತೆ ಹಲವಾರು ಸೌಕರ್ಯಗಳನ್ನು ನಗರವಾಸಿಗಳು ಹೆಚ್ಚು ಬಳಸಿಕೊಳ್ಳುತ್ತಿದ್ದಾರೆ ಇದರಿಂದಾಗಿ ಗ್ರಾಮೀಣ ಪ್ರದೇಶಗಳು ಹಿಂದೆ ಉಳಿದಿವೆ. ನಗರವಾಸಿಯೊಬ್ಬರು ಸೋಲಾರ್ ಅಳವಡಿಸಿಕೊಂಡರೆ, ಉಳಿದ ವಿದ್ಯುತ್ ರೈತನ ಪಂಪ್ ಸೆಟ್ ಗೆ ಹೋಗುತ್ತದೆ. ಈ ರೀತಿ ಯೋಚನೆ ಮಾಡಿ, ನಾವು ಸಂಪನ್ಮೂಲಗಳನ್ನು ಸಮಾನವಾಗಿ ಹಂಚಿಕೊಳ್ಳಬೇಕು. ಆಗ ಮಾತ್ರ ಸರ್ವೋದಯ ಕಲ್ಪನೆ ಸಾಕಾರ ಆಗುತ್ತದೆ ಎಂದು ಹೇಳಿದರು.

ಸಮಾರಂಭದಲ್ಲಿ ಮಕ್ಕಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಗಮನ ಸೆಳೆದವು. ಎಸ್.ಎಸ್.ಎಲ್.ಸಿ.ಯಲ್ಲಿ 125ಕ್ಕೆ, 125 ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಸನ್ಮಾನ ಮಾಡಿದರು.

ಕನ್ನಡ ರಾಜ್ಯೋತ್ಸವ: ಮೈಸೂರಿನಲ್ಲಿ ಆಕರ್ಷಕ ಮೆರವಣಿಗೆ

ಮೈಸೂರು: ಜಿಲ್ಲಾಡಳಿತದ ವತಿಯಿಂದ ಶುಕ್ರವಾರ ಅರಮನೆಯ ಕೋಟೆ ಆಂಜನೇಯಸ್ವಾಮಿ ದೇಗುಲದ ಆವರಣದಲ್ಲಿ 64ನೇ ಕರ್ನಾಟಕ ರಾಜ್ಯೋತ್ಸವ ನಡೆಯಿತು.

ಮೆರವಣಿಗೆಯಲ್ಲಿ ರಮೇಶ್ ಎಂಬ ಅಂಗವಿಕಲರೊಬ್ಬರು ತಮ್ಮ ತ್ರಿಚಕ್ರ ವಾಹನವನ್ನು ಸ್ತಬ್ದಚಿತ್ರದ ಹಾಗೆ ಸಿಂಗರಿಸಿದ್ದು ಗಮನ ಸೆಳೆಯಿತು. ಸಿರಿಗನ್ನಡಂಗೆಲ್ಗೆ ಎಂಬ ಬರಹಗಳ ಫಲಕಗಳುಳ್ಳ ಈ ಸ್ತಬ್ದಚಿತ್ರದಲ್ಲಿ ಕನ್ನಡ ನಾಡಿನ ವಿವಿಧ ಪ್ರವಾಸಿಸ್ಥಳಗಳ ಚಿತ್ರಗಳು ಇದ್ದವು.

ಚಾಮುಂಡಿಪುರಂನ ಸೇಂಟ್ ಮೇರಿಸ್ ಶಾಲೆಯ 6ನೇ ತರಗತಿ ವಿದ್ಯಾರ್ಥಿ ಭುವಂತ ತನ್ನ ಬೈಸಿಕಲ್ ನಲ್ಲಿ ಪ್ಲಾಸ್ಟಿಕ್ ವಿರುದ್ದ ಜಾಗೃತಿ ಮೂಡಿಸಿದ್ದು ವಿಶೇಷವಾಗಿತ್ತು.

ಪ್ಲಾಸ್ಟಿಕ್ ತ್ಯಜಿಸಿ ಪರಿಸರ ಉಳಿಸಿ ಎಂಬ ನಾಮಫಲಕವುಳ್ಳ ಬೈಸಿಕಲ್‌ಗಳುಕನ್ನಡ ಧ್ವಜಗಳಿಂದ ಅಲಂಕರಿಸಿ ಮೆರವಣಿಗೆಯಲ್ಲಿ ಭಾಗಿಯಾಗಿದ್ದವು.ನಂದಿಕಂಬ, ವೀರಗಾಸೆ ಸೇರಿದಂತೆ ಅನೇಕ ಕಲಾತಂಡಗಳು ಕನ್ನಡಾಂಬೆಯ ಮೆರವಣಿಗೆಯಲ್ಲಿದ್ದವು. ಇದಕ್ಕೂ ಮುನ್ನ ಸಚಿವ ವಿ.ಸೋಮಣ್ಣ ಧ್ವಜಾರೋಹಣ ನೆರವೇರಿಸಿ ರಾಜ್ಯೋತ್ಸವದ ಶುಭಾಷಯ ಕೋರಿದರು.

ದಾವಣಗೆರೆ: ಇಲ್ಲಿನ ಹೈಸ್ಕೂಲ್ ಮೈದಾನದಲ್ಲಿ ಕರ್ನಾಟಕ ರಾಜ್ಯೋತ್ಸವ ಮೆರವಣಿಗೆಗೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಚಾಲನೆ ನೀಡಿದರು.

ಶಾಸಕ ಎಸ್. ಎ. ರವೀಂದ್ರನಾಥ್, ಜಿಲ್ಲಾ ಪಂಚಾಯಿತಿ ಸಿಇಒ ಪದ್ಮ ಬಸವಂತಪ್ಪ, ಮಹಾನಗರ ಪಾಲಿಕೆ ಆಯುಕ್ತ ಮಂಜುನಾಥ್ ಬಳ್ಳಾರಿ, ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಹಾಜರಿದ್ದರು.

ಹೈಸ್ಕೂಲ್ ಮೈದಾನದಿಂದ ಆರಂಭವಾದ ಮೆರವಣಿಗೆ ಮಹಾನಗರ ಪಾಲಿಕೆ, ಗಾಂಧಿವೃತ್ತ, ಅಶೋಕ ರಸ್ರೆ, ಜಯದೇವ ವೃತ್ತ ತಲುಪಿ ವಿದ್ಯಾರ್ಥಿ ಭವನದ ಮೂಲಕ ಜಿಲ್ಲಾ ಕ್ರೀಡಾಂಗಣ ತಲುಪಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.