ಬೆಂಗಳೂರು: ರಾಜ್ಯ ಯುವ ಕಾಂಗ್ರೆಸ್ ಸಮಿತಿ ನಿಕಟಪೂರ್ವ ಅಧ್ಯಕ್ಷ ರಕ್ಷಾ ರಾಮಯ್ಯ ಅವರನ್ನು ಯವ ಕಾಂಗ್ರೆಸ್ ಸಮಿತಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ.
ರಕ್ಷಾ ರಾಮಯ್ಯ ಅವರಿಗೆ ಪತ್ರದ ಮೂಲಕ ಮಾಹಿತಿ ನೀಡಿರುವ ಭಾರತೀಯ ರಾಷ್ಟ್ರೀಯ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ವಿ. ಶ್ರೀನಿವಾಸ್, 'ತಕ್ಷಣದಿಂದಲೇ ಜಾರಿಗೆ ಬರುವಂತೆ ನಿಮ್ಮನ್ನು ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ. ಪಕ್ಷಕ್ಕೆ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ನಿಮಗೆ ಈ ಹುದ್ದೆ ನೀಡಿದ್ದು, ಪಕ್ಷದ ಸಂಘಟನೆಯನ್ನು ಬಲಪಡಿಸುವ ಕೆಲಸ ಮಾಡಬೇಕು' ಎಂದು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ರಕ್ಷಾ, 'ಪಕ್ಷ ನೀಡಿರುವ ಜವಾಬ್ದಾರಿಯನ್ನು ವಿನಮ್ರವಾಗಿ ಸ್ವೀಕರಿಸಿ, ಕೆಲಸ ಮಾಡುತ್ತೇನೆ. ಉದಯಪುರದಲ್ಲಿ ನಡೆದ ಕಾಂಗ್ರೆಸ್ ಚಿಂತನ ಶಿಬಿರದ ನಿರ್ಣಯಗಳನ್ನು ಅನುಷ್ಠಾನಕ್ಕೆ ತರಲು ಶ್ರಮಿಸುತ್ತೇನೆ. ರಾಷ್ಟ್ರ ಮಟ್ಟದಲ್ಲಿ ಯುವ ಕಾಂಗ್ರೆಸ್ ಮತ್ತು ಯುವಜನರ ಧ್ವನಿಯಾಗಿ ಕೆಲಸ ಮಾಡುತ್ತೇನೆ' ಎಂದು ಹೇಳಿದ್ದಾರೆ.
ರಾಜ್ಯ ಯುವ ಕಾಂಗ್ರೆಸ್ ಸಮಿತಿಗೆ ಈ ಹಿಂದೆ ನಡೆದ ಚುನಾವಣೆಯಲ್ಲಿ ರಕ್ಷಾ ರಾಮಯ್ಯ ಎರಡನೇ ಸ್ಥಾನ ಗಳಿಸಿದ್ದರು. ರಾಜ್ಯ ಯುವ ಕಾಂಗ್ರೆಸ್ ಸಮಿತಿಯ ಹಾಲಿ ಅಧ್ಯಕ್ಷ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಮೊದಲ ಸ್ಥಾನ ಗಳಿಸಿದ್ದರು. ಆದರೆ, ಚುನಾವಣಾ ಅಕ್ರಮದ ಆರೋಪದ ಕಾರಣಕ್ಕೆ ಫಲಿತಾಂಶವನ್ನು ತಡೆಹಿಡಿದು ರಕ್ಷಾ ಅವರನ್ನು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು.
ಕಾಂಗ್ರೆಸ್ ಹೈಕಮಾಂಡ್ ತೀರ್ಮಾನದಂತೆ ಇಬ್ಬರ ನಡುವೆ ಸಂಧಾನ ನಡೆಸಿ, ಮೊಹಮ್ಮದ್ ಹ್ಯಾರಿಸ್ ನಲಪಾಡ್ ಅವರಿಗೆ 2022ರ ಫೆಬ್ರುವರಿಯಲ್ಲಿ ಅಧ್ಯಕ್ಷ ಸ್ಥಾನ ನೀಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.