ಬೆಂಗಳೂರು: ಕನ್ನಡಿಗರಲ್ಲಿ ಅಭಿಮಾನ ಶೂನ್ಯತೆ ಆವರಿಸಿದೆ. ಭಾಷೆ, ನೆಲ, ಜಲ, ಗಡಿಯ ಬಗ್ಗೆ ಕಾಳಜಿ ಇಲ್ಲದಿದ್ದರೆ ಭವಿಷ್ಯದಲ್ಲಿ ಬೆಲೆ ತೆರಬೇಕಾಗುತ್ತದೆ ಎಂದು ಸಿದ್ದಗಂಗ ಮಠದ ಸಿದ್ದಲಿಂಗ ಸ್ವಾಮೀಜಿ ಹೇಳಿದರು.
ಕರ್ನಾಟಕ ರಕ್ಷಣಾ ವೇದಿಕೆ ಶುಕ್ರವಾರ ಹಮ್ಮಿಕೊಂಡಿದ್ದ ಬೆಳ್ಳಿ ಹಬ್ಬ ಸಂಭ್ರಮ ಹಾಗೂ ಕರ್ನಾಟಕ ಸಾಂಸ್ಕೃತಿಕ ಸಮಾವೇಶದಲ್ಲಿ ಅವರು ಮಾತನಾಡಿದರು.
ಕನ್ನಡಕ್ಕೆ ಪ್ರಾಚೀನ ಸಾಂಸ್ಕೃತಿಕ ಶಕ್ತಿ ಇದೆ. ಅಂತಹ ಶಕ್ತಿ ಉಳಿಸಿಕೊಂಡು ಹೋಗುವ ಜವಾಬ್ದಾರಿ ಎಲ್ಲ ಕನ್ನಡಿಗರ ಮೇಲಿದೆ ಎಂದರು.
ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ‘ದೇಹವನ್ನು ಎಷ್ಟೇ ಚೆನ್ನಾಗಿ ನೋಡಿಕೊಂಡರೂ ನಾನಾ ಕಾರಣ ಗಳಿಂದಾಗಿ ಆರೋಗ್ಯ ವ್ಯತ್ಯಾಸವಾಗುತ್ತದೆ. ಅದೇ ರೀತಿ ಸಂಘಟನೆಯನ್ನು ಎಷ್ಟೇ ಸೂಕ್ಷ್ಮವಾಗಿ ನಡೆಸಿದರೂ ಭಿನ್ನಮತ ಬರುತ್ತವೆ. ಅದೆಲ್ಲ ಮೀರಿ ನಡೆಯುವುದೇ ನಾಯಕತ್ವದ ಶಕ್ತಿ’ ಎಂದು ವಿಶ್ಲೇಷಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ‘ಗಡಿ ವಿಚಾರದಲ್ಲಿ ಮಹಾರಾಷ್ಟ್ರ ತಗಾದೆ ತೆಗೆದಾಗ ನಮ್ಮ ನಿಲುವು ಸ್ಪಷ್ಟಪಡಿಸಲಾಗಿದೆ. ಸಂಗೊಳ್ಳಿ ರಾಯಣ್ಣನ ಮೂರ್ತಿ ಪೂರ್ಣಗೊಳಿಸಲಾಗಿದೆ. ಕನ್ನಡಿಗರ ಇತಿಹಾಸ, ಸಾಹಿತ್ಯ, ಆಡಳಿತ, ಪರಂಪರೆ ಸಂರಕ್ಷಿಸಲಾಗಿದೆ. ಕನ್ನಡಕ್ಕಾಗಿ ಉದ್ಯೋಗ ನೀತಿ ರೂಪಿಸಿ, ಶೇ 80ರಷ್ಟು ಮೀಸಲಾತಿ ಕಲ್ಪಿಸಲಾಗಿದೆ’ ಎಂದು ಹೇಳಿದರು.
ಆರೋಗ್ಯ ಸಚಿವ ಡಾ.ಸುಧಾಕರ್, ‘ನಾಡುನುಡಿ ವಿಚಾರದಲ್ಲಿ ಕನ್ನಡಪರ ಸಂಘಟನೆಗಳು ಹೋರಾಟ ಮಾಡಿದರೆ ಸಾಲದು. ಎಲ್ಲರೂ ತಮ್ಮ ಜವಾಬ್ದಾರಿ ಅರಿತು ಕರ್ನಾಟಕದ ಸಮಗ್ರ ಅಭಿವೃದ್ದಿಗೆ ಕೊಡುಗೆ ನೀಡಬೇಕು’ ಎಂದರು.
ಮಾದಾರ ಚನ್ನಯ್ಯ ಪೀಠದ ಬಸವಮೂರ್ತಿ ಮಾದಾರ ಚಮ್ಮಯ್ಯ ಸ್ವಾಮೀಜಿ, ಸಾಹಿತಿ ಚಂದ್ರಶೇಖರ ಕಂಬಾರ, ನಟ ದ್ವಾರಕೀಶ್, ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯ, ಕರವೇ ಅಧ್ಯಕ್ಷ ನಾರಾಯಣ ಗೌಡ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.