ಬೆಂಗಳೂರು: ‘ರಾಜ್ಯದಲ್ಲಿ ನ್ಯಾನೊ ತಂತ್ರಜ್ಞಾನ ಕ್ಷೇತ್ರದಲ್ಲಿ ಸಂಶೋಧನೆಗೆ ಒತ್ತು ನೀಡಲಾಗುವುದು. ಇದಕ್ಕಾಗಿ ‘ಬೆಂಗಳೂರು– ಇಂಡಿಯಾ ನ್ಯಾನೊ–2024’ ಸಮಾವೇಶವನ್ನು ಆಯೋಜಿಸಲಾಗುತ್ತಿದೆ’ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ತಿಳಿಸಿದರು.
ಸಮಾವೇಶದ ಅಂಗವಾಗಿ ಆಯೋಜಿಸಲಾಗಿದ್ದ ಪೂರ್ವಬಾವಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ‘ರಾಜ್ಯದಲ್ಲಿ ನವೋದ್ಯಮಗಳ ಆರಂಭ ಮತ್ತು ನೂತನ ಉತ್ಪನ್ನಗಳ ಅಭಿವೃದ್ಧಿ ಹಾಗೂ ಉತ್ಪಾದನೆಗೆ ಪೂರಕ ವಾತಾವರಣ ನಿರ್ಮಾಣ ಮಾಡಲಾಗುತ್ತಿದೆ. ಕರ್ನಾಟಕ ರಾಜ್ಯ ಸಂಶೋಧನಾ ಪ್ರತಿಷ್ಠಾನವನ್ನೂ ಸ್ಥಾಪಿಸಿದ್ದೇವೆ’ ಎಂದು ಅವರು ಹೇಳಿದರು.
‘ಹೊಸ ಸಂಶೋಧನೆಗಳ ಫಲವನ್ನು ಜನರಿಗೆ ತಲುಪಿಸುವ ಕೆಲಸ ಆಗಬೇಕು. ಇದಕ್ಕಾಗಿ ಕರ್ನಾಟಕ ಸಂಶೋಧನೆ ಮತ್ತು ಅಭಿವೃದ್ಧಿ ನಾವೀನ್ಯತಾ ಪ್ಲಾಟ್‌ಫಾರಂ– ಇ–ಕೆಆರ್‌ಡಿಐಪಿ ಸ್ಥಾಪಿಸಲಾಗುತ್ತಿದೆ. ಈ ಎರಡೂ ಸಂಸ್ಥೆಗಳ ಮೂಲಕ ನ್ಯಾನೊ ತಂತ್ರಜ್ಞಾನ ಸಂಶೋಧನೆಗೆ ಆದ್ಯತೆ ನೀಡಲಾಗುವುದು. ಈಗಾಗಲೇ ನಮ್ಮ ಇಲಾಖೆಯ ಅಡಿಯಲ್ಲಿ ಸಂಶೋಧನೆಗೆ ಅಗತ್ಯ ಅನುದಾನ ನೀಡಲಾಗುತ್ತಿದೆ. ಈ ಕ್ಷೇತ್ರದಲ್ಲಿ ಇನ್ನು ಹೆಚ್ಚಿನ ಸಂಶೋಧನೆ ಅಗತ್ಯವಿದೆ. ಇದಕ್ಕೆ ಬೇಕಾದ ಕಾರ್ಯಕ್ರಮಗಳಿಗೆ ಸರಕಾರದ ಮಟ್ಟದಲ್ಲಿ ಚಿಂತನೆ ನಡೆಸಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.