ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ನಿಂದ ಆಸ್ಪತ್ರೆಗೆ ದಾಖಲಾಗುತ್ತಿರುವವರ ಪ್ರಮಾಣ ಶೇಕಡ 2ಕ್ಕೆ ಇಳಿಕೆಯಾಗಿರುವುದರಿಂದ ನಿರ್ಬಂಧಗಳನ್ನು ಭಾಗಶಃ ತೆರವು ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಜನವರಿ 31ರಿಂದ ರಾಜ್ಯದಾದ್ಯಂತ ರಾತ್ರಿ ಕರ್ಫ್ಯೂ ರದ್ದುಗೊಳಿಸಿ ಆದೇಶವನ್ನೂ ಹೊರಡಿಸಲಾಗಿದೆ.
ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಭೆಯಲ್ಲಿ, ಕೆಲವು ನಿರ್ಬಂಧಗಳನ್ನು ತೆರವು ಮಾಡುವ ನಿರ್ಧಾರ ಕೈಗೊಳ್ಳಲಾಯಿತು. ಇನ್ನು ಕೆಲವು ನಿರ್ಬಂಧಗಳನ್ನು ಸಡಿಲಿಸುವ ತೀರ್ಮಾನವನ್ನೂ ಕೈಗೊಳ್ಳಲಾಯಿತು.
ಮಹಾರಾಷ್ಟ್ರ, ಕೇರಳ ಮತ್ತು ಗೋವಾ ಗಡಿಯಲ್ಲಿ ಕಟ್ಟೆಚ್ಚರ ಮುಂದುವರಿಸಲು ಹೊಸ ಮಾರ್ಗಸೂಚಿಯಲ್ಲಿ ನಿರ್ದೇಶನ ನೀಡಲಾಗಿದೆ.
ಸಭೆಯ ಬಳಿಕ ಪತ್ರಕರ್ತರ ಜತೆ ಮಾತನಾಡಿದ ಕಂದಾಯ ಸಚಿವ ಆರ್. ಅಶೋಕ, ‘ರಾಜ್ಯದಲ್ಲಿ ಈಗ 4.02 ಲಕ್ಷ ಸಕ್ರಿಯ ಕೋವಿಡ್ ಪ್ರಕರಣಗಳಿವೆ. ಅವರಲ್ಲಿ 14 ವರ್ಷದೊಳಗಿನ ಸೋಂಕಿತರ ಸಂಖ್ಯೆ 22,318 (ಶೇ 5.5) ಇದೆ. ಆಸ್ಪತ್ರೆಗೆ ದಾಖಲಾಗುತ್ತಿರುವ ಮಕ್ಕಳ ಪ್ರಮಾಣ ಶೇ 1.8ರಷ್ಟು ಮಾತ್ರ ಇದೆ. ಮರಣ ಪ್ರಮಾಣ ಶೇ 0.03 ಮಾತ್ರ ದಾಖಲಾಗಿದೆ’ ಎಂದು ವಿವರ ನೀಡಿದರು.
ಕೋವಿಡ್ ದೃಢಪ್ರಮಾಣ ದರ ಶೇ 33ಕ್ಕೆ ತಲುಪಿತ್ತು. ಈಗ ಅದು ಶೇ 20.9ಕ್ಕೆ ಕುಸಿದಿದೆ. ಸೋಂಕಿತರಲ್ಲಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ತೀರಾ ಕಡಿಮೆ ಇರುವುದರಿಂದ ಬಿಗಿಯಾದ ನಿರ್ಬಂಧಗಳ ಅಗತ್ಯವಿಲ್ಲ ಎಂಬ ಸಲಹೆ ವ್ಯಕ್ತವಾಗಿದೆ. ತಜ್ಞರ ಸಮಿತಿಯ ಅಭಿಪ್ರಾಯವನ್ನೂ ಪಡೆದು ನಿರ್ಬಂಧಗಳನ್ನು ತೆರವು ಮಾಡುವ ಮತ್ತು ಸಡಿಲಿಸುವ ನಿರ್ಧಾರವನ್ನು ಕೈಗೊಳ್ಳ ಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಜ.31ರಿಂದ ರಾಜ್ಯದ ಯಾವುದೇ ಭಾಗದಲ್ಲೂ ರಾತ್ರಿ ಕರ್ಫ್ಯೂ ಇರುವುದಿಲ್ಲ. ಹೋಟೆಲ್, ಪಬ್, ಕ್ಲಬ್, ಬಾರ್– ರೆಸ್ಟೋರೆಂಟ್ ಗಳಲ್ಲಿ ವಹಿವಾಟು ನಡೆಸಲು ಮುಕ್ತವಾದ ಅವಕಾಶ ನೀಡಲಾಗುವುದು. ಎಲ್ಲ ಬಗೆಯ ಸಾರ್ವಜನಿಕ ಸಾರಿಗೆಗಳಲ್ಲಿ ಸಾಮರ್ಥ್ಯದ ಸಂಪೂರ್ಣ ಪ್ರಮಾಣದಲ್ಲಿ ಪ್ರಯಾಣಿಕರಿಗೆ ಅವಕಾಶ ನೀಡಲು ಸಮ್ಮತಿಸಲಾಗಿದೆ ಎಂದು ಅವರು ತಿಳಿಸಿದರು.
ರಾಜ್ಯದ ಎಲ್ಲ ಆಸ್ಪತ್ರೆಗಳಲ್ಲಿ ಎಲ್ಲ ಬಗೆಯ ಹಾಸಿಗೆಗಳಲ್ಲಿ ಶೇ 10ರಷ್ಟನ್ನು ಕೋವಿಡ್ ರೋಗಿಗಳ ಚಿಕಿತ್ಸೆಗೆ ಕಾಯ್ದಿರಿಸುವಂತೆಯೂ ಆದೇಶ ಹೊರಡಿಸಲಾಗಿದೆ.
ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ. ಸುದರ್ಶನ್ ಮತ್ತು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
ಸೋಮವಾರದಿಂದ ತರಗತಿ:‘ಬೆಂಗಳೂರು ನಗರದ ವ್ಯಾಪ್ತಿಯಲ್ಲಿ 1ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಸೋಮವಾರದಿಂದ ಭೌತಿಕ ತರಗತಿಗಳನ್ನು ನಡೆಸಲಾಗುವುದು. ಇತರ ಜಿಲ್ಲೆಗಳಲ್ಲಿ ಇರುವಂತೆಯೇ ಕೋವಿಡ್ ನಿಯಂತ್ರಣ ಮಾರ್ಗಸೂಚಿ ಪಾಲಿಸಿಕೊಂಡು ತರಗತಿಗಳನ್ನು ನಡೆಸಲಾಗುವುದು’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದರು.
‘ಕೋವಿಡ್ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುವ ಶಾಲೆಗಳನ್ನು ಮಾತ್ರ ಮುಚ್ಚಲಾಗುವುದು. ಸೋಂಕು ಕಡಿಮೆಯಾದ ಬಳಿಕ ಅಂತಹ ಶಾಲೆಗಳಲ್ಲಿ ಮತ್ತೆ ತರಗತಿಗಳನ್ನು ಆರಂಭಿಸಲಾಗುವುದು’ ಎಂದರು.
ಯಾವುದಕ್ಕೆಲ್ಲ ಸಂಪೂರ್ಣ ನಿರ್ಬಂಧ ತೆರವು?
*ಸರ್ಕಾರಿ ಕಚೇರಿಗಳಿಗೆ ಎಲ್ಲ ನೌಕರರೂ ಹಾಜರಾಗುವುದು ಕಡ್ಡಾಯ.
*ಹೋಟೆಲ್, ಬಾರ್ ಮತ್ತು ರೆಸ್ಟೋರೆಂಟ್, ಪಬ್, ಕ್ಲಬ್‌ಗಳಲ್ಲಿ ಪೂರ್ಣ ನಿರ್ಬಂಧ ತೆರವು
*ಸಾರ್ವಜನಿಕ ಸಾರಿಗೆಯಲ್ಲಿ ಪೂರ್ಣ ಸಾಮರ್ಥ್ಯದ ಸೀಟುಗಳ ಭರ್ತಿಗೆ ಅವಕಾಶ
ಯಾವುದಕ್ಕೆಲ್ಲ ನಿರ್ಬಂಧ?
*ಚಿತ್ರಮಂದಿರ, ಮಲ್ಟಿಪ್ಲೆಕ್ಸ್, ರಂಗಮಂದಿರ, ಸಭಾಭವನಗಳಲ್ಲಿ ಶೇ 50ರಷ್ಟು ಸೀಟು ಭರ್ತಿಗೆ ಅವಕಾಶ
* ಮದುವೆ ಸಮಾರಂಭಗಳಿಗೆ ತೆರೆದ ಸ್ಥಳದಲ್ಲಿ 300 ಜನರಿಗೆ ಮತ್ತು ಒಳಾಂಗಣದಲ್ಲಿ 200 ಜನರಿಗೆ ಅವಕಾಶ
*ದೇವಾಲಯಗಳಲ್ಲಿ ದರ್ಶನ ಮತ್ತು ಸೇವೆಗೆ ಅವಕಾಶ, ಒಮ್ಮೆಗೆ 50 ಜನರಿಗೆ ಮಾತ್ರ
*ರ‍್ಯಾಲಿ, ಧರಣಿ, ಸಮಾವೇಶ, ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ಕಾರ್ಯಕ್ರಮಗಳಿಗೆ ನಿರ್ಬಂಧ
*ಕ್ರೀಡಾ ಸಂಕೀರ್ಣ, ಸ್ಟೇಡಿಯಂ, ಈಜುಕೊಳ ಮತ್ತು ಜಿಮ್‌ಗಳಲ್ಲಿ ಶೇ 50ರಷ್ಟು ಮಂದಿಗೆ ಮಾತ್ರ ಅವಕಾಶ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.