ADVERTISEMENT

13 ರಂದು ರಾಯಚೂರಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 11 ಜೂನ್ 2022, 7:46 IST
Last Updated 11 ಜೂನ್ 2022, 7:46 IST
ಡಾ.ಬಿ.ವಿ.ವಸಂತಕುಮಾರ್
ಡಾ.ಬಿ.ವಿ.ವಸಂತಕುಮಾರ್   

ರಾಯಚೂರು: ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ 2020 ಮತ್ತು 2021ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ಜೂನ್‌ 13 ರಂದು ಸಂಜೆ 4 ಗಂಟೆಗೆ ಆಯೋಜಿಸಲಾಗುತ್ತಿದೆ ಎಂದು ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ವಸಂತಕುಮಾರ್ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್ ಕುಮಾರ್‌ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ರಾಯಚೂರು ನಗರ ಶಾಸಕ ಡಾ.ಶಿವರಾಜ ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ. ವಿಧಾನ ಪರಿಷತ್‌ ಸದಸ್ಯ ಎನ್‌.ರವಿಕುಮಾರ್ ’ಸಾಹಿತ್ಯ ಪಥ’ ಬಿಡುಗೊಳಿಸಲಿದ್ದಾರೆ. ಸಾಹಿತಿ ಎಚ್‌.ಎಸ್‌.ಶಿವಪ್ರಕಾಶ್‌ ಅಭಿನಂದನಾ ನುಡಿಗಳನ್ನು ಆಡಲಿದ್ದಾರೆ. ಜಿಲ್ಲೆಯ ಶಾಸಕರು ಮತ್ತು ಉಸ್ತುವಾರಿ ಸಚಿವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ’ ಎಂದರು.

‘ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಅಮೂಲ್ಯ ಸೇವೆ ಪರಿಗಣಿಸಿ ಐವರು ಹಿರಿಯ ಸಾಹಿತಿಗಳಿಗೆ ತಲಾ ₹50 ಸಾವಿರ ನಗದು ಮತ್ತು ಗೌರವ ಪ್ರಶಸ್ತಿ ನೀಡಲಾಗುವುದು. 10 ಸಾಹಿತಿಗಳಿಗೆ 2021ನೇ ಸಾಲಿನ ‘ಸಾಹಿತ್ಯಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು ₹25 ಸಾವಿರ ನಗದು ಮತ್ತು ಪ್ರಮಾಣಪತ್ರ ಒಳಗೊಂಡಿದೆ. 2020 ರಲ್ಲಿ ಪ್ರಥಮಾವೃತ್ತಿಯಾಗಿ ಪ್ರಕಟವಾದ 19 ಕೃತಿಗಳಿಗೆ ‘ವರ್ಷದ ಪುಸ್ತಕ ಬಹುಮಾನ’ ನೀಡಲಾಗುವುದು. ಇದು ₹25 ಸಾವಿರ ನಗದು ಮತ್ತು ಪ್ರಮಾಣಪತ್ರ ಒಳಗೊಂಡಿದೆ’ ಎಂದು ಅವರು ಮಾಹಿತಿ ನೀಡಿದರು.

ADVERTISEMENT

ಇದಲ್ಲದೆ 10 ಕೃತಿಗಳಿಗೆ ‘ದತ್ತಿ ಪುಸ್ತಕ ಬಹುಮಾನ ನೀಡಲಾಗುವುದು. ದತ್ತಿ ಮೊತ್ತಕ್ಕೆ ಬಂದಿರುವ ಬಡ್ಡಿ ಮೊತ್ತ ಮತ್ತು ಪ್ರಮಾಣಪತ್ರವನ್ನು ಒಳಗೊಂಡಿದೆ. ರಾಜ್ಯಮಟ್ಟದ ಕಾರ್ಯಕ್ರಮವನ್ನು ರಾಯಚೂರಿನಲ್ಲಿ ಆಯೋಜಿಸುತ್ತಿರುವುದು ಸಂತೋಷ ತಂದಿದೆ. ನಾಡಿನ ವಿವಿಧ ಜಿಲ್ಲೆಗಳಿಂದ ಸಾಹಿತಿಗಳು ಭಾಗವಹಿಸುವರು ಎಂದು ಹೇಳಿದರು.

ಅಕಾಡೆಮಿ ರಿಜಿಸ್ಟ್ರಾರ್‌ ಕರಿಯಪ್ಪ ಎನ್‌, ಸದಸ್ಯರಾದ ಡಾ.ಬಿ.ಎಂ.ಶರಭೇಂದ್ರಸ್ವಾಮಿ, ಛಾಯಾ ಭಗವತಿ, ದತ್ತಗುರು ಎಸ್‌.ಹೆಗಡೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.