ADVERTISEMENT

ಬರಗೂರು ಹೇಳಿಕೆಯಲ್ಲೇ ಪಕ್ಷದ ವಾಸನೆ: ಬಿ.ವಿ. ವಸಂತಕುಮಾರ್‌ ವ್ಯಂಗ್ಯ

‘ಶಿಕ್ಷಣಕ್ಕೆ ನಿಷ್ಠೆ’ ಹೇಳಿಕೆಗೆ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ವಸಂತಕುಮಾರ್‌ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 25 ಜೂನ್ 2022, 17:42 IST
Last Updated 25 ಜೂನ್ 2022, 17:42 IST
ಬರಗೂರು ರಾಮಚಂದ್ರಪ್ಪ
ಬರಗೂರು ರಾಮಚಂದ್ರಪ್ಪ    

ಬೆಂಗಳೂರು: ‘ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಯ ಅಧ್ಯಕ್ಷರಾಗಿದ್ದ ಬರಗೂರು ರಾಮಚಂದ್ರಪ್ಪ ಅವರು ತಮ್ಮ ಸಮಿತಿ ಶಿಕ್ಷಣಕ್ಕೆ ನಿಷ್ಠವಾಗಿ ಪಠ್ಯ ಪರಿಷ್ಕರಣೆ ಮಾಡಿತ್ತು. ತಮ್ಮದು ಪಕ್ಷದ ಪಠ್ಯವಲ್ಲ ಎಂದು ಹೇಳುತ್ತಿರುವುದರಲ್ಲಿಯೇ ಒಂದು ‘ಪಕ್ಷದ ಪಠ್ಯ’ವಾಗಿರುವ ವಾಸನೆಯಿದೆ’ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಂದು ಬಿ.ವಿ. ವಸಂತಕುಮಾರ್‌ ಟೀಕಿಸಿದ್ದಾರೆ.

‘ಆರನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿರುವ ‘ಆಲಿಘಡ ಚಳವಳಿ’ ಪಾಠದಲ್ಲಿ ಮುಡಂಬಡಿತ್ತಾಯ ಸಮಿತಿ ಬರೆದಿದ್ದ ‘ಸರ್‌ ಸಯ್ಯದ್‌ರವರು ರಾಷ್ಟ್ರೀಯ ಕಾಂಗ್ರೆಸ್‌ನಿಂದ ದೂರವೇ ಉಳಿದು ಮುಸಲ್ಮಾನ ಸಮುದಾಯ ವನ್ನು ಒಗ್ಗೂಡಿಸಿದರು’ ಎಂಬ ಸಾಲನ್ನು ಬರಗೂರು ಸಮಿತಿ ಕೈಬಿಟ್ಟು, ‘ಕುರಾನ್‌ ಗ್ರಂಥವು ಮಾತ್ರ ಪ್ರಮಾಣೀಕೃತ’ ಎಂಬ ಸಾಲು ಸೇರಿಸಿದೆ. ಇದು ಯಾವ ಪಕ್ಷದ ಮತದ ತುಷ್ಟೀಕರಣ’ ಎಂದು ಅವರು ಪ್ರಶ್ನಿಸಿದ್ದಾರೆ.

‘ಬರಗೂರು ಸಮಿತಿಯು ‘ಸಮಾಜವಾದ’ ಎಂಬ ಪಾಠದಲ್ಲಿ ‘ಅಲ್ಲಿ ಎಲ್ಲರೂ ಎಲ್ಲರಿಗಾಗಿ ದುಡಿಯುವ ಸಂಸ್ಕೃತಿ ಎಲ್ಲರಲ್ಲೂ ಬೆಳೆದು ಪ್ರತಿಯೊಬ್ಬರೂ ಸುಖವಾಗಿರುವ ವ್ಯವಸ್ಥೆ ನಿರ್ಮಾಣವಾಗುತ್ತದೆ. ಈ ವ್ಯವಸ್ಥೆಯ ಪ್ರತಿಪಾದಕರು ಕಾರ್ಲ್‌ಮಾರ್ಕ್ಸ್‌. ಒಟ್ಟಿನಲ್ಲಿ ಸಮತಾವಾದವು ಮಾನವ ಪರವಾದ ಸರ್ಕಾರಿ ವ್ಯವಸ್ಥೆಯಾಗಿದ್ದು, ಪ್ರತಿಯೊಬ್ಬ ಪ್ರಜೆಯೂ ಸಮಾನತೆಯಿಂದ ಶೋಷಣೆಮುಕ್ತ ಜೀವನ ನಡೆಸಬಹುದಾಗಿದೆ’ ಎಂದು ಬರೆದಿದ್ದಾರೆ. 12ನೇ ವಯಸ್ಸಿನ ಮಕ್ಕಳಲ್ಲಿ ‘ ಸಮತಾವಾದವು ಮಾನವ ಪರವಾದ ಸರ್ಕಾರಿ ವ್ಯವಸ್ಥೆ’ ಎಂದು ಬಿತ್ತುವುದು ಬರಗೂರು ಸಮಿತಿಯ ಉದ್ದೇಶ ಎಂಬುದು ಅರ್ಥವಾಗುತ್ತದೆ’ ಎಂದಿದ್ದಾರೆ.

ADVERTISEMENT

‘10ನೇ ತಗರತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದ ‘ಭಾರತ ನಮ್ಮ ಮಾತೃಭೂಮಿ’ ಪಾಠದ ಹೆಸರನ್ನು ಬರಗೂರು ಸಮಿತಿ ‘ಭಾರತದ ಸ್ಥಾನ ಮತ್ತು ವಿಸ್ತೀರ್ಣ’ ಎಂದು ಬದಲಿಸಿದೆ. ‘ರಾಷ್ಟ್ರ’ ಪರಿಕಲ್ಪನೆಯನ್ನು ಕಮ್ಯುನಿಸ್ಟ್‌ ಸಿದ್ಧಾಂತ ಒಪ್ಪುವುದಿಲ್ಲ ನಿಜ. ಕಾಂಗ್ರೆಸ್‌, ಜೆಡಿಎಸ್‌ ನಾಯಕರು ಒಪ್ಪುವು ದಿಲ್ಲವೇ? ರಾಷ್ಟ್ರ, ರಾಷ್ಟ್ರೀಯತೆ, ರಾಷ್ಟ್ರ ಪ್ರೀತಿಗೇಕೆ ಇಷ್ಟೊಂದು ಪ್ರತಿರೋಧ’ ಎಂದೂ ವಸಂತಕುಮಾರ್‌ ಪ್ರಶ್ನಿಸಿದ್ದಾರೆ.

‘ಪಠ್ಯದಲ್ಲಿ ಕಯ್ಯಾರರ ಹೆಸರು ಸೇರಲಿ’

ಮಂಗಳೂರು: ‘ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಪಠ್ಯಪುಸ್ತಕ ಪರಿಷ್ಕರಣ ಸಮಿತಿ 7ನೇ ತರಗತಿಯ ಸಮಾಜ ವಿಜ್ಞಾನ ಪುಸ್ತಕದಲ್ಲಿ ಕಯ್ಯಾರ ಕಿಂಞಣ್ಣ ರೈ ಅವರ ಹೆಸರು ಕೈಬಿಟ್ಟಿರುವುದು ಸರಿಯಲ್ಲ’ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಹೇಳಿದ್ದಾರೆ.

‘ಕಯ್ಯಾರರು ಕರ್ನಾಟಕ ಏಕೀಕರಣಕ್ಕಾಗಿ ಕೊನೆ ಉಸಿರಿನ ತನಕ ಹೋರಾಡಿದ್ದರು ಎಂದುಕರ್ನಾಟಕ ಏಕೀಕರಣ ಹಾಗೂ ಗಡಿ ವಿವಾದಗಳು ಎಂಬ ಪಠ್ಯದಲ್ಲಿ ಇತ್ತು. ಈಗ ಆ ವಾಕ್ಯ ತೆಗೆದು ಮಂಜೇಶ್ವರ ಗೋವಿಂದ ಪೈಯವರ ಹೆಸರು ಸೇರಿಸಲಾಗಿದೆ. ಗೋವಿಂದ ಪೈಯವರಿಗೆ ಏಕೀಕರಣ ವಿಷಯದಲ್ಲಿ ಪರಿಣಾಮಕಾರಿ ಹೋರಾಟ ಮಾಡಲು ಅವಕಾಶ ಸಿಕ್ಕಿರಲಿಲ್ಲ. ಕಯ್ಯಾರರು ನಿಧನರಾಗುವವರೆಗೂ ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು ಎಂದು ಆಗ್ರಹಿಸುತ್ತ ಹೋರಾಡಿದ್ದರು’.

‘ಗೋವಿಂದ ಪೈ ಅವರ ಹೆಸರು ಸೇರಿಸಿರುವುದಕ್ಕೆ ಆಕ್ಷೇಪ ಇಲ್ಲ. ಆದರೆ ಕಯ್ಯಾರರ ಹೆಸರು ತೆಗೆದು ಬಂಟ ಸಮುದಾಯಕ್ಕೆ ಅವಮಾನ ಮಾಡಲಾಗಿದೆ. ಕಯ್ಯಾರರು ಬಂಟರ ಹೆಮ್ಮೆ. ಅವರಿಗೆ ಮಾಡುವ ಅವಮಾನ ಬಂಟ ಸಮುದಾಯಕ್ಕೆ ಮಾಡುವ ಅನ್ಯಾಯವಾಗುತ್ತದೆ’ ಎಂದು ಹರೀಶ್ ಶೆಟ್ಟಿ ಹೇಳಿದ್ದಾರೆ.

ಇದೇ 30ರಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದ್ದು ಅಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗುವುದು ಎಂದರು.

ಲೋಪ ಸರಿಪಡಿಸದಿದ್ದರೆ ಹೋರಾಟ: ಕಾಗಿನೆಲೆ ಸ್ವಾಮೀಜಿ

ಹರಿಹರ: ‘ಪಠ್ಯ–ಪುಸ್ತಕಗಳಲ್ಲಿ ಬಸವಣ್ಣ, ಕನಕದಾಸ, ಕುವೆಂಪು ಅವರಂತಹ ಮಹನೀಯರ ಪರಿಚಯದ ಪಾಠಗಳಲ್ಲಿ ಆಗಿರುವ ಲೋಪ ಸರಿಪಡಿಸದಿದ್ದರೆ ಹೋರಾಟಕ್ಕೆ ಇಳಿಯಬೇಕಾಗುತ್ತದೆ’ ಎಂದು ಕಾಗಿನೆಲೆ ಕನಕ ಗುರುಪೀಠದ ಪೀಠಾಧಿಪತಿ ನಿರಂಜನಾನಂದಪುರಿ ಸ್ವಾಮೀಜಿ ಸರ್ಕಾರಕ್ಕೆ ಶನಿವಾರ ಎಚ್ಚರಿಸಿದರು.

‘ಮಹನೀಯರ ಪರಿಚಯ ಸತ್ಯ ದಿಂದ ಕೂಡಿರಬೇಕು. ಮಕ್ಕಳಿಗೆ ಇಲ್ಲಸಲ್ಲದ್ದು ಕಲಿಸಬಾರದು. ಆಗಿರುವ ಲೋಪವನ್ನು ಶೀಘ್ರ ಸರಿಪಡಿಸಲು ಮುಖ್ಯಮಂತ್ರಿ, ಶಿಕ್ಷಣ ಸಚಿವರಿಗೆ ಆಗ್ರಹಿಸುತ್ತೇನೆ. ತಪ್ಪಿದಲ್ಲಿ ಎಲ್ಲರ ಜೊತೆಗೂಡಿ ಹೋರಾಟಕ್ಕೆ ಇಳಿಯಬೇಕಾಗುತ್ತದೆ. ಸರ್ಕಾರ ಕಷ್ಟ ಎದುರಿಸಬೇಕಾಗುತ್ತದೆ’ ಎಂದರು.

ತಿಂಗಳಲ್ಲಿ ಸಂಶೋಧನಾ ಕೇಂದ್ರದ ವರದಿ: ‘ಹಿಂದುಳಿದ ಕುರುಬ ಸಮಾಜ ವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಬೇಡಿಕೆ ಕುರಿತಂತೆ ಬುಡಕಟ್ಟು ಸಂಶೋಧನಾ ಕೇಂದ್ರದಿಂದ ಸಮೀಕ್ಷಾ ಕಾರ್ಯ ಕೈಗೊಳ್ಳಲಾಗಿದೆ. ವರದಿ ಬಂದ ನಂತರ ಕೇಂದ್ರ ಸರ್ಕಾರಕ್ಕೆ ಅದನ್ನು ರವಾನಿಸಬೇಕಿದೆ. ಈ ದಿಸೆಯಲ್ಲಿ ಪ್ರಯತ್ನ ನಡೆದಿದೆ. ಕುರುಬ ಸಮಾಜಕ್ಕೆ ಪರಿಶಿಷ್ಟ ಪಂಗಡ ಮೀಸಲಾತಿ ನೀಡುವ ಮೂಲಕ ಸಾಮಾಜಿಕ ನ್ಯಾಯ ನೀಡಬೇಕು’ ಎಂದು ಸ್ವಾಮೀಜಿ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.