ADVERTISEMENT

ಮಧ್ಯವಾರ್ಷಿಕ ಪರೀಕ್ಷೆಗೆ ಕ್ರೀಡಾಕೂಟವೇ ತೊಡಕು

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2024, 15:12 IST
Last Updated 19 ಅಕ್ಟೋಬರ್ 2024, 15:12 IST
<div class="paragraphs"><p>ಪರೀಕ್ಷೆ</p></div>

ಪರೀಕ್ಷೆ

   

ಬೆಂಗಳೂರು: ಪ್ರಥಮ ಹಾಗೂ ದ್ವಿತೀಯ ಪಿಯು ಮಧ್ಯ ವಾರ್ಷಿಕ ಪರೀಕ್ಷೆಗಳು ಅ.21ರಿಂದ ಆರಂಭವಾಗುತ್ತಿದ್ದು, ಅಂದಿನಿಂದಲೇ ವಿವಿಧ ಕ್ರೀಡೆಗಳ ರಾಜ್ಯಮಟ್ಟದ ಕ್ರೀಡಾಕೂಟಗಳನ್ನು ನಿಗದಿ ಮಾಡಿರುವುದಕ್ಕೆ ಪೋಷಕರು ಹಾಗೂ ವಿದ್ಯಾರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ರಾಜ್ಯಮಟ್ಟದ ಬಾಕ್ಸಿಂಗ್‌ ಚಾಂಪಿಯನ್‌ಷಿಪ್ ಶಿವಮೊಗ್ಗದಲ್ಲಿ ಹಾಗೂ ಬ್ಯಾಸ್ಕೆಟ್‌ಬಾಲ್‌ ಟೂರ್ನಿ ಕಲಬುರಗಿಯಲ್ಲಿ ಅ.21 ಮತ್ತು 22ರಂದು, ವಿಜಯಪುರದಲ್ಲಿ ವಾಲಿಬಾಲ್‌ , ಕಾರವಾರದಲ್ಲಿ ಚೆಸ್‌ ನ.3ರಿಂದ 6ರವರೆಗೆ ನಡೆಯಲಿವೆ. ಎಲ್ಲ ಕ್ರೀಡೆಗಳ ಕ್ರೀಡಾಕೂಟ ನ.30ಕ್ಕೆ ಮುಕ್ತಾಯವಾಗಲಿದೆ. ಈ ಅವಧಿಯಲ್ಲಿ ಮಧ್ಯವಾರ್ಷಿಕ ಪರೀಕ್ಷೆಗಳು ಇದ್ದು, ಕ್ರೀಡಾ ಕೂಟದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಪದವಿಪೂರ್ವ ಶಿಕ್ಷಣ ನಿರ್ದೇಶನಾಲಯ ಕೂಡಲೇ ವೇಳಾಪಟ್ಟಿ ಬದಲಾಯಿಸಬೇಕು ಎಂದು ಒತ್ತಾಯಿಸಿದ್ದಾರೆ.

ADVERTISEMENT

‘ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಆಂತರಿಕ ಅಂಕಗಳನ್ನು ನಿಗದಿ ಮಾಡಲಾಗಿದೆ. ಮಧ್ಯ ವಾರ್ಷಿಕ ಪರೀಕ್ಷೆಯ ಅಂಕಗಳನ್ನೂ ಪರಿಗಣಿಸಲಾಗುತ್ತದೆ. ಹಾಗಾಗಿ, ಕ್ರೀಡಾಕೂಟಗಳನ್ನು ಮುಂದೂಡಬೇಕು’ ಎಂದು ಪೋಷಕರಾದ ಅನಿಲ್‌ಕುಮಾರ್ ಕೋರಿದ್ದಾರೆ.

‘ಪಿಯು ಮಧ್ಯವಾರ್ಷಿಕ ಪರೀಕ್ಷೆಗಳನ್ನು ದಸರಾ ರಜೆಗೂ ಮೊದಲು ನಡೆಸಲಾಗುತ್ತಿತ್ತು. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಅಸ್ತಿತ್ವಕ್ಕೆ ಬಂದ ನಂತರ ದಸರಾ ರಜೆಯ ನಂತರ ಪರೀಕ್ಷೆ ನಡೆಸುವ ಪರಿಪಾಟ ಆರಂಭವಾಗಿದೆ. ಇದು ಕ್ರೀಡಾಪಟುಗಳ ಮೇಲೂ ಪರಿಣಾಮ ಬೀರುತ್ತಿದೆ’ ಎಂದು ವಿದ್ಯಾರ್ಥಿ ನಟರಾಜ್‌ ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.