ಬೆಂಗಳೂರು: ಬೆಂಕಿಯಂತಹ ಬಿಸಿಲು, ಬಿರು ಬೇಸಿಗೆ ರಾಜ್ಯಭಾರದ ಈ ಹೊತ್ತಿನಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ಇನ್ನಷ್ಟು ತೀವ್ರಗೊಂಡಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗುವ ಭೀತಿಯೂ ಎದುರಾಗಿದೆ.
ಲಭ್ಯ ಮಾಹಿತಿ ಪ್ರಕಾರ, 29 ಜಿಲ್ಲೆಗಳ 149 ತಾಲ್ಲೂಕುಗಳ 1,084 ಗ್ರಾಮ ಪಂಚಾಯಿತಿಗಳ 1,920 ಗ್ರಾಮಗಳಲ್ಲಿ (ಬಿಬಿಎಂಪಿ ವ್ಯಾಪ್ತಿಯ ಹೊರಗೆ) ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದೆ. ಉಡುಪಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತಾಲ್ಲೂಕುಗಳನ್ನು ಹೊರತುಪಡಿಸಿ ಉಳಿದ ಎಲ್ಲ ಜಿಲ್ಲೆಗಳಲ್ಲಿ ಒಂದಲ್ಲ ಒಂದು ತಾಲ್ಲೂಕು ಕುಡಿಯುವ ನೀರಿನ ಕೊರತೆ ಎದುರಿಸುತ್ತಿದೆ.
ಈ ಪೈಕಿ, ಅತೀ ಹೆಚ್ಚು ಬೆಳಗಾವಿ ಜಿಲ್ಲೆಯ 12 ತಾಲ್ಲೂಕುಗಳ 97 ಗ್ರಾಮ ಪಂಚಾಯಿತಿಗಳಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗಿದೆ. ವಿಜಯನಗರದ ಆರು ತಾಲ್ಲೂಕುಗಳ 92 ಗ್ರಾಮ ಪಂಚಾಯಿತಿಗಳು, ಹಾಸನ ಜಿಲ್ಲೆಯ ಏಳು ತಾಲ್ಲೂಕುಗಳ 82 ಗ್ರಾಮ ಪಂಚಾಯಿತಿಗಳಲ್ಲಿ ನೀರಿನ ಕೊರತೆ ಎದುರಾಗಿದೆ.
ಇನ್ನು 22 ನಗರ ಸ್ಥಳೀಯ ಸಂಸ್ಥೆಗಳ 188 ವಾರ್ಡ್‌ಗಳಲ್ಲಿಯೂ ನೀರಿನ ಅಭಾವವಿದೆ. ನೀರಿನ ಕೊರತೆ ಎದುರಾಗಿರುವ ಪ್ರದೇಶಗಳಿಗೆ ಟ್ಯಾಂಕರ್‌ಗಳು ಮತ್ತು ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆಗೆ ಪಡೆದು ನೀರು ಪೂರೈಸಲಾಗುತ್ತಿದೆ ಎಂದು ಕಂದಾಯ ಇಲಾಖೆಯ ಮೂಲಗಳು ತಿಳಿಸಿವೆ.
ಅಲ್ಲದೆ, ಬರ ಪರಿಸ್ಥಿತಿಯ ಕಾರಣಕ್ಕೆ ಚಾಮರಾಜನಗರ, ಚಿತ್ರದುರ್ಗ, ವಿಜಯನಗರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಒಟ್ಟು 28 ಗೋಶಾಲೆಗಳನ್ನು ತೆರೆಯಲಾಗಿದೆ. ಒಂಬತ್ತು ಜಿಲ್ಲೆಗಳಲ್ಲಿ 47 ಕಡೆ ಮೇವು ಬ್ಯಾಂಕು ತೆರೆಯಲಾಗಿದೆ.
‘ಚುನಾವಣೆ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಮತ್ತು ಕಂದಾಯ ಸಚಿವರ ಸೂಚನೆಯಂತೆ ಸಮಸ್ಯಾತ್ಮಕ ಹಳ್ಳಿಗಳನ್ನು ಗುರುತಿಸಿ ನೀರು ಪೂರೈಕೆಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು. ಗುರುತಿಸಿದ ಹಳ್ಳಿಗಳಿಗೆ ಅಗತ್ಯಬಿದ್ದರೆ ತಕ್ಷಣ ನೀರು ಪೂರೈಸಲು ಜನವರಿ, ಫೆಬ್ರವರಿ ತಿಂಗಳಿನಲ್ಲಿಯೇ ಟ್ಯಾಂಕರ್‌ಗಳಿಗೆ ಟೆಂಡರ್ ಆಹ್ವಾನಿಸಲಾಗಿತ್ತು. ಆದರೆ, ಆಗ ಕಾರ್ಯಾದೇಶ ಕೊಟ್ಟಿರಲಿಲ್ಲ. ಈಗ ಕಾರ್ಯಾದೇಶ ನೀಡಿ ನೀರು ಪೂರೈಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ’ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.
ಬರದ ಬೇಗೆಯಲ್ಲಿ ಬೆಂದ ಗ್ರಾಮಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.