ಶಿರಸಿ: ವಿವಿಧ ಕಾಮಗಾರಿಗಳ ಶಂಕುಸ್ಥಾಪನೆಗೆ ತೆರಳಿದ್ದ ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಸಿದ್ದಾಪುರ ತಾಲ್ಲೂಕಿನ ಬೇಡ್ಕಣಿಯಲ್ಲಿ ಬಿಜೆಪಿ ಕಾರ್ಯಕರ್ತರೇ ತಡೆಯೊಡ್ಡಿ ಭೂಮಿ ಪೂಜೆ ನಡೆಸಲು ಬಿಡದೆ ತರಾಟೆಗೆ ತೆಗೆದುಕೊಂಡ ವಿಡಿಯೋ ವೈರಲ್ ಆಗಿದೆ.
ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಮಂಗಳವಾರ ಸಂಜೆ ₹20 ಲಕ್ಷ ವೆಚ್ಚದಲ್ಲಿ ಬೇಡ್ಕಣಿ ಶನೇಶ್ವರ ದೇವಸ್ಥಾನದಿಂದ ಗುಂಜಗೋಡ ರಸ್ತೆವರೆಗೆ ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆ ಅನುದಾನದಲ್ಲಿ ನಿರ್ಮಾಣವಾಗಲಿರುವ 350 ಮೀಟರ್ ಸಿಮೆಂಟ್ ರಸ್ತೆ ಕಾಮಗಾರಿ ಭೂಮಿ ಪೂಜೆಗೆ ಆಗಮಿಸಿದಾಗ ಸ್ಥಳೀಯರು, ಪಕ್ಷದ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದರು.
ಶನೇಶ್ವರ ದೇವಾಲಯದಿಂದ ಗುಂಜಗೋಡ್ ರಸ್ತೆವರೆಗೆ ಒಂದು ಕಿಲೋಮೀಟರ್ ರಸ್ತೆ ಆಗಬೇಕಾಗಿದ್ದು, ಕೇವಲ 300 ಮೀಟರ್ ಸಿಮೆಂಟ್ ರಸ್ತೆ ಮಾಡಿದರೆ ಮುಂದೆ ರಸ್ತೆ ಮಾಡುವುದು ಯಾವಾಗ? 300 ಮೀಟರ್ ರಸ್ತೆ ಮಾಡುವುದಾದರೆ ರಸ್ತೆ ಬೇಡ. ಈಗ ಇರುವ ರಸ್ತೆಗೆ ಮರು ಡಾಂಬರಿಕರಣ ಗೊಳಿಸಬೇಕು, ಇಲ್ಲದಿದ್ದರೆ ಗುದ್ದಲಿ ಪೂಜೆಗೆ ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದರು.
ತಮ್ಮದೇ ಪಕ್ಷದ ಕಾರ್ಯಕರ್ತರಿಂದ ತರಾಟೆಗೊಳಗಾದ ಕಾಗೇರಿ ತಕ್ಷಣ ಸ್ಥಳದಲ್ಲಿ ಹಾಜರಿದ್ದ ಪಂಚಾಯತ್ ರಾಜ್ ಎಂಜಿನಿಯರಿಂಗ್ ಅಧಿಕಾರಿಯಿಂದ ಮಾಹಿತಿ ಪಡೆದು ಸ್ಥಳೀಯರ ಬೇಡಿಕೆ ಅನುಸಾರ ರಸ್ತೆ ನಿರ್ಮಿಸುವುದಾಗಿ ಭರವಸೆ ನೀಡಿದ ಮೇರೆಗೆ ಭೂಮಿ ಪೂಜೆಗೆ ಅವಕಾಶ ಮಾಡಿಕೊಡಲಾಯಿತು.
ಶಾಸಕ ಕಾಗೇರಿ ಈ ಹಿಂದೆ ತಾಲೂಕಿಗೆ ಸಾಕಷ್ಟು ಅನುದಾನ ಬಂದಾಗಲೂ ಈ ರಸ್ತೆಗೆ ಹಣ ನೀಡುವಲ್ಲಿ ಆಸಕ್ತಿ ತೋರದೆ ಇರುವುದು ಇಲ್ಲಿಯ ಸಾರ್ವಜನಿಕರು, ಪಕ್ಷದ ಕಾರ್ಯಕರ್ತರ ಬೇಸರಕ್ಕೆ ಕಾರಣವಾಗಿತ್ತು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.