ADVERTISEMENT

ಎಸ್ಸೆಸ್ಸೆಲ್ಸಿ: ಗೋಡೆಗೆ ಮುಖ ಮಾಡಿ ಪರೀಕ್ಷೆ ಬರೆಯಿರಿ!

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2024, 0:24 IST
Last Updated 9 ಮಾರ್ಚ್ 2024, 0:24 IST
   

ಬೆಂಗಳೂರು: ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಗೋಡೆಗೆ ಮುಖ ಮಾಡಿಕೊಂಡು ಕುಳಿತು ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಬೇಕಿದೆ.

ಮಾರ್ಚ್ 25ರಿಂದ ಆರಂಭವಾಗುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಮಾರ್ಗಸೂಚಿ ಬಿಡುಗಡೆ ಮಾಡಿರುವ ಕರ್ನಾಟಕ ಶಾಲಾ ಶಿಕ್ಷಣ ಮೌಲ್ಯಮಾಪನ ಮಂಡಳಿ  ಇಂತಹ ಸೂಚನೆ ನೀಡಿದ್ದು, ನಕಲು ತಡೆಯಲು ವಿದ್ಯಾರ್ಥಿಗಳು ಗೋಡೆಯ ಕಡೆ ಮುಖ ಮಾಡಿ ಕುಳಿತುಕೊಳ್ಳಲು ಅನುವಾಗುವಂತೆ ಡೆಸ್ಕ್‌ಗಳನ್ನು ಜೋಡಿಸಲು ಎಲ್ಲ ಜಿಲ್ಲೆಗಳ ಉಪ ನಿರ್ದೇಶಕರಿಗೂ ಸೂಚನೆ ನೀಡಿದೆ.

‘ಮಂಡಳಿಯ ಇಂತಹ ಕ್ರಮಗಳು ನಕಲು ತಡೆಯುವ ಜತೆಗೆ, ವಿಚಕ್ಷಣ ದಳ ಕೊಠಡಿ ಪ್ರವೇಶಿಸಿದಾಗ ವಿದ್ಯಾರ್ಥಿಗಳು ಅತ್ತ ಗಮನಹರಿಸುವುದನ್ನು ತಡೆಯಬಹುದಾಗಿದೆ. ವಿಚಕ್ಷಣ ದಳ ಪರೀಕ್ಷಾ ಕೊಠಡಿ ಪ್ರವೇಶಿಸಿದಾಗ ಬಹಳಷ್ಟು ವಿದ್ಯಾರ್ಥಿಗಳು ವಿಚಲಿತರಾಗುವುದು ಗಮನಕ್ಕೆ ಬಂದಿದೆ. ವಿದ್ಯಾರ್ಥಿಗಳು ಗೋಡೆಗೆ ಮುಖ ಮಾಡಿ ಕುಳಿತರೆ ಬೇರೆಯವರು ಬಂದು ಹೋಗುವುದು ಗಮನಕ್ಕೆ ಬರುವುದಿಲ್ಲ. ಹಾಗಾಗಿ, ಇಂತಹ ಸೂಚನೆ ನೀಡಲಾಗಿದೆ’ ಎಂದು ಮಂಡಳಿ ನಿರ್ದೇಶಕ ಎಚ್‌.ಎನ್‌. ಗೋಪಾಲಕೃಷ್ಣ ಸಮರ್ಥನೆ ನೀಡಿದರು.

ADVERTISEMENT

ಯಾವ ಪರೀಕ್ಷಾ ಕೇಂದ್ರದಲ್ಲೂ ವಿದ್ಯಾರ್ಥಿಗಳು ನೆಲದ ಮೇಲೆ ಕುಳಿತು ಪರೀಕ್ಷೆ ಬರೆಯದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ಸೂಕ್ಷ್ಮ, ಅತಿಸೂಕ್ಷ್ಮ ಕೇಂದ್ರಗಳಲ್ಲಿ ಕಟ್ಟೆಚ್ಚರ ವಹಿಸಬೇಕು. ಪರೀಕ್ಷಾ ವೇಳೆಯಲ್ಲಿ ಮುದ್ರಣ ಮತ್ತು ಎಲೆಕ್ಟ್ರಾನಿಕ್‌ ಮಾಧ್ಯಮ ಪ್ರತಿನಿಧಿಗಳಿಗೆ ಪ್ರವೇಶ ಇಲ್ಲ. ಯಾವುದೇ ವಿದ್ಯಾರ್ಥಿ ಪರೀಕ್ಷೆಯ ಪ್ರಾರಂಭದ 30 ನಿಮಿಷಗಳ ನಂತರ (ಬೆಳಿಗ್ಗೆ 10.45ರ ನಂತರ) ಬಂದರೆ ಪರೀಕ್ಷೆ ಬರೆಯಲು ಅವಕಾಶ ಇಲ್ಲ ಎಂದು ಮಂಡಳಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.