ಬೆಂಗಳೂರು: ಹತ್ತನೇ ತರಗತಿ ಕನ್ನಡ ಪಠ್ಯಪುಸ್ತಕದಲ್ಲಿ ಆರ್‌ಎಸ್‌ಎಸ್ ಸಂಸ್ಥಾಪಕ ಕೇಶವ ಬಲಿರಾಮ ಹೆಡಗೇ ವಾರ ಅವರ ಭಾಷಣ ಸೇರಿಸಿದ ಬಗ್ಗೆ ಭಾರಿ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಅದೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಿಂದ ಬ್ರಹ್ಮಶ್ರೀ ನಾರಾಯಣಗುರು ಮತ್ತು ವಿಚಾರವಾದಿ ಪೆರಿಯಾರ್ ರಾಮಸ್ವಾಮಿ ನಾಯ್ಕರ್ ಕುರಿತ ಪಠ್ಯ ಭಾಗ ತೆಗೆಯಲು ಶಿಫಾರಸು ಮಾಡಿರುವುದು ಆಕ್ಷೇಪಕ್ಕೆ ಕಾರಣ ವಾಗಿದೆ.
ಹಿಂದಿನ ವರ್ಷದ ಪಠ್ಯಪುಸ್ತಕ ದಲ್ಲಿ ‘ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳವಳಿಗಳು’ ಅಧ್ಯಾಯ ದಲ್ಲಿ ನಾರಾಯಣ ಗುರು ಮತ್ತು ಪೆರಿಯಾರ್ ಅವರ ಜೀವನ ಮತ್ತು ದರ್ಶನ ಪರಿಚಯಿಸುವ ಭಾಗವಿತ್ತು. ಈ ಬಾರಿ ಅದಕ್ಕೆ ಕತ್ತರಿ ಹಾಕಲು ಮುಂದಾಗಿದೆ.
ಕಳೆದ ವರ್ಷದ ಪಠ್ಯಪುಸ್ತಕದಲ್ಲಿ ರಾಜಾರಾಮ್ ಮೋಹನ್‌ರಾಯ್, ದಯಾನಂದ ಸರಸ್ವತಿ, ಮಹದೇವ ಗೋವಿಂದ ರಾನಡೆ, ಜ್ಯೋತಿಬಾ ಫುಲೆ, ಸ್ವಾಮಿ ವಿವೇಕಾನಂದ, ಆನಿಬೆಸೆಂಟ್, ಸರ್ ಸಯ್ಯದ್ ಅಹಮದ್, ಪೆರಿಯಾರ್ ಮತ್ತು ನಾರಾಯಣಗುರು ಕುರಿತ ಮಾಹಿತಿ ಇತ್ತು. ಪರಿಷ್ಕೃತ ಪಠ್ಯಪುಸ್ತಕದಲ್ಲಿರಾಜಾರಾಮ್ ಮೋಹನ್‌ರಾಯ್, ದಯಾನಂದ ಸರಸ್ವತಿ, ಮಹದೇವ ಗೋವಿಂದ ರಾನಡೆ, ಜ್ಯೋತಿಬಾಫುಲೆ, ಸ್ವಾಮಿ ವಿವೇಕಾನಂದ, ಆನಿಬೆಸೆಂಟ್, ಸರ್ ಸಯ್ಯದ್ ಅಹಮದ್ ಅವರ ಪರಿಚಯ ಇದೆ. ‘ಶ್ರೀ ನಾರಾಯಣಗುರು ಧರ್ಮಪರಿಪಾಲನಾ ಯೋಗಂ’ ಮತ್ತು ‘ಪೆರಿಯಾರ್’ ಎಂಬ ಪಠ್ಯವನ್ನು ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಪಠ್ಯ ಪರಿಷ್ಕರಣೆ ಸಮಿತಿಯ ಶಿಫಾರಸಿನಂತೆ ಕೈಬಿ ಲಾಗುತ್ತಿದೆ ಎಂದು ಗೊತ್ತಾಗಿದೆ.
ಪೆರಿಯಾರ್ ಪಠ್ಯದಲ್ಲೇನಿತ್ತು?: ‘20ನೇ ಶತಮಾನದ ಆರಂಭದಲ್ಲಿ ಬ್ರಾಹ್ಮಣೇತರ ಚಳವಳಿಯೆಂಬ ಹೊಸ ಬಗೆಯ ಚಳವಳಿ ದಕ್ಷಿಣ ಭಾರತದಲ್ಲಿ ಆರಂಭವಾಯಿತು. ಬಹುಸಂಖ್ಯಾತರಾಗಿದ್ದ ಬ್ರಾಹ್ಮಣೇತರರು ಸರ್ಕಾರಿ ರಂಗದಲ್ಲಿ ಅವಕಾಶಗಳಲ್ಲಿ ತಮ್ಮ ಜನಸಂಖ್ಯೆಗೆ ಅನುಗುಣವಾಗಿ ತಮಗೆ ಪ್ರಾತಿನಿಧ್ಯ ಸಿಗಬೇಕೆಂದು ಹೋರಾಟ ಆರಂಭಿಸಿದರು. ಕರ್ನಾಟಕವೂ ಸೇರಿ ವಿವಿಧ ರಾಜ್ಯಗಳಲ್ಲಿ ಇದೊಂದು ಪ್ರಮುಖ ಚಳವಳಿಯಾಗಿ ಬ್ರಾಹ್ಮಣೇತರ ಸಮುದಾಯಗಳು ತಮ್ಮ ಮೇಲೆ ಹೇರಲಾಗಿದ್ದ ಸಾಮಾಜಿಕ ನಿರ್ಬಂಧಗಳನ್ನು ವಿರೋಧಿಸತೊಡಗಿದರು. 1916ರಲ್ಲಿ ಜಸ್ಟೀಸ್ ಪಾರ್ಟಿ ಈ ಚಳವಳಿಯನ್ನು ಮುನ್ನಡೆಸಿತು’’.
ಆರ್ಯ, ಬ್ರಾಹ್ಮಣ ಎನ್ನುವ ಜನಾಂಗೀಯ ಶ್ರೇಷ್ಠತೆಯನ್ನು ಸಾರುವ ಆಲೋಚನೆಗಳನ್ನು ಇಡಿಯಾಗಿ ತಿರಸ್ಕರಿ ಸಿದರು. ತಮಿಳುಭಾಷೆಯನ್ನು ದ್ರಾವಿಡ ಭಾಷೆ ಎಂದರು. ಸಂಸ್ಕೃತ ಭಾಷೆ ಮತ್ತು ಸಾಹಿತ್ಯವನ್ನು ವಿರೋಧಿಸಿದರು. ರಾಮಾಯಣ ಮಹಾಕಾವ್ಯದಲ್ಲಿ ಬರುವ ರಾವಣನನ್ನು ದ್ರಾವಿಡರ ನಾಯಕ ನೆಂದು ಬಿಂಬಿಸಿ ರಾಮನನ್ನು ವೈದಿಕ ವರ್ಗದ ದೇವರೆಂದು ತಿರಸ್ಕರಿಸಿ ದರು. ಬನಾರಸ್‌ನಲ್ಲಿ ಆದ ಕಹಿ ಅನು ಭವಗಳಿಂದ ಮತ್ತಷ್ಟು ವ್ಯಗ್ರರಾದ ಪೆರಿಯಾರ್ ಅವರು ರಾವಣ ಪರಂಪರೆ ಯನ್ನು ವೈಭವೀಕರಿಸಿದರು. 1924ರಲ್ಲಿ ಕೇರಳದ ವೈಕಂನಲ್ಲಿ ಅಸ್ಪೃಶ್ಯರಿಗೆ ದೇವಾ ಲಯ ಪ್ರವೇಶದ ಹಕ್ಕಿನ ಹೋರಾಟದಲ್ಲಿ ಭಾಗವಹಿಸಿದ್ದರು.
ನಾರಾಯಣಗುರು ಪಠ್ಯದಲ್ಲೇನಿತ್ತು?: ಕೇರಳದ ಸಮಾಜದಲ್ಲೂ ಜಾತಿಗಳ ಮಧ್ಯೆ ಅಂತರಗಳ ಸಮಸ್ಯೆಗಳು ವ್ಯಾಪಕವಾಗಿದ್ದವು, ಅನೇಕ ಹಿಂದುಳಿದ ಮತ್ತು ದಲಿತ ಸಮುದಾಯಗಳಿಗೆ ಸಾಮಾಜಿಕ ನಿರ್ಬಂಧಗಳನ್ನು ಹೇರಲಾಗಿತ್ತು. ಆ ಕಾಲಘಟ್ಟದಲ್ಲಿ ಆ ಸಮುದಾಯಗಳು ಎಲ್ಲರೂ ಬಳಸಲು ಇದ್ದ ಕೆರೆ ಬಾವಿಗಳಲ್ಲಿ ನೀರನ್ನು ತೆಗೆದುಕೊಳ್ಳಲಾಗುತ್ತಿರಲಿಲ್ಲ. ಮಹಿಳೆಯರ ಉಡುಪುಗಳ ಮೇಲೂ ನಿರ್ಬಂಧಗಳನ್ನು ಹೇರಲಾಗಿತ್ತು. ಇಷ್ಟೇ ಅಲ್ಲದೆ ಶಾಲೆಗಳಿಗೂ ಇವರಿಗೆ ಪ್ರವೇಶವಿರಲಿಲ್ಲ. ಕನಿಷ್ಠ ಪ್ರಮಾಣದ ಮಾನವ ಹಕ್ಕುಗಳನ್ನು ಪಡೆಯದ ಈ ಸಮುದಾಯಗಳು ಉಸಿರುಗಟ್ಟಿ ಬದುಕಬೇಕಾದ ಪರಿಸ್ಥಿತಿ ಇತ್ತು. ಈ ವಿಷಯಗಳನ್ನು ಕೈಗೆತ್ತಿಕೊಂಡು ಪ್ರತಿರೋಧದ ಚಳವಳಿಗಳನ್ನು ಪ್ರಾರಂಭಿಸಿದರು.
ಮನುಷ್ಯ ಘನತೆಯಿಂದ ಬದುಕುವ ಸಮಾಜದ ನಿರ್ಮಾಣವೇ ಈ ಸಂಘಟನೆಯ ಉದ್ದೇಶವಾಗಿತ್ತು. ನಾರಾಯಣಗುರು ಅವರ ಪ್ರಮುಖ ಆಶಯ ಮಾನವ ಕುಲಕ್ಕೆ ಒಂದೇ ಜಾತಿ, ಒಂದೇ ಧರ್ಮ ಮತ್ತು ಒಬ್ಬನೇ ದೇವರು ಎಂಬುದು. ಇದನ್ನು ಸಾಧಿಸಲು ಶಿಕ್ಷಣವೇ ಮಾರ್ಗವೆಂದು ಸಾರಿದರು.
ಕರಾವಳಿಯಲ್ಲಿ ಬಿಲ್ಲವ ಸಮುದಾಯದ ಆಕ್ಷೇಪ
ಮಂಗಳೂರು: ಎಸ್ಸೆಸ್ಸೆಲ್ಸಿ ಸಮಾಜ ವಿಜ್ಞಾನ ಪಠ್ಯಪುಸ್ತಕದಿಂದ ಬ್ರಹ್ಮಶ್ರೀ ನಾರಾಯಣಗುರುಗಳ ಕುರಿತಾದ ಪಠ್ಯವನ್ನು ಕೈಬಿಟ್ಟಿರುವುದಕ್ಕೆ ಕರಾವಳಿಯ ಬಿಲ್ಲವ ಸಮುದಾಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
‘ಶ್ರೀ ನಾರಾಯಣಗುರು ಧರ್ಮ ಪರಿಪಾಲನಾ ಯೋಗಂ’ ಎಂಬ ಪಠ್ಯವನ್ನುಕೈಬಿಟ್ಟಿರುವುದು ಸರಿಯಲ್ಲ. ಇದು ನಾರಾಯಣಗುರುಗಳ ಅನುಯಾಯಿಗಳ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ಬಿಲ್ಲವ ಮುಖಂಡರು ಹೇಳಿದ್ದಾರೆ.
‘ದೇಶದಲ್ಲಿ ದ್ವೇಷ, ಅಸಹನೆ, ಸಾಮಾಜಿಕ ಅಸಮಾನತೆ ಮೊದಲಾದ ಸಮಸ್ಯೆ ಎದುರಾಗಿದ್ದು, ಈ ಸಂದರ್ಭದಲ್ಲಿ ಜಾತಿ ಭೇದ, ಮತ ದ್ವೇಷ ಇಲ್ಲದೆ ಸಮಾನತೆಯ ಮಾನವಧರ್ಮವನ್ನು ಜಗತ್ತಿಗೆ ಬೋಧಿಸಿ, ಕೇರಳದಲ್ಲಿ ಅದನ್ನು ಕಾರ್ಯಗತಗೊಳಿಸಿದ ಮಹಾನ್ ದಾರ್ಶನಿಕ ನಾರಾಯಣಗುರುಗಳ ತತ್ವಗಳ ಅನುಷ್ಠಾನ ಇಂದಿನ ತುರ್ತು ಅಗತ್ಯ. ಸರ್ಕಾರ ಈ ಕುರಿತು ಚಿಂತನೆ ನಡೆಸಬೇಕು’ ಎಂದು ಬಿಲ್ಲವ ಸಮುದಾಯದ ರಾಜೇಂದ್ರ ಚಿಲಿಂಬಿ ಹೇಳಿದ್ದಾರೆ.
‘ನಾರಾಯಣಗುರುಗಳು ಮತ್ತು ಪೆರಿಯಾರ್ ಅವರ ಕುರಿತಾದ ಪಠ್ಯಭಾಗವನ್ನು ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ಕೈಬಿಟ್ಟಿರುವುದು ಖಂಡನೀಯ. ಸಮಾಜ ಸುಧಾರಕ ಸಂತರು ಎನಿಸಿಕೊಂಡ ಇವರಿಬ್ಬರ ಸಂದೇಶಗಳನ್ನು ನಿರ್ಲಕ್ಷಿಸಿರುವುದು ಜಾತಿ, ಧರ್ಮಗಳ ಕಲಹದ ಬೇಗೆಯಲ್ಲಿ ರಾಜಕೀಯದ ಬೇಳೆ ಬೇಯಿಸಿಕೊಳ್ಳುವ ಪಕ್ಷಗಳ ದುರುದ್ದೇಶಪೂರಿತ ನಡೆ’ ಎಂದು ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಆರ್. ಪದ್ಮರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಪಠ್ಯಪುಸ್ತಕ ಬಂದ ಮೇಲೆ ನೋಡಿ’
‘ಪೆರಿಯಾರ್ ಅಥವಾ ನಾರಾಯಣ ಗುರು ಅವರ ಪಠ್ಯಭಾಗವನ್ನು ಕೈಬಿಟ್ಟಿಲ್ಲ. ಈ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಪಠ್ಯಪುಸ್ತಕ ಮುದ್ರಣ ಆಗಿ ಬಂದ ಮೇಲೆ ನೋಡಿ ಹೇಳಿ. ಆಗ ಇಲ್ಲದಿದ್ದಾಗ ಕೇಳಿ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.
‘ಈ ರೀತಿ ಅಪಪ್ರಚಾರ ಮಾಡುತ್ತಿರುವುದು ಸರಿಯಲ್ಲ. ಇದು ಶಿಕ್ಷಣದಲ್ಲಿ ರಾಜಕೀಯಕರಣ ಮಾಡುವುದರ ಭಾಗವಾಗಿದೆ. ಪಠ್ಯಪುಸ್ತಕದ್ದು ಎನ್ನಲಾದ ಈಗ ಹರಿದಾಡುತ್ತಿರುವ ಪಿಡಿಎಫ್ ಅಧಿಕೃತವಲ್ಲ. ಈ ರೀತಿ ಹತ್ತು ಜನ ಹತ್ತು ರೀತಿಯಲ್ಲಿ ಹರಿಬಿಡಬಹುದು. ಅದನ್ನು ಹೇಗೆ ನಂಬುತ್ತೀರಿ. ಮುದ್ರಿತ ಪಠ್ಯ ಪುಸ್ತಕ ಮಾತ್ರ ಅಧಿಕೃತ’ ಎಂದು ಪ್ರತಿಕ್ರಿಯಿಸಿದರು.
ಭಗತ್ ಸಿಂಗ್ ಪಾಠ ಮರು ಸೇರ್ಪಡೆ?
ಅಪ್ರತಿಮ ಕ್ರಾಂತಿಕಾರಿ ಭಗತ್‌ಸಿಂಗ್ ಅವರನ್ನು ಪರಿಚಯಿಸುವ ಪಾಠವನ್ನು 10ನೇ ತರಗತಿಯ ಕನ್ನಡ ಪಠ್ಯಪುಸ್ತಕದಲ್ಲಿ ಮರು ಸೇರ್ಪಡೆ ಮಾಡಲು ಸರ್ಕಾರ ಮುಂದಾಗಿದೆ.
ಲೇಖಕ ಜಿ.ರಾಮಕೃಷ್ಣ ಅವರು ಬರೆದ ‘ಭಗತ್ ಸಿಂಗ್’ ಕುರಿತ ಲೇಖನ ಪಠ್ಯದಲ್ಲಿತ್ತು. ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಸಮಿತಿ ಮರು ಪರಿಷ್ಕರಿಸಿದಾಗ ಅದನ್ನು ಕೈಬಿಟ್ಟಿರುವ ಬಗ್ಗೆ ‘ಪ್ರಜಾವಾಣಿ’ ವರದಿ ಮಾಡಿತ್ತು. ಇದು ಚರ್ಚೆಗೆ ಕಾರಣವಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹಾಗೂ ಕರ್ನಾಟಕ ಪಠ್ಯಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕರು ‘ಭಗತ್ ಸಿಂಗ್ ಪಾಠ ಕೈಬಿಟ್ಟಿಲ್ಲ’ ಎಂದಿದ್ದರು. ‘ಪುಸ್ತಕ ಮುದ್ರಣವೇ ಆಗಿಲ್ಲ; ಪಾಠ ಇಲ್ಲವೆಂದರೆ ಹೇಗೆ?’ ಎಂದು ಸಚಿವ ನಾಗೇಶ್ ಹೇಳಿದ್ದರು. ಆದರೆ, ಪರಿಷ್ಕರಣಾ ಸಮಿತಿ ಸಿದ್ಧಪಡಿಸಿದ್ದ ಪುಸ್ತಕದಲ್ಲಿ ಈ ಪಾಠ ಇರಲಿಲ್ಲ.
‘ಈಗಾಗಲೇ ಮುದ್ರಿಸಿರುವ ಪುಸ್ತಕವನ್ನು ವಿದ್ಯಾರ್ಥಿಗಳಿಗೆ ವಿತರಿಸದಂತೆ ಸೂಚನೆ ನೀಡಲಾಗಿದೆ. ಮುದ್ರಣಕ್ಕೆ ಬಾಕಿ ಇರುವುದನ್ನು ಸದ್ಯಕ್ಕೆ ನಿಲ್ಲಿಸುವಂತೆ ಮುದ್ರಕರಿಗೆ ಸೂಚಿಸಲಾಗಿದೆ. ಭಗತ್ ಸಿಂಗ್ ಪಾಠವನ್ನು ಸೇರಿಸಿ ಮರುಮುದ್ರಿಸಲು ಇಲಾಖೆ ನಿರ್ದೇಶನ ನೀಡಿದೆ’ ಎಂದು ಮೂಲಗಳು ಖಚಿತಪಡಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.