ಬೆಂಗಳೂರು: ‘ವೀರಶೈವ ಲಿಂಗಾಯತ ಉಪಜಾತಿಯಾದ ಬಲಿಷ್ಠ ‘ಪಂಚಮಸಾಲಿ’ ಸಮುದಾಯವನ್ನು ‘ಪ್ರವರ್ಗ–2ಎ’ಗೆ ಸೇರ್ಪಡೆ ಮಾಡಬಾರದು’ ಎಂದು ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಒತ್ತಾಯಿಸಿದೆ.
ಈ ಸಂಬಂಧ ವೇದಿಕೆ ಅಧ್ಯಕ್ಷ ಎಂ.ಸಿ.ವೇಣುಗೋಪಾಲ್ ನೇತೃತ್ವದ ನಿಯೋಗವು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರನ್ನು ಮಂಗಳವಾರ ಭೇಟಿ ಮಾಡಿ ಮನವಿ ಸಲ್ಲಿಸಿತು.
‘ಪಂಚಮಸಾಲಿ ಸಮುದಾಯವನ್ನು ‘ಪ್ರವರ್ಗ–3ಬಿ’ಯಲ್ಲಿಯೇ ಮುಂದುವರಿಸುವಂತೆ ಎಚ್.ಕಾಂತರಾಜ ಆಯೋಗವು 2018ರಲ್ಲಿ ಸರ್ಕಾರಕ್ಕೆ ಸಲಹೆ ನೀಡಿದೆ. ಹೀಗಿರುವಾಗ ಆ ಸಲಹೆಯನ್ನು ಅದೇ ಆಯೋಗದ ಪುನರ್‌ಪರಿಶೀಲನೆಗೆ ಒಳಪಡಿಸುವ ಅಗತ್ಯವಿಲ್ಲ. ಏಕರೂಪ ಜಾತಿಗಳನ್ನು ವಿಭಜಿಸುವ ಕ್ರಮ ಸಂವಿಧಾನದ ವಿಧಿ 14ರ ಉಲ್ಲಂಘನೆ ಎಂದು ಸುಪ್ರೀಂಕೋರ್ಟ್‌ನ ಸಂವಿಧಾನ ಪೀಠವು 2004ರ (ಇ.ವಿ.ಚಿನ್ನಯ್ಯ–ಆಂಧ್ರಪ್ರದೇಶ ಪ್ರಕರಣ) ತೀರ್ಪಿನಲ್ಲಿ ಉಲ್ಲೇಖಿಸಿದೆ’ ಎಂದು ಜಾಗೃತ ವೇದಿಕೆ ಮನವರಿಕೆ ಮಾಡಿಕೊಟ್ಟಿತು.
‘ಕೇಂದ್ರ ಸರ್ಕಾರದ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಗೆ ಕರ್ನಾಟಕದ 70 ಜಾತಿ ಹಾಗೂ ಉಪಜಾತಿಗಳನ್ನು ಸೇರ್ಪಡೆ ಮಾಡಬೇಕು. ಸ್ಥಳೀಯ ಸಂಸ್ಥೆಯ ಚುನಾವಣೆಗಳಲ್ಲಿ ಅತಿ ಹಿಂದುಳಿದ ವರ್ಗಗಳಿಗೂ ಮೀಸಲಾತಿ ಕಲ್ಪಿಸಬೇಕು. ಎಚ್.ಕಾಂತರಾಜ ವರದಿಯನ್ನು ಯಥಾಪ್ರಕಾರ ಜಾರಿಗೊಳಿಸಬೇಕು. ಪಂಚಮಸಾಲಿ ಸಮುದಾಯವನ್ನು ಮುಖ್ಯ ಜಾತಿಯಿಂದ ಬೇರ್ಪಡಿಸಿ ಮತ್ತೊಂದು ಪ್ರವರ್ಗಕ್ಕೆ ಸೇರಿಸುವುದು ಇಂದ್ರಾ ಸಹಾನಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿಗೆ ವಿರುದ್ಧವಾದ ನಡೆ. ಹಾಗೇನಾದರೂ ಸೇರ್ಪಡೆ ಮಾಡಿದರೆ ರಾಜ್ಯದಾದ್ಯಂತ ಹೋರಾಟ ನಡೆಸಲಾಗುತ್ತದೆ’ ಎಂದು ವೇದಿಕೆ ಅಧ್ಯಕ್ಷ ಎಂ.ಸಿ.ವೇಣುಗೋಪಾಲ್ ಎಚ್ಚರಿಸಿದರು.
‘1992ರ ಮಂಡಲ್ ಆಯೋಗದ ವರದಿಯಂತೆ ರಾಜ್ಯದ 323 ಜಾತಿ–ಉಪಜಾತಿಗಳನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಲಾಗಿತ್ತು. ಈ ಪೈಕಿ 283 ಜಾತಿ–ಉಪಜಾತಿಗಳನ್ನು ಮೀಸಲಾತಿ ಪಟ್ಟಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸು ಮಾಡಲಾಗಿತ್ತು. ಸುಮಾರು 70 ಜಾತಿ–ಉಪಜಾತಿಗಳು ರಾಜ್ಯದ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿದ್ದರೂ ಕೇಂದ್ರದ ಪಟ್ಟಿಗೆ ಸೇರಿಸಲಾಗಿಲ್ಲ. ಕೇಂದ್ರ ಸರ್ಕಾರ ಈಗಲಾದರೂ ಎಚ್ಚೆತ್ತುಕೊಳ್ಳಬೇಕು’ ಎಂದು ಆಗ್ರಹಿಸಿದರು.
‘ಪಂಚಮಸಾಲಿ ಸಮುದಾಯವನ್ನು ‘ಪ್ರವರ್ಗ–2ಎ’ಗೆ ಸೇರಿಸುವ ವರದಿಯನ್ನು ತಿರಸ್ಕರಿಸಲಾಗಿದೆ. ಹೀಗಿದ್ದರೂ ಸೇರ್ಪಡೆ ಮಾಡಬೇಕೊ ಬೇಡವೊ ಎಂಬುದರ ಕುರಿತು ಪರ–ವಿರೋಧ ಚರ್ಚೆಗಳು ನಡೆಯುತ್ತಿವೆ. ಆಯೋಗವು ಸಮಗ್ರ ಅಧ್ಯಯನ ನಡೆಸಿ ಸರ್ಕಾರಕ್ಕೆ ನಿಷ್ಪಕ್ಷಪಾತ ವರದಿ ಸಲ್ಲಿಸಲಿದೆ’ ಎಂದು ಜಯಪ್ರಕಾಶ್ ಹೆಗ್ಡೆ ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.