ADVERTISEMENT

ಹಣ ದುರುಪಯೋಗ ಆರೋಪದಡಿ ದೂರು ದಾಖಲು: ವಕೀಲರ ಪರಿಷತ್‌ ಅಧ್ಯಕ್ಷರ ವಿರುದ್ಧ FIR

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2024, 17:45 IST
Last Updated 17 ಏಪ್ರಿಲ್ 2024, 17:45 IST
   

ಬೆಂಗಳೂರು: ‘ಮೈಸೂರಿನಲ್ಲಿ ಕಳೆದ ವರ್ಷ ಜರುಗಿದ ರಾಜ್ಯ ವಕೀಲರ ಸಮ್ಮೇಳನದ ಹಣಕಾಸು ಬಳಕೆಯಲ್ಲಿ ಅಪರ–ತಪರಾ ನಡೆದಿದ್ದು, ₹ 50 ಲಕ್ಷಕ್ಕೂ ಹೆಚ್ಚಿನ ಮೊತ್ತದ ದುರುಪಯೋಗ ನಡೆದಿದೆ‘ ಎಂದು ಆರೋಪಿಸಿ ರಾಜ್ಯ ವಕೀಲರ ಪರಿಷತ್‌ ಸದಸ್ಯರೂಬ್ಬರು ಪರಿಷತ್‌ನ ಅಧ್ಯಕ್ಷರೂ ಸೇರಿದಂತೆ ಒಟ್ಟು ನಾಲ್ವರ ವಿರುದ್ಧ ನೀಡಿರುವ ದೂರಿನ ಅನ್ವಯ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. 

ರಾಜ್ಯ ವಕೀಲರ ಪರಿಷತ್‌ ಸದಸ್ಯರೂ ಮತ್ತು ಹೈಕೋರ್ಟ್‌ನ ಹಿರಿಯ ವಕೀಲರೂ ಆದ ಎಸ್‌.ಬಸವರಾಜ್‌ ಬುಧವಾರ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ದಾಖಲಿಸಿರುವ ದೂರಿನಲ್ಲಿ; ಪರಿಷತ್ ಅಧ್ಯಕ್ಷ ಎಚ್‌.ಎಲ್‌.ವಿಶಾಲ ರಘು, ಉಪಾಧ್ಯಕ್ಷ ವಿನಯ ಮಂಗಳೇಕರ್‌, ಪರಿಷತ್‌ ವ್ಯವಸ್ಥಾಪಕ ಪುಟ್ಟೇಗೌಡ ಹಾಗೂ ಇತರರನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿದೆ.

ದೂರಿನಲ್ಲಿ ಏನಿದೆ?: ‘ರಾಜ್ಯ ವಕೀಲರ ಪರಿಷತ್‌, ಮೈಸೂರಿನಲ್ಲಿ 2023ರ ಆಗಸ್ಟ್‌ 12 ಮತ್ತು 13ರಂದು ಎರಡು ದಿನಗಳ ಕಾಲದ ರಾಜ್ಯ ವಕೀಲರ ಸಮ್ಮೇಳನ ಆಯೋಜಿಸಿತ್ತು. ಈ ಸಮಯದಲ್ಲಿ ಸಮ್ಮೇಳನ ಪ್ರತಿನಿಧಿ ವಕೀಲರಿಂದ ತಲಾ ₹ 1 ಸಾವಿರದಂತೆ ಒಟ್ಟು ₹ 1,16,33,000 ಮೊತ್ತವನ್ನು ದೇಣಿಗೆಯಾಗಿ ಸಂಗ್ರಹಿಸಲಾಗಿತ್ತು. ರಾಜ್ಯ ಸರ್ಕಾರ ₹ 1.8 ಲಕ್ಷ ಅನುದಾನ ನೀಡಿತ್ತು ಮತ್ತು ರಾಜ್ಯ ವಕೀಲರ ಪರಿಷತ್‌ನಿಂದ ₹ 75 ಲಕ್ಷ ಬಿಡುಗಡೆಯಾಗಿತ್ತು. ಒಟ್ಟು ಮೊತ್ತ ₹ 3,30,33,000 ಸಂಗ್ರಹವಾಗಿತ್ತು. ಈ ಹಣ ಪರಿಷತ್‌ನ ಬ್ಯಾಂಕ್‌ ಖಾತೆಗೆ ಜಮೆ ಆಗಿದ್ದು, ಈ ಹಣದ ಬಳಕೆಯಲ್ಲಿ ದುರುಪಯೋಗ ನಡೆದಿದೆ’ ಎಂದು ದೂರಿನಲ್ಲಿ ವಿವರಿಸಲಾಗಿದೆ.

ADVERTISEMENT

’ಅಧ್ಯಕ್ಷರು ಮತ್ತು ಇತರರು ಸೇರಿಕೊಂಡು ಪರಿಷತ್‌ನ ₹ 50 ಲಕ್ಷ ಮೊತ್ತವನ್ನು ಬ್ಯಾಂಕ್‌ನಿಂದ ನಗದೀಕರಿಸಿಕೊಂಡಿದ್ದಾರೆ. ಸುಳ್ಳು ಲೆಕ್ಕಪತ್ರ ಸೃಷ್ಟಿಸಿ, ವಕೀಲರ ಸಮುದಾಯಕ್ಕೆ ಸೇರಿದ ಕೋಟ್ಯಂತರ ರೂಪಾಯಿಗಳನ್ನು, ನಕಲಿ ಬಿಲ್‌ ತಯಾರಿಸಿ ಸ್ವಂತಕ್ಕೆ ಬಳಸಿಕೊಂಡಿದ್ದಾರೆ. ಸರ್ಕಾರಕ್ಕೆ ಸಲ್ಲಬೇಕಾದ ಜಿಎಸ್‌ಟಿ ಹಣವನ್ನು ಸಲ್ಲಿಸದೇ ಮೋಸ ಮಾಡುವ ಉದ್ದೇಶದಿಂದ ಪರಿಷತ್ತಿನ ಸಮುದಾಯಕ್ಕೆ ನಂಬಿಕೆ ದ್ರೋಹ ಎಸಗಿದ್ದಾರೆ’ ಎಂದು ಬಸವರಾಜ್‌ ಆರೋಪಿಸಿದ್ದಾರೆ.

ಕಲಂಗಳು: ದೂರನ್ನು ಭಾರತೀಯ ದಂಡ ಸಂಹಿತೆ–1860ರ, 420 (ವಂಚನೆ), 406 (ನಂಬಿಕೆ ದ್ರೋಹ), 409 (ಸಾರ್ವಜನಿಕ ಸೇವಕರಿಂದ ನಂಬಿಕೆ ದ್ರೋಹ), 468 (ಫೋರ್ಜರಿ), 471 (ನಕಲಿ ದಾಖಲೆಯನ್ನು ಅಪರಾಧದಲ್ಲಿ ಬಳಸುವುದು), 477–ಎ (ಬ್ಯಾಂಕ್‌ ಖಾತೆ ದುರುಪಯೋಗ) 34 (ಸಮಾನ ಉದ್ದೇಶ) ಮತ್ತು 120–ಬಿ (ಅಪರಾಧಿಕ ಪಿತೂರಿ) ಕಲಂಗಳ ಅಡಿಯಲ್ಲಿ ದಾಖಲಿಸಿಕೊಳ್ಳಲಾಗಿದೆ.

ಮುಖ್ಯಾಂಶಗಳು

* ರಾಜ್ಯ ವಕೀಲರ ಪರಿಷತ್‌ನ ಚುನಾಯಿತ ಸದಸ್ಯರ ಒಟ್ಟು ಸಂಖ್ಯೆ 25

* ಪದನಿಮಿತ್ತ ಸದಸ್ಯ ಅಡ್ವೊಕೇಟ್‌ ಜನರಲ್‌ ಸೇರಿ 26

* ಪ್ರತಿ ಐದು ವರ್ಷಕ್ಕೊಮ್ಮೆ ಚುನಾವಣೆ ನಡೆಯುತ್ತದೆ

‘ಪರಿಷತ್‌ಗೆ ಕೆಟ್ಟ ಹೆಸರು ತರುವ ಪ್ರಯತ್ನ’

‘ದೂರುದಾರರು ಕರ್ನಾಟಕ ರಾಜ್ಯ ವಕೀಲರ ಪರಿಷತ್‌ಗೆ ಕೆಟ್ಟ ಹೆಸರು ತರುವ ಪಯತ್ನದಲ್ಲಿ ತೊಡಗಿದ್ದಾರೆ‘ ಎಂದು ರಾಜ್ಯ ವಕೀಲರ ಪರಿಷತ್‌ ಅಧ್ಯಕ್ಷ ಎಚ್‌.ಎಲ್‌.ವಿಶಾಲ ರಘು ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದಾರೆ. 

‘ಪರಿಷತ್‌ ಪಾರದರ್ಶಕವಾಗಿದ್ದು, ಸಮ್ಮೇಳನದಲ್ಲಿ ಮಾಡಲಾಗಿರುವ ಖರ್ಚು ವೆಚ್ಚಗಳ ಲೆಕ್ಕವನ್ನು ಪರಿಷತ್‌ ಕಚೇರಿಯಲ್ಲಿ ಯಾರಾದರೂ ಬಂದು ಪರಿಶೀಲಿಸಬಹುದಾಗಿದೆ. ಆದರೆ, ಕೆಲವರು ಇಲ್ಲಸಲ್ಲದ ಆರೋಪಗಳನ್ನು ಮಾಡುವ ಮೂಲಕ ಪರಿಷತ್‌ನ ಘನತೆಗೆ ಕುಂದು ತರುವ ಕೆಲಸಕ್ಕೆ ಕೈಹಾಕಿದ್ದಾರೆ’ ಎಂದು ವಿಷಾದಿಸಿದ್ದಾರೆ.

‘ಇದೊಂದು ದುರದೃಷ್ಟಕರ ಬೆಳವಣಿಗೆ. ಪರಿಷತ್‌ನ ಅಧ್ಯಕ್ಷರು ಎಲ್ಲಾ ಸದಸ್ಯರ ಅನುಮತಿ ಪಡೆದೇ ₹ 50 ಲಕ್ಷ ಮೊತ್ತವನ್ನು ನಗದೀಕರಿಸಿಕೊಳ್ಳಲಾಗಿದೆ. ಸಮ್ಮೇಳನದಲ್ಲಿ ಕೆಲವು ಕಡೆ ನಗದು ರೂಪದಲ್ಲೇ ವ್ಯವಹರಿಸಬೇಕಾಗಿದ್ದ ಕಾರಣ ಕಾರ್ಯಕಾರಿ ಸಮಿತಿ ಒಪ್ಪಿಗೇ ಪಡೆದೇ ಈ ವಿಷಯದಲ್ಲಿ ಮುಂದುವರಿಯಲಾಗಿದೆ. 10 ವರ್ಷಗಳ ನಂತರ ನಡೆದ ಈ ಸಮ್ಮೇಳನದ ಯಶಸ್ಸನ್ನು ಸಹಿಸಲಾರದೆ ಇಂತಹ ಆರೋಪಗಳನ್ನು ಮಾಡುವ ಮೂಲಕ ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ನಡೆಸಲಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತನಿಖೆಗೆ ಬಿಸಿಐ ಸಮಿತಿ ನೇಮಕ

‘ಆರೋಪಗಳಿಗೆ ಸಂಬಂಧಿಸಿದಂತೆ ರಾಜ್ಯ ವಕೀಲರ ಪರಿಷತ್‌ನ ಮಾಜಿ ಅಧ್ಯಕ್ಷರೂ ಆದ ಧಾರವಾಡದ ಆನಂದ ಕುಮಾರ್ ಮಗದುಂ ಅವರು ಭಾರತೀಯ ವಕೀಲರ ಪರಿಷತ್‌ಗೆ (ಬಿಸಿಐ) ಸಲ್ಲಿಸಿದ್ದ ಮನವಿಯ ಮೇರೆಗೆ ಬಿಸಿಐ ಈಗಾಗಲೇ ಮೂವರ ಸಮಿತಿ ನೇಮಕ ಮಾಡಿದೆ’ ಎಂದು ರಾಜ್ಯ ವಕೀಲರ ಪರಿಷತ್‌ನ ಹಿರಿಯ ಸದಸ್ಯ ಎಸ್‌.ಹರೀಶ್‌ ಬುಧವಾರ ತಿಳಿಸಿದ್ದಾರೆ. 

‘ಬಿಸಿಐ ಕಾರ್ಯಕಾರಿ ಮಂಡಳಿಯ ಅಧ್ಯಕ್ಷರೂ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಅಪೂರ್ವ ಕುಮಾರ್ ಶರ್ಮಾ ಅವರ ನೇತೃತ್ವದ ಈ ಸಮಿತಿಯು ಇದೇ 12ರಂದು ರಾಜ್ಯ ವಕೀಲರ ಪರಿಷತ್‌ಗೆ ಪತ್ರವೊಂದನ್ನು ಕಳುಹಿಸಿದ್ದು, ಆರೋಪಗಳಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ತಂದೊಪ್ಪಿಸುವಂತೆ ರಾಜ್ಯ ಪರಿಷತ್‌ನ ಕಾರ್ಯರ್ಶಿಗೆ ನಿರ್ದೇಶಿಸಿದ್ದಾರೆ. ರಾಜ್ಯ ವಕೀಲರ ಪರಿಷತ್‌ ಘನತೆವೆತ್ತ ಸಾಂವಿಧಾನಿಕ ಸಂಸ್ಥೆಯಾಗಿದ್ದು, ವಿಚಾರಣೆ ಮುಗಿಯುವತನಕ ಪರಿಷತ್‌ ಸದಸ್ಯರು ಯಾರೂ ಈ ಕುರಿತು ಸಾರ್ವಜನಿಕ ವೇದಿಕೆಗಳಲ್ಲಿ ಚರ್ಚಿಸದಂತೆ ಬಿಸಿಐ ತಾಕೀತು ಮಾಡಿದೆ’ ಎಂದು ತಿಳಿಸಿದ್ದಾರೆ.

‘ಪರಿಷತ್‌ನ ಬಗ್ಗೆ ಬಹಿರಂಗವಾಗಿ ಆರೋಪ–ಪ್ರತ್ಯಾರೋಪಗಳನ್ನು ಮಾಡಿದರೆ ನಾವೇ ನಮ್ಮ ಮಾನ ಮರ್ಯಾದೆ ಹರಾಜಿಗೆ ಇಟ್ಟಂತಾಗುತ್ತದೆ. ವಿಚಾರಣೆ ಮುಗಿದ ಮೇಲೆ ಆರೋಪದಲ್ಲಿ ಹುರುಳಿಲ್ಲ ಎಂದಾದರೆ ಪರಿಷತ್‌ ಘನತೆಗೆ ಉಂಟಾದ ನಷ್ಟವನ್ನು ಕಟ್ಟಿಕೊಡುವವರು ಯಾರು’ ಎಂದು ಹರೀಶ್‌ ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.