ಬೆಂಗಳೂರು: ಒಡಿಶಾದ ಬಾಲಸೋರ್ ರೈಲ್ವೆ ನಿಲ್ದಾಣದಲ್ಲಿ ಸಂಭವಿಸಿರುವ ಅಪಘಾತದಿಂದ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿ ಪಶ್ಚಿಮ ಬಂಗಾಳದ ಹೌರಾದಲ್ಲಿ ಸಿಲುಕಿರುವ ರಾಜ್ಯದ 32 ಮಂದಿ ವಾಲಿಬಾಲ್ ಪಟುಗಳು ಮತ್ತು ತರಬೇತುದಾರರು ರಾಜ್ಯಕ್ಕೆ ಹಿಂದಿರುಗಲು ವಿಶೇಷ ವಿಮಾನದ ವ್ಯವಸ್ಥೆ ಮಾಡಲಾಗಿದೆ.
ಕೋಲ್ಕತ್ತಾದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಲು ರಾಜ್ಯದ ಪುರುಷರ ಹಾಗೂ ಮಹಿಳೆಯರ ವಾಲಿಬಾಲ್ ತಂಡಗಳ ಆಟಗಾರರು ತೆರಳಿದ್ದರು. ಅವರೊಂದಿಗೆ ತರಬೇತುದಾರರೂ ಇದ್ದರು. ಪಂದ್ಯಾವಳಿ ಮುಗಿದ ನಂತರ ರೈಲಿನಲ್ಲಿ ಬೆಂಗಳೂರಿನತ್ತ ಹೊರಟಿದ್ದರು. ಬಾಲಸೋರ್‌ನಲ್ಲಿ ರೈಲು ಅಪಫಾಗ ಸಂಭವಿಸಿದ ಬಳಿಕ ಉತ್ತರ ಭಾರತದಿಂದ ಬೆಂಗಳೂರಿಗೆ ರೈಲುಗಳ ಸಂಚಾರ ಬಹುತೇಕ ಸ್ಥಗಿತಗೊಂಡಿದೆ. ಇದರಿಂದಾಗಿ ವಾಲಿಬಾಲ್ ಪಟುಗಳು ಮತ್ತು ತರಬೇತುದಾರರು ಹೌರಾ ರೈಲು ನಿಲ್ದಾಣದಲ್ಲಿ ಸಿಲುಕಿದ್ದಾರೆ.
ರೈಲು ಅಪಘಾತದ ಸ್ಥಳದಲ್ಲಿ ಸಿಲುಕಿರುವ ಕನ್ನಡಿಗರನ್ನು ರಕ್ಷಿಸಿ, ಕರೆತರುವ ಕಾರ್ಯಾಚರಣೆಯ ನೇತೃತ್ವ ವಹಿಸಿರುವ ಕಾರ್ಮಿಕ ಸಚಿವ ಸಂತೋಷ್ ಲಾಡ್, ವಿಷಯ ತಿಳಿಯುತ್ತಿದ್ದಂತೆಯೇ ಕ್ರೀಡಾಪಟುಗಳನ್ನು ಸಂಪರ್ಕಿಸಿ ಮಾಹಿತಿ ಪಡೆದರು. ಎಲ್ಲರನ್ನೂ ಬೆಂಗಳೂರಿಗೆ ಕರೆತರಲು ವಿಶೇಷ ವಿಮಾನದ ವ್ಯವಸ್ಥೆ ಮಾಡಿದರು ಎಂದು ಮುಖ್ಯಮಂತ್ರಿಯವರ ಸಚಿವಾಲಯ ತಿಳಿಸಿದೆ.
ಭಾನುವಾರ ಬೆಳಿಗ್ಗೆ 4.15ಕ್ಕೆ ಕೋಲ್ಕತ್ತಾ ವಿಮಾನ ನಿಲ್ದಾಣದಿಂದ ಹೊರಡುವ ಇಂಡಿಗೋ ಏರ್ ವಿಮಾನ ಬೆಳಿಗ್ಗೆ 6.15ಕ್ಕೆ ಬೆಂಗಳೂರು ತಲುಪಲಿದೆ. ಕ್ರೀಡಾಪಟುಗಳು ಮತ್ತು ತರಬೇತುದಾರರು ಬೆಂಗಳೂರು ತಲುಪುವವರೆಗೂ ಎಲ್ಲ ವ್ಯವಸ್ಥೆಯನ್ನು ಸರ್ಕಾರ ನೋಡಿಕೊಳ್ಳಲಿದೆ ಎಂದು ಸಚಿವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.